ADVERTISEMENT

ಬಸವಕಲ್ಯಾಣ: ಬಸವಧರ್ಮ ಪೀಠದ ವಿರುದ್ಧ ಪರ್ಯಾಯ ‘ಕಲ್ಯಾಣ ಪರ್ವ’

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 3:05 IST
Last Updated 5 ಅಕ್ಟೋಬರ್ 2025, 3:05 IST
ಬಸವಕಲ್ಯಾಣದಲ್ಲಿ ಶನಿವಾರ ಸ್ವಾಭಿಮಾನಿ ಕಲ್ಯಾಣ ಪರ್ವ ಕಾರ್ಯಕ್ರಮ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಬಸವರಾಜ ಪಾಟೀಲ ಶಿವಪುರ ಅವರನ್ನು ಚನ್ನಬಸವಾನಂದ ಸ್ವಾಮೀಜಿ ಸನ್ಮಾನಿಸಿದರು
ಬಸವಕಲ್ಯಾಣದಲ್ಲಿ ಶನಿವಾರ ಸ್ವಾಭಿಮಾನಿ ಕಲ್ಯಾಣ ಪರ್ವ ಕಾರ್ಯಕ್ರಮ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಬಸವರಾಜ ಪಾಟೀಲ ಶಿವಪುರ ಅವರನ್ನು ಚನ್ನಬಸವಾನಂದ ಸ್ವಾಮೀಜಿ ಸನ್ಮಾನಿಸಿದರು   

ಬಸವಕಲ್ಯಾಣ: ‘ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿಯವರ ನೇತೃತ್ವದಲ್ಲಿ ನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಲಿಂ. ಮಾತೆ ಮಹಾದೇವಿ ಅವರ ನಿಷ್ಠಾವಂತರಿಂದ ಪರ್ಯಾಯವಾಗಿ 4ನೇ ವರ್ಷದ ‘ಸ್ವಾಭಿಮಾನಿ ಕಲ್ಯಾಣ ಪರ್ವ’ ಆಯೋಜಿಸಲಾಗಿದೆ’ ಎಂದು ರಾಷ್ಟ್ರೀಯ ಬಸವದಳದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನಾನೊಬ್ಬನೇ ಮೊದಲಿನಿಂದಲೂ ಲಿಂ. ಮಾತೆ ಮಹಾದೇವಿ ಅವರ ಜೊತೆಗಿದ್ದವನು. ಇಲ್ಲಿನ 108 ಅಡಿ ಎತ್ತರದ ಬಸವಣ್ಣನವರ ಪುತ್ಥಳಿಗಾಗಿ ಜಮೀನು ಖರೀದಿಸುವುದಕ್ಕೆ ಸಹಕರಿಸಿದ್ದೇನೆ. 2001ರಿಂದ ಕಲ್ಯಾಣ ಪರ್ವದ ಆಯೋಜನೆಗೆ ಸಹಕರಿಸಿದ್ದೇನೆ. ಇಲ್ಲಿನ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಹಲವಾರು ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿವೆ. ನನ್ನನ್ನು ಹಾಗೂ ಬಸವತತ್ವ ನಿಷ್ಠರು, ಅನುಭವಿ ಮತ್ತು ಸಂಘಟನಾ ಚತುರರಾದ ಚನ್ನಬಸವಾನಂದ ಸ್ವಾಮೀಜಿ ಹಾಗೂ ಹಿರಿಯರಾದ ಶಿವರಾಜ ಪಾಟೀಲ ಅತಿವಾಳ ಅವರನ್ನು ಬಸವಧರ್ಮ ಪೀಠ ಸಂಸ್ಥೆಯಿಂದ ಹೊರಗಿಟ್ಟು ಅನ್ಯಾಯ ಮಾಡಿದ್ದಾರೆ’ ಎಂದು ಹೇಳಿದರು.

‘ನಾವು ಅವರ ವಿರುದ್ಧ 3 ಸ್ವಾಭಿಮಾನಿ ಕಲ್ಯಾಣ ಪರ್ವ ನಡೆಸಿದೆವು. ನ್ಯಾಯಾಲಯದಲ್ಲೂ ಜಯ ಸಿಕ್ಕಿದೆ. ಆದರೂ, ನಮಗೆ ಸಂಸ್ಥೆಯೊಳಗೆ ಸೇರಿಕೊಳ್ಳಲು ಆಗದಂತೆ ನಿಯಮಗಳನ್ನು ತಿದ್ದುಪಡಿಗೊಳಿಸಿದ್ದಾರೆ. ಮಾತೆ ಮಹಾದೇವಿ ಇರುವವರೆಗೆ ಭಾಲ್ಕಿ ಬಸವಲಿಂಗ ಪಟ್ಟದ್ದೇವರನ್ನು ಒಂದು ಸಲವೂ ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ. ಈಗ ಅವರ ಮತ್ತು ಸಿದ್ರಾಮೇಶ್ವರ ಸ್ವಾಮೀಜಿ ಅವರ ಮಾತು ಕೇಳಿ ನಮ್ಮನ್ನು ದೂರ ಇಡಲಾಗುತ್ತಿದೆ. ನಿಷ್ಕ್ರಿಯರಾಗಿರುವ ಮಾತೆ ಗಂಗಾದೇವಿಯವರು ಪೀಠದಿಂದ ನಿರ್ಗಮಿಸುವವರೆಗೆ ನಮ್ಮ ವಿರೋಧ ಮುಂದುವರಿಯಲಿದೆ’ ಎಂದು ಹೇಳಿದರು.

ADVERTISEMENT

ಚನ್ನಬಸವಾನಂದ ಸ್ವಾಮೀಜಿ ಮಾತನಾಡಿದರು. ಲಿಂಗಾಯತಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ಲಿಂಗಾಯತ ಸಮಾಜ ಸಂಘದ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಜೇಲರ್, ರಾಷ್ಟ್ರೀಯ ಬಸವದಳದ ಗೌರವ ಅಧ್ಯಕ್ಷ ಬಸವಂತರಾವ್ ಬಿರಾದಾರ ಉಪಸ್ಥಿತರಿದ್ದರು.

ಅ. 11, 12ರಂದು ಕಾರ್ಯಕ್ರಮ

ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ‘ಸ್ವಾಭಿಮಾನಿ ಕಲ್ಯಾಣ ಪರ್ವವು ಅ. 11 ಮತ್ತು 12ರಂದು ನಗರದ ಎಂ.ಎಂ. ಬೇಗ್ ಸಭಾಂಗಣದಲ್ಲಿ ನಡೆಯಲಿದ್ದು ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ. ರಾಜ್ಯ ಹಾಗೂ ಮಹಾರಾಷ್ಟ್ರ ತೆಲಂಗಾಣ ಆಂಧ್ರ ಪ್ರದೇಶದ ಭಕ್ತರು ಪಾಲ್ಗೊಳ್ಳುವರು. ಎಲ್ಲರಿಗೂ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಬಸವರಾಜ ಪಾಟೀಲ ಶಿವಪುರ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಸವರಾಜ ಸಂಗಮದ ಬೀದರ್ ದಾಸೋಹ ಸಮಿತಿ ಅಧ್ಯಕ್ಷರನ್ನಾಗಿ ಸುರೇಶ ಪಾಟೀಲ ಹಾರೂರಗೇರಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಕಾಶಿನಾಥ ಪಾಟೀಲ ಸಿಕನಪುರ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಸಂಜೀವಕುಮಾರ ಸೋನಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ವ್ಯಾಪಾರಿ ಮನೋಭಾವದವರು ‘ಮಾತೆ ಮಹಾದೇವಿಯವರು ಜೀವಂತ ಇದ್ದಿದ್ದರೆ ನಗರದಲ್ಲಿ ರಂಭಾಪುರಿ ಪೀಠಾಧ್ಯಕ್ಷರ ದಸರಾ ಧರ್ಮ ಸಮ್ಮೇಳನ ನಡೆಸಲು ಬಿಡುತ್ತಿರಲಿಲ್ಲ. ಭಾಲ್ಕಿ ಸ್ವಾಮೀಜಿಯವರು ಅದರ ವಿರೋಧಕ್ಕಾಗಿ ಸಭೆ ಅಯೋಜಿಸುವ ದಿನ ನಿಗದಿಪಡಿಸಿ ನಂತರ ರದ್ದುಪಡಿಸಿದರು. ನಮ್ಮನ್ನೂ ವಿರೋಧಿಸಲು ಬಿಡಲಿಲ್ಲ. ಭಾಲ್ಕಿ ಸ್ವಾಮೀಜಿಯವರು ವ್ಯಾಪಾರಿ ಮನೋಭಾವದವರು. ಅವರ ಮಾತಿನಿಂದ ಸಂಸ್ಥೆ ಹಾಳಾಗುವುದನ್ನು ತಡೆಯಬೇಕಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.