ಔರಾದ್: ‘ಗಡಿಯಲ್ಲಿ ಕನ್ನಡ ಉಳಿಸಿ, ಬೆಳೆಸಲು ಎಲ್ಲರ ಸಹಕಾರ ಅಗತ್ಯ’ ಎಂದು ಹಿರಿಯ ಸಾಹಿತಿ ಮಾಣಿಕ ನೇಳಗೆ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಔರಾದ್ ತಾಲ್ಲೂಕು ಮೂರು ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಆದರೆ ಇಲ್ಲಿ ಕನ್ನಡಕ್ಕೆ ಎಂದೂ ಕುತ್ತು ಬಂದಿಲ್ಲ. ಬದಲಿಗೆ ಅನ್ಯ ಭಾಷಿಕರು ಇಲ್ಲಿ ಕನ್ನಡ ಕಟ್ಟಲು ನಮ್ಮ ಜತೆ ಕೈಜೋಡಿಸಿದ್ದಾರೆ. ಅವರೂ ಕನ್ನಡ ಕಲಿಯುತ್ತಿದ್ದಾರೆ. ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸುತ್ತಿದ್ದಾರೆ’ ಎಂದು ಹೇಳಿದರು.
‘ಕನ್ನಡದ ಆದಿಕವಿ ಪಂಪ, ಪೊನ್ನ, ರನ್ನ ಸೇರಿದಂತೆ ಅನೇಕ ಕವಿಗಳು ಕಾವ್ಯಧರ್ಮವನ್ನು ಮರೆತವರಿಲ್ಲ. ಅವರ ವಿಚಾರಗಳು ಇಂದಿಗೂ ಜನರನ್ನು ಆಕರ್ಷಿಸುವಲ್ಲಿ ಮಹತ್ತರ ಸ್ಥಾನ ಪಡೆದಿವೆ. ಬಳಿಕ ವಚನಕಾರರು, ಕೀರ್ತನಕಾರರು, ದಲಿತಕವಿಗಳು, ಬಂಡಾಯ ಸಾಹಿತಿಗಳು ಸ್ವಾತಂತ್ರ‍್ಯ ವಿಚಾರಗಳು ವ್ಯಕ್ತಪಡಿಸಿದ್ದು ವಿಶಿಷ್ಟವಾಗಿದೆ’ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ಮಾತನಾಡಿ, ‘ಪ್ರಸ್ತುತ ಜನಮಾನಸದಲ್ಲಿ ಆಂಗ್ಲ ವ್ಯಾಮೋಹ ಹೆಚ್ಚಾಗಿದ್ದು ಮೌಲ್ಯಗಳ ಅಧಃಪತನ ಶುರುವಾಗಿದೆ. ನಾವುಗಳು ಪುನಃ ಕನ್ನಡದ ಕಡೆಗೆ ಮುಖ ಮಾಡುವ ದಿನಗಳು ದೂರವಿಲ್ಲ’ ಎಂದು ತಿಳಿಸಿದರು.
ಪ್ರಕಾಶ ದೇಶಮುಖ, ಸೂರ್ಯಕಾಂತ, ಪಂಡರಿ ಆಡೆ, ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿದರು. ಶಿವಾನಂದ ಸ್ವಾಮಿ, ಎಂಡಿ ನಯೀಮ್, ರಂಜೀತ ಸಿಂಧೆ, ರಮೇಶ ಪಾಂಚಾಳ, ಸವಿತಾ ಮೀಸೆ, ಶಿಲ್ಪಾ ರಾಜೋಳೆ, ನಾಗೇಂದ್ರ ಚಿಟಗಿರೆ, ಪ್ರಕಾಶ ಬರ್ದಾಪೂರೆ, ವಿರೇಶ ಅಲಮಾಜೆ ಕವನ ವಾಚನ ಮಾಡಿದರು.
ಸಾಧಕರಿಗೆ ಸನ್ಮಾನ: ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ದತ್ತಾತ್ರಿ ಗಿರಿ, ಮಹಾದೇವ ಭಾಲೇಕರ್, ಸಂಜೀವ ಬಿರಾದಾರ್, ಗುಣವಂತ ಬಿರಾದಾರ್, ಕೈಲಾಸಪತಿ ಕೇದಾರೆ ರಾಜ್ಯ ಮಟ್ಟದ ಶಿಕ್ಷಣರತ್ನ ಪ್ರಶಸ್ತಿ ಪುರಸ್ಕೃತ ರವೀಂದ್ರ ಡಿಗ್ಗಿ, ಪೀರಪ್ಪ ಉಜನೀಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಮರ ಸ್ವಾಮಿ, ಜಗನ್ನಾಥ ಮೂಲಗೆ, ಸಂದೀಪ ಪಾಟೀಲ್, ಅಂಬಾದಾಸ ನಳಗೆ, ಗೋವಿಂದ ಪಾಟೀಲ್, ಮಹಾದೇವ ಘುಳೆ, ಗಜಾನನ ಮಳ್ಳಾ, ಅಶೋಕ ಅಲ್ಮಾಜೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.