ADVERTISEMENT

ಬೀದರ್‌ | ಚುನಾವಣೆ: ಮುಖಂಡರ ಮನೆ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 14:25 IST
Last Updated 18 ಮಾರ್ಚ್ 2023, 14:25 IST
ಬೀದರ್‌ನ ಪೊಲೀಸ್‌ ಮುಖ್ಯಾಲಯದ ಆವರಣದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್‌.ಎಲ್. ಅವರು 12 ಸಂಚಾರಿ ಬೈಕ್‌ ಬಿಡುಗಡೆ ಮಾಡಿದರು
ಬೀದರ್‌ನ ಪೊಲೀಸ್‌ ಮುಖ್ಯಾಲಯದ ಆವರಣದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್‌.ಎಲ್. ಅವರು 12 ಸಂಚಾರಿ ಬೈಕ್‌ ಬಿಡುಗಡೆ ಮಾಡಿದರು   

ಬೀದರ್‌: ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ ಒಂದಿಲ್ಲೊಂದು ಚಟುವಟಿಕೆ ನಡೆಸುತ್ತಿರುವ ಕಾಂಗ್ರೆಸ್‌ ಮುಖಂಡ ಮನ್ನಾನ್‌ ಸೇಠ್ ಅವರ ನಗರದ ಮನೆಯ ಮೇಲೆ ಪೊಲೀಸ್‌ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್‌.ಎಲ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್, ಡಿವೈಎಸ್‌ಪಿ ಸತೀಶ್ ನೇತೃತ್ವದ ತಂಡ ಶನಿವಾರ ಬೆಳಗಿನ ಜಾವ ಓಲ್ಡ್‌ಸಿಟಿಯಲ್ಲಿ ಇರುವ ಮನೆ ಮೇಲೆ ದಾಳಿ ನಡೆಸಿ ಕೆಲ ಸಾಮಗ್ರಿ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಬೀದರ್‌ ಉಪ ವಿಭಾಗಾಧಿಕಾರಿ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ದೊರಕಿರುವ ಸಾಮಗ್ರಿಗಳು ಹಾಗೂ ಇನ್ನಿತರ ಅಂಶಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ADVERTISEMENT

ಮನ್ನಾನ್‌ ಸೇಠ್ ಅವರು ಬೀದರ್‌ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರೀಯವಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಹಲವು ಸಾಮಾಜಿಕ ಚಟುವಟಿಕೆ ನಡೆಸಿದ್ದರಿಂದ ಪೊಲೀಸರು ಅವರ ಮೇಲೆ ನಿಗಾ ಇಟ್ಟಿದ್ದರು.

ಕಾನೂನು ಬಾಹಿರ ಚಟುವಟಿಕೆ: ಇಬ್ಬರು ವಶಕ್ಕೆ

ನಗರದ ಮಾಂಗರವಾಡಿಯಲ್ಲಿರುವ ರೌಡಿ ಶೀಟರ್‌ಗಳ ಮನೆಗಳ ಮೇಲೂ ಪೊಲೀಸರು ದಾಳಿ ನಡೆಸಿ ಮತ್ತುಬರಿಸುವ ಮಾತ್ರೆಗಳನ್ನು ವಶಪಡಿಸಿಕೊಂಡು, ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ 27 ಜನರನ್ನು ವಿಧಾನಸಭೆ ಚುನಾವಣೆ ಪೂರ್ವದಲ್ಲೇ ಗಡಿಪಾರು ಮಾಡಲು ಜಿಲ್ಲಾ ನ್ಯಾಯಿಕ ದಂಡಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.

12 ಬೈಕ್‌ಗಳಿಗೆ ಚಾಲನೆ

ಬೀದರ್‌ ಜಿಲ್ಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಅನುಕೂಲವಾಗುವಂತೆ ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ಇಡಲು 12 ಸಂಚಾರಿ ಬೈಕ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಜಿಲ್ಲಾ ಪೊಲೀಸ್‌ ಮುಖ್ಯಾಲಯದ ಆವರಣದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್. ಬೈಕ್‌ಗಳಿಗೆ ಚಾಲನೆ ನೀಡಿದರು.

ಬೈಕ್‌ಗಳಿಗೆ ಹೊಸದಾಗಿ ಸೈರನ್. ಕೆಂಪು–ನೀಲಿ ದೀಪ ಅಳವಡಿಸಲಾಗಿದೆ. ಸಂಚಾರ ಒತ್ತಡ ಕಡಿಮೆ ಮಾಡಲು ಈ ದ್ವಿಚಕ್ರ ವಾಹನಗಳು ತ್ವರಿತವಾಗಿ ಸ್ಥಳಕ್ಕೆ ತೆರಳಲಿವೆ.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್, ಡಿವೈಎಸ್‌ಪಿ ಸತೀಶ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಶಿವಾನಂದ ಪಟ್ಟಣ, ಸಂಚಾರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್ ಕಪಿಲದೇವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.