ADVERTISEMENT

ವೀರಶೈವ ಲಿಂಗಾಯತ ಅವೈಜ್ಞಾನಿಕ ಪದ: ಬಸವರಾಜ ಧನ್ನೂರ

ಜೀವನ ಪದ್ಧತಿಯಿಂದ ಹಿಂದೂಗಳು; ಧರ್ಮ ಲಿಂಗಾಯತ–ಜಾಗತಿಕ ಲಿಂಗಾಯತ ಮಹಾಸಭಾ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 9:19 IST
Last Updated 20 ಸೆಪ್ಟೆಂಬರ್ 2025, 9:19 IST
<div class="paragraphs"><p>ಪತ್ರಿಕಾಗೋಷ್ಠಿಯಲ್ಲಿ&nbsp;ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿದರು</p></div>

ಪತ್ರಿಕಾಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿದರು

   

ಬೀದರ್‌: ‘ವೀರಶೈವ ಲಿಂಗಾಯತ ಪದ ಅವೈಜ್ಞಾನಿಕವಾದುದು. ಇಡೀ ವಚನ ಸಾಹಿತ್ಯದಲ್ಲಿ ಎಲ್ಲೂ ಸಹ ವೀರಶೈವ ಲಿಂಗಾಯತ ಪದ ಬಳಸಿಲ್ಲ. ವೀರಶೈವ ಎಂಬ ಪದ ಸೃಷ್ಟಿಸಿರುವಂತಹದ್ದು. ವೀರಶೈವ ಎನ್ನುವುದು ಲಿಂಗಾಯತ ಧರ್ಮದ ಒಂದು ಒಳಪಂಗಡ’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶ ಭಾರತ, ರಾಜ್ಯ ವೆಂದರೆ ಕರ್ನಾಟಕ ಹೇಗೋ ಅದೇ ರೀತಿ ಲಿಂಗಾಯತರ ಧರ್ಮ ಲಿಂಗಾಯತ, ಒಳಪಂಗಡದಲ್ಲಿ ಏನಿದೆಯೋ ಅದನ್ನು ಬರೆಸಬೇಕು. ಆದರೆ, ಯಾವುದೇ ಕಾರಣಕ್ಕೂ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂಬುದಾಗಿ ಬರೆಸಬಾರದು ಎಂದು ಮನವಿ ಮಾಡಿದರು.

ADVERTISEMENT

ಸೆ. 22ರಿಂದ ಆರಂಭವಾಗಲಿರುವ ಸಮೀಕ್ಷೆಯಲ್ಲಿ ಲಿಂಗಾಯತರು ಧರ್ಮದ ಇತರೆ ಕಾಲಂನಲ್ಲಿ ಲಿಂಗಾಯತ ಧರ್ಮ, ಜಾತಿಯ ಕಾಲಂನಲ್ಲಿ ಲಿಂಗಾಯತ ಬಣಜಿಗ, ಲಿಂಗಾಯತ ಪಂಚಮಸಾಲಿ, ಲಿಂಗಾಯತ ಕುಂಬಾರ, ಲಿಂಗಾಯತ ಹಡಪದ ಸೇರಿದಂತೆ ಇತರೆ ಹೆಸರುಗಳನ್ನು ಬರೆಸಬಹುದು. ಲಿಂಗಾಯತದಲ್ಲಿ ಒಟ್ಟು 97 ಒಳಪಂಗಡಗಳಿವೆ ಎಂದು ತಿಳಿಸಿದರು.

ಲಿಂಗಾಯತ ಸ್ವತಂತ್ರ ಧರ್ಮ ಎನ್ನುವುದಕ್ಕೆ ಅನೇಕ ಸಾಕ್ಷ್ಯಾಧಾರಗಳಿವೆ. 1871ರ ಜನಗಣತಿ ಸಂದರ್ಭದ ದಾಖಲಾತಿ ನೋಡಿದರೆ ಗೊತ್ತಾಗುತ್ತದೆ. ಹಿಂದೂ ಎನ್ನುವುದರ ಬಗ್ಗೆ ಅಭಿಮಾನ ಇದೆ. ಜೈನರು, ಬೌದ್ಧರು, ಕ್ರೈಸ್ತರು, ಸಿಖ್ಖರು ಭೌಗೋಳಿಕವಾಗಿ, ಜೀವನಪದ್ಧತಿಯಾಗಿ ಹಿಂದೂಗಳು. ಆದರೆ, ಅವರು ಅವರ ಧರ್ಮದ ಕಾಲಂನಲ್ಲಿ ಅವರ ಹೆಸರುಗಳನ್ನು ಬರೆಸುತ್ತಾರೆ. ಅದೇ ರೀತಿ ಲಿಂಗಾಯತರು ಕೂಡ ಲಿಂಗಾಯತ ಎಂದು ಬರೆಸಬೇಕು. ದೇಶದಲ್ಲಿ ಆರು ಧರ್ಮಗಳಿಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿದೆ. ಲಿಂಗಾಯತಕ್ಕೆ ಇನ್ನೂ ಮಾನ್ಯತೆ ಸಿಕ್ಕಿಲ್ಲ ಎಂದರು.

ಬಸವಕಲ್ಯಾಣದ ಬಸವ ಮಹಾಮನೆಯ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಬಸವ ಧರ್ಮ ಪೀಠ, ರಾಷ್ಟ್ರೀಯ ಬಸವ ದಳ ಆರಂಭದಿಂದಲೂ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಶ್ರಮಿಸುತ್ತಿದೆ. ಅದರ ಬಗ್ಗೆ ಜಾಗೃತಿ ಮೂಡಿಸಿ ಗೊಂದಲಗಳಿಗೆ ತೆರೆ ಎಳೆದಿದೆ. ಯಾವುದಕ್ಕೂ ಕಿವಿಗೊಡದೆ ಲಿಂಗಾಯತರು ಲಿಂಗಾಯತ ಧರ್ಮ ಎಂದು ಸಮೀಕ್ಷೆಯಲ್ಲಿ ಬರೆಸಬೇಕು ಎಂದು ಹೇಳಿದರು.

ಯುವ ಮುಖಂಡ ಬಸವರಾಜ ಭತಮುರ್ಗೆ ಮಾತನಾಡಿ, ನಮ್ಮ ಒಡಕಿನಿಂದ ಲಿಂಗಾಯತಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ಸಿಕ್ಕಿಲ್ಲ. ಇದರಿಂದ ನಮ್ಮ ಮಕ್ಕಳಿಗೆ ಸಮಸ್ಯೆ ಆಗುತ್ತಿದೆ ಎಂದರು.

ಬಸವಕಲ್ಯಾಣ ಅನುಭವ ಮಂಟಪದ ಶಿವಾನಂದ ಸ್ವಾಮೀಜಿ, ಭಾಲ್ಕಿ ಹಿರೇಮಠದ ಮಹಾಲಿಂಗ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಉಷಾ ಮಿರ್ಚೆ, ಸುವರ್ಣಾ ಧನ್ನೂರ, ವೀರಭದ್ರಪ್ಪ ಭುಯ್ಯಾ, ಯೋಗೇಂದ್ರ ಯದಲಾಪೂರೆ ಇದ್ದರು.

ವೀರಶೈವ ಪದದ ವಿರುದ್ಧ ಮೊಕದ್ದಮೆ

‘2002ನೇ ಇಸ್ವಿಗೂ ಮುಂಚೆ ಲಿಂಗಾಯತರ ಶಾಲಾ ದಾಖಲಾತಿಗಳಲ್ಲಿ ಲಿಂಗಾಯತ ಎಂದಷ್ಟೇ ಇದೆ. ಎಸ್‌. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವರ ದಾಖಲಾತಿಗಳಲ್ಲಿ ಲಿಂಗಾಯತ ಎಂದಷ್ಟೇ ಇದೆ’ ಎಂದು ಬಸವರಾಜ ಧನ್ನೂರ ಹೇಳಿದರು.

‘ಎಸ್‌.ಎಂ. ಕೃಷ್ಣ ಸರ್ಕಾರದಲ್ಲಿ ದಾಖಲಾತಿ ಕಂಪ್ಯೂಟರೀಕರಣ ಆದಾಗ ಉದ್ದೇಶಪೂರ್ವಕವಾಗಿ ವೀರಶೈವ ಪದ ಸೇರಿಸಲಾಗಿದೆ. ಇದರ ವಿರುದ್ಧ ಜಾಗತಿಕ ಲಿಂಗಾಯತ ಮಹಾಸಭಾ ಈಗಾಗಲೇ ಕೋರ್ಟ್‌ ಮೆಟ್ಟಿಲೇರಿ ಮೊಕದ್ದಮೆ ದಾಖಲಿಸಿದೆ’ ಎಂದು ತಿಳಿಸಿದರು.

‘ವೀರಶೈವ ಮಹಾಸಭಾ ಗೊಂದಲ ಸೃಷ್ಟಿ’

‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದವರು ದಾವಣಗೆರೆಯಲ್ಲಿ ನಡೆಸಿದ ಸಮಾವೇಶದಲ್ಲಿ ನಾವು ಭೌಗೋಳಿಕವಾಗಿ ಹಿಂದೂಗಳಾದರೂ ನಾವು ಹಿಂದೂಗಳಲ್ಲ. ವೀರಶೈವ ಲಿಂಗಾಯತರು ಎಂದು ಹೇಳಿದ್ದರು. ಈಗ ಆತ್ಮಸಾಕ್ಷಿಗೆ ಅನುಗುಣವಾಗಿ ಏನಾದರೂ ಬರೆಸಿ ಎನ್ನುತ್ತಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾಗುತ್ತಿದೆ. ಈ ರೀತಿಯ ಗೊಂದಲಗಳಿಗೆ ತೆರೆ ಎಳೆಯಲು ಜಾಗತಿಕ ಲಿಂಗಾಯತ ಮಹಾಸಭಾ ಇತರೆ ಸಂಘಟನೆಗಳೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಿದೆ ಬಸವರಾಜ ಧನ್ನೂರ ತಿಳಿಸಿದರು.

ಲಿಂಗಾಯತದ ಕೆಲ ಒಳಪಂಗಡದವರು ಕೇಂದ್ರದ ಮೀಸಲಾತಿ ಸೌಲಭ್ಯ ದಕ್ಕುವುದಿಲ್ಲ ಎಂಬ ಕಾರಣಕ್ಕಾಗಿ ಧರ್ಮದ ಕಾಲಂನಲ್ಲಿ ಹಿಂದೂ ಬರೆಸುವಂತೆ ಹೇಳುತ್ತಿದ್ದಾರೆ. ಆದರೆ, ಲಿಂಗಾಯತ ಕುಂಬಾರ, ಲಿಂಗಾಯತ ಹಡಪದ, ಲಿಂಗಾಯತ ಮಡಿವಾಳ ಬರೆಸಿದರೆ ಮೀಸಲಾತಿ ಸೌಲಭ್ಯ ತಪ್ಪುವುದಿಲ್ಲ ಎಂದರು.

‘ಇದು ಮೀಸಲಾತಿ ನೀಡುವ ಸಮೀಕ್ಷೆಯಲ್ಲ. ಸಾಮಾಜಿಕ, ಆರ್ಥಿಕ ಸ್ಥಿತಿಗತಿ ತಿಳಿಯುವ ಸಮೀಕ್ಷೆ. ಯಾರು ಕೂಡ ಇದರ ಬಗ್ಗೆ ವಿಚಲಿತರಾಗುವ ಅಗತ್ಯವಿಲ್ಲ. ಸತ್ಯ ಬರೆಸಬೇಕು. ರಾಜಕಾರಣಿಗಳ ಮಾತು ಕೇಳಬೇಡಿ. ಬಸವಣ್ಣನವರು ಎಲ್ಲರನ್ನೂ ಒಳಗೊಂಡ ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ’ ಎಂದು ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಹೇಳಿದರು.
-ಜತ್ತಿ, ಖಂಡ್ರೆ ದಾಖಲಾತಿಯಲ್ಲಿ ಲಿಂಗಾಯತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.