ಬೀದರ್: ‘ಕನಕದಾಸರು ಕೇವಲ ದೇವರ ಭಕ್ತಿಗೆ ಸೀಮಿತವಾಗಿರಲಿಲ್ಲ. ಅವರ ವಿಚಾರಗಳು ತಳಸಮುದಾಯದ ಪರ ಎತ್ತಿದ ಗಟ್ಟಿ ಧ್ವನಿಯಾಗಿದೆ’ ಎಂದು ಸಾಹಿತಿ ಎಸ್.ಎಂ.ಜನವಾಡಕರ್ ಹೇಳಿದರು.
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ್ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಕನಕ ಸಂಸ್ಕೃತಿ ಸಂಚಲನ, ಕನಕ ನಡೆ ನುಡಿ ಉತ್ಸವ’ ಉದ್ಘಾಟಿಸಿ ಮಾತನಾಡಿದರು.
ಕನಕದಾಸರ ಒಳನೋಟದಲ್ಲಿ ನಮ್ಮ ಸಮಾಜದ ದುರವಸ್ಥೆಗಳನ್ನು ನೈತಿಕ ಪಾಠಗಳ ಮೂಲಕ ಜನರ ಹೃದಯದಲ್ಲಿ ಬದಲಾವಣೆಯ ಬೀಜ ಬಿತ್ತಿದರು ಎಂದರು.
ಯುವ ಜನತೆ ಕನಕದಾಸರ ಆದರ್ಶಮಯ ಜೀವನ ಶೈಲಿ ಮತ್ತು ಆಚಾರ ವಿಚಾರಗಳಿಂದ ಪ್ರೇರಣೆ ಪಡೆಯಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕಾಲೇಜು ಹಂತದಲ್ಲಿ ಆಯೋಜಿಸಲಾಗಿದೆ ಎಂದು ಸಂತ ಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರದ ಸಂಚಾಲಕ ಸಂಜೀವಕುಮಾರ ಅತಿವಾಳೆ ತಿಳಿಸಿದರು.
ಕನಕದಾಸರು ತಮ್ಮ ಕಾವ್ಯಗಳ ಮೂಲಕ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ವಿಸ್ತಾರಗೊಳಿಸಿದ್ದಾರೆ. ಅವರ ತತ್ವಪದಗಳು ನಾಡಿನ ಸಂಸ್ಕೃತಿಯ ಆಳವಾದ ಪ್ರತಿಬಿಂಬವಾಗಿವೆ. ಇಂತಹ ಮಹಾನ್ ವ್ಯಕ್ತಿಯ ಆಲೋಚನೆಗಳು ಮುಂದಿನ ಪೀಳಿಗೆಗೆ ತಲುಪಬೇಕಾದ ಅಗತ್ಯವಿದೆ ಎಂದರು.
ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಶರಣಪ್ಪ ಮಲಗೊಂಡ ಮಾತನಾಡಿ,‘ದಾಸರ ಚಾರಿತ್ರ‍್ಯ ಮತ್ತು ಸಂಸ್ಕಾರಗಳನ್ನು ನಾವೆಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಅವಶ್ಯಕವಾಗಿದೆ. ಅವರು ಬೋಧಿಸಿದ ಮೌಲ್ಯಗಳು ನೈತಿಕ ಬದುಕಿಗೆ ದಾರಿದೀಪದಂತಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಶಂಕರ್ ಗಣಗೊಂಡ ಮಾತನಾಡಿ,‘ಸಮಾಜದಲ್ಲಿ ಜಾತಿ ಜಾತಿ ಎಂದು ವಿಭಜನೆಗೊಂಡು ಹೊಡೆದಾಡುವುದಕ್ಕಿಂತ, ನಾವೆಲ್ಲರೂ ಮನುಷ್ಯತ್ವ ಹೊಂದಿದ ಮನುಷ್ಯರೆಂಬ ಅರಿವಿನಿಂದ ನಡೆಯಬೇಕು. ಅಂದಾಗ ಮಾತ್ರ ನಮ್ಮ ಬದುಕು ನಿಜವಾದ ಅರ್ಥವನ್ನು ಪಡೆಯುತ್ತದೆ’ ಎಂದು ತಿಳಿಸಿದರು.
ಡಾ. ಅಲ್ಲೂರೆ, ನಿವೃತ್ತ ಉಪನ್ಯಾಸಕ ಉಮಾಕಾಂತ ಮೀಸೆ, ಲೇಖಕ ಬಿ.ಎಂ.ಅಮರವಾಡಿ, ಸತ್ಯನಾರಾಯಣ ಇದ್ದರು.
ಕನಕ ಯುವ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ರವೀಂದ್ರ ಲಂಜವಾಡಕರ್ ಅವರನ್ನು ಸನ್ಮಾನಿಸಲಾಯಿತು. ರಾಜಕುಮಾರ ಅಲ್ಲೂರೆ ಸ್ವಾಗತಿಸಿದರು. ಲಕ್ಷಣ ಮೇತ್ರೆ ನಿರೂಪಿಸಿದರು. ಭೀಮಶಾ ಬರಗಾಲ ವಂದಿಸಿದರು.
ಕನಕ ಸಂಸ್ಕೃತಿ ಸಂಚಲನ ಪ್ರತಿಭಾ ಸ್ಪರ್ಧೆಯಲ್ಲಿ ಕನಕ ಕಾವ್ಯ ಓದು, ವ್ಯಾಖ್ಯಾನ ಗಾಯನ, ರಸಪ್ರಶ್ನೆಯಲ್ಲಿ ಭಾಗವಹಿಸಿದ ವಿವಿಧ ಕಾಲೇಜುಗಳ 72 ಜನ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.