ADVERTISEMENT

ಕಸಾಪ ಏಷ್ಯಾದ ದೊಡ್ಡ ಸಾಹಿತ್ಯಿಕ ಸಂಸ್ಥೆ

106ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಸುರೇಶ ಚನಶೆಟ್ಟಿ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಮೇ 2020, 10:22 IST
Last Updated 7 ಮೇ 2020, 10:22 IST
ಬೀದರ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು
ಬೀದರ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು   

: ಜಾಗತಿಕರಣದ ಯಾವುದೇ ಒತ್ತಡದಲ್ಲಿಯು ಕನ್ನಡ ಅಮರವಾಗಿ ಉಳಿಯಲಿದೆ. ಪ್ರಪಂಚದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು, ಬದಲಾದ ಕಾಲ ಗತಿಯೊಂದಿಗೆ ಹೊಂದಿಕೊಂಡು ಬೆಳೆಯುವ ಶಕ್ತಿ ಅದಕ್ಕೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಬೀದರ್ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು ಕೊರೊನಾ ಸೊಂಕಿನ ಪ್ರಯುಕ್ತ ಮಂಗಳವಾರ ಇಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಫೇಸ್‍ಬುಕ್ ಲೈವ್ ಮೂಲಕ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 106ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಏಷ್ಯಾ ಖಂಡದ ಅತ್ಯಂತ ದೊಡ್ಡ ಸಂಸ್ಥೆಯಾಗಿದೆ. ಸುಮಾರು 3.5 ಲಕ್ಷ ಜನ ಸದಸ್ಯರನ್ನು ಹೊಂದಿದೆ. ನಾಡು, ನುಡಿ, ನೆಲ, ಜಲ ಸಂರಕ್ಷಣೆ, ಜನಪರ ಕಾಳಜಿ ಹೋರಾಟಗಳ ಮೂಲಕ ಸಮಸ್ತ ಕನ್ನಡಿಗರ ಹಿತ ಕಾಪಾಡುತ್ತ ಬಂದಿದೆ ಎಂದು ನುಡಿದರು.

ADVERTISEMENT

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಅವರು, ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಮೈಸೂರು ಮಹಾರಾಜಾ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಾಡು ನುಡಿ ಕಾಳಜಿ ಕೇಂದ್ರಿತ ದೂರದೃಷ್ಟಿಯ ಫಲವಾಗಿ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸವನ್ನು ಎಳೆಎಳೆಯಾಗಿ ತೆರೆದಿಟ್ಟರು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ.ಬಸವರಾಜ ಬಲ್ಲೂರ ಮಾತನಾಡಿ,‘ಭಾಷಾ ವಿಜ್ಞಾನಿಗಳು ಹೇಳುವ ಹಾಗೆ ಅನೇಕ ಭಾಷೆಗಳ ಅಳಿವಿನ ಸಾಲಿನಲ್ಲಿ ಕನ್ನಡ ಇಲ್ಲ. ಇದು ಅವಿನಾಶಿಯಾಗಿದೆ. ಇಂಗ್ಲಿಷ್ ಅಂತರರಾಷ್ಟ್ರೀಯ ಭಾಷೆಯಲ್ಲ. ಅದು ಕೇವಲ ರಾಷ್ಟ್ರ ರಾಷ್ಟ್ರಗಳ ಮಧ್ಯ ಸಂಪರ್ಕ ಭಾಷೆಯಾಗಿದೆ. ಉನ್ನತ ವ್ಯಾಸಂಗ ಮಾತೃಭಾಷೆಯಲ್ಲಿ ಬಂದರೆ ಕನ್ನಡ ಅನ್ನದ ಭಾಷೆಯಾಗಿ ಮಾರ್ಪಡುತ್ತದೆ’ ಎಂದು ಹೇಳಿದರು.

ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ ಅಹಮ್ಮದ್ ಅವರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.

ಉಪನ್ಯಾಸಕ ಸಚಿನ್ ವಿಶ್ವಕರ್ಮ ನಿರೂಪಿಸಿದರು. ಶಿವಶಂಕರ ಟೋಕರೆ ಸ್ವಾಗತಿಸಿದರು. ಕಲಾವಿದ ನಾಗರಾಜ ಜೋಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.