ADVERTISEMENT

ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕರ ಆಕ್ರೋಶ

ಬ್ರಿಮ್ಸ್‌ ಅವ್ಯವಹಾರ: ಸಮಗ್ರ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಆದೇಶ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 13:36 IST
Last Updated 2 ಫೆಬ್ರುವರಿ 2019, 13:36 IST
ಬೀದರ್‌ನಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಮಾತನಾಡಿದರು. ಟಿ.ಶ್ರೀಧರ, ಮಹಾಂತೇಶ ಬೀಳಗಿ, ಎಚ್.ಆರ್. ಮಹಾದೇವ, ರಹೀಂ ಖಾನ್, ರಾಜಶೇಖರ ಪಾಟೀಲ ಹಾಗೂ ಭಾರತಬಾಯಿ ಇದ್ದಾರೆ
ಬೀದರ್‌ನಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಮಾತನಾಡಿದರು. ಟಿ.ಶ್ರೀಧರ, ಮಹಾಂತೇಶ ಬೀಳಗಿ, ಎಚ್.ಆರ್. ಮಹಾದೇವ, ರಹೀಂ ಖಾನ್, ರಾಜಶೇಖರ ಪಾಟೀಲ ಹಾಗೂ ಭಾರತಬಾಯಿ ಇದ್ದಾರೆ   

ಬೀದರ್‌: ಬ್ರಿಮ್ಸ್‌ನಲ್ಲಿ ವೈದ್ಯಕೀಯ ಉಪಕರಣ ಹಾಗೂ ಪೀಠೋಪಕರಣ ಖರೀದಿಯಲ್ಲಿ ಅವ್ಯವಹಾರ ಆರೋಪ, ಬೇಸರಕ್ಕೆ ಕಾರಣವಾದ ಎಂಜಿನಿಯರಿಂಗ್ ಕಾಲೇಜು ಕಟ್ಟಡ ಕಾಮಗಾರಿಯಲ್ಲಿ ಆಗುತ್ತಿರುವ ವಿಳಂಬ, ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳಿಂದಲೇ ಪರಸ್ಪರ ಟೀಕೆ, ಬಹಿರಂಗಗೊಂಡ ಸಮನ್ವಯದ ಕೊರತೆ, ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕರ ಆಕ್ರೋಶ, ಸಚಿವರ ಅಸಮಾಧಾನ.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂಡು ಬಂದ ದೃಶ್ಯಗಳು ಇವು.

‘ನಗರದಲ್ಲಿ ಅಮೃತ್ ಯೋಜನೆ, ನಿರಂತರ ಕುಡಿಯವ ನೀರು ಪೂರೈಕೆ ಯೋಜನೆಯ ಕಾಮಗಾರಿ ಕಳಪೆಯಾಗಿವೆ. ನೀರು ಪೂರೈಕೆ ಯೋಜನೆ ಕಾಮಗಾರಿ ಮುಗಿದು ವರ್ಷ ಕಳೆದರೂ ಜನರಿಗೆ ಕುಡಿಯುವ ನೀರು ದೊರೆಯುತ್ತಿಲ್ಲ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಮ್ಮ ಮನೆಗೆ 15 ದಿನಗಳಿಂದ ನೀರು ಬಂದಿಲ್ಲ. ಜನ ಸಾಮಾನ್ಯರ ಸ್ಥಿತಿ ಇನ್ನೂ ಗಂಭೀರವಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಆರೋಪಿಸಿದರು.

ADVERTISEMENT

‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಸ್ಥಿತಿ ಯಾವ ರೀತಿ ಇದೆಯೋ ಅದೇ ಸ್ಥಿತಿ ಜಿಲ್ಲೆಯಲ್ಲೂ ಇದೆ. ಅಧಿಕಾರಿಗಳು ಶಾಸಕರ ಮಾತನ್ನೇ ಕೇಳುತ್ತಿಲ್ಲ. ಚುನಾಯಿತ ಪ್ರತಿನಿಧಿಯೇ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ಇರುವಾಗ ಜನ ಸಾಮಾನ್ಯರ ಗೋಳು ಕೇಳುವವರು ಯಾರು?’ ಎಂದು ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ ಪ್ರಶ್ನಿಸಿದರು.

‘ಅಮೃತ್ ಸೇರಿದಂತೆ ಕೆಲ ಯೋಜನೆಗಳಡಿ ಪೂರ್ಣಗೊಂಡ ಹಾಗೂ ಈಗಲೂ ಚಾಲ್ತಿಯಲ್ಲಿರುವ ಕಾಮಗಾರಿಗಳು ತೃಪ್ತಿದಾಯಕವಾಗಿಲ್ಲ. ಹೊರ ರಾಜ್ಯದ ಗುತ್ತಿಗೆದಾರ ಯಾರ ಕೈಗೂ ಸಿಗುತ್ತಿಲ್ಲ. ಸಾರ್ವಜನಿಕರಿಗೆ ನೀರು ಕುಡಿಸುವ ನೆಪದಲ್ಲಿ ಸರಿ ಇದ್ದ ರಸ್ತೆಗಳನ್ನು ಹಾಳು ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಿರಂತರ ಕುಡಿಯುವ ನೀರು ಯೋಜನೆಯು ಮೂರು ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ತಾಂತ್ರಿಕ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ)ಯ ಎಇಇ ನಾಗರಾಜ ಸಮಜಾಯಿಸಿ ನೀಡಲು ಪ್ರಯತ್ನಿಸಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ‘ಫೆ.3 ರಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಸಚಿವರು ಹಾಗೂ ಶಾಸಕರು ಬರಬೇಕು’ ಎಂದು ಮನವಿ ಮಾಡಿದರು.

ತನಿಖೆಗೆ ಆದೇಶ:
‘ಬ್ರಿಮ್ಸ್ ಆಸ್ಪತ್ರೆ ನಿರ್ಮಾಣ ವೇಳೆಯಲ್ಲಿ ಪೀಠೋಪಕರಣ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಅರವಿಂದಕುಮಾರ ಅರಳಿ ಒತ್ತಾಯಿಸಿದರು.

‘ನಾವು ಸಹ ಬ್ರಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಇಲ್ಲಿನ ಅವ್ಯವಸ್ಥೆಯ ಬಗ್ಗೆ ಪತ್ರಿಕೆಗಳಲ್ಲೂ ವರದಿಗಳು ಪ್ರಕಟವಾಗಿವೆ. ಆಸ್ಪತ್ರೆಯಲ್ಲಿ ಯಾವುದೂ ಸರಿ ಇಲ್ಲ. ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು’ ಎಂದು ಗಣಿ ಹಾಗೂ ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಮತ್ತು ಕ್ರೀಡಾ ಸಚಿವ ರಹಿಂ ಖಾನ್ ಹೇಳಿದರು.

‘ತಕ್ಷಣ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಿ ಹಗರಣದ ತನಿಖೆ ನಡೆಸಬೇಕು. ಸಮಗ್ರ ವರದಿಯನ್ನು ನನಗೆ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಚ್. ಆರ್. ಮಹಾದೇವ ಅವರಿಗೆ ಸಚಿವ ಬಂಡೆಪ್ಪ ಸೂಚಿಸಿದರು.

ಪುಸ್ತಕ ವಿತರಣೆ ವಿಳಂಬ:
‘ಬೀದರ್‌ ಜಿಲ್ಲೆಯ ಅನೇಕ ಶಾಲೆಗಳಿಗೆ ಏಳು ತಿಂಗಳಾದರೂ ಪಠ್ಯಪುಸ್ತಕ ವಿತರಿಸಿಲ್ಲ. ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗಿದೆ. ಇದರಿಂದ ಗುಣಮಟ್ಟದ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅರವಿಂದಕುಮಾರ ಅರಳಿ ಹಾಗೂ ರಘುನಾಥ ಮಲ್ಕಾಪುರೆ ಬೇಸರ ವ್ಯಕ್ತಪಡಿಸಿದರು.

‘ಕನ್ನಡ ಮಾಧ್ಯಮ ಶಾಲೆಗಳಿಗೆ ಮೇನಲ್ಲಿ ಪಠ್ಯಪುಸ್ತಕ ವಿತರಿಸಲಾಗಿದೆ. ಉರ್ದು ಹಾಗೂ ಮರಾಠಿ ಮಾಧ್ಯಮ ಪುಸ್ತಕಗಳು ಮಾತ್ರ ತಾಂತ್ರಿಕ ಕಾರಣದಿಂದ ಐದು ತಿಂಗಳು ವಿಳಂಬವಾಗಿ ಬಂದಿವೆ’ ಎಂದು ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಇನಾಯತ್‌ಅಲಿ ಶಿಂಧೆ ಸಭೆಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿಲ್ಲ

‘ಹಣಕಾಸು ವರ್ಷ ಕಳೆಯುತ್ತ ಬಂದರೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪಾವತಿಸಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳಿಗೆ ಸರ್ಕಾರದ ಯೋಜನೆಗಳ ಲಾಭ ದೊರೆಯುತ್ತಿಲ್ಲ’ ಎಂದು ಅರವಿಂದಕುಮಾರ ಅರಳಿ ದೂರಿದರು.

‘ಜಿಲ್ಲೆಯಲ್ಲಿ 1,21,456 ವಿದ್ಯಾರ್ಥಿಗಳ ಪೈಕಿ 44 ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪಾವತಿಯಾಗಿಲ್ಲ. ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಸಂಖ್ಯೆ ಜೋಡಣೆಯಾಗಿಲ್ಲ. ಬಹುತೇಕ 16 ವರ್ಷದೊಳಗಿನ ಮಕ್ಕಳು ತಮ್ಮ ಪಾಲಕರ ಬ್ಯಾಂಕ್‌ ಖಾತೆಯ ಸಂಖ್ಯೆ ನೀಡಿದ್ದಾರೆ. ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆ ನಿವಾರಿಸಲಾಗುವುದು’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ತಿಳಿಸಿದರು.

ಶಿಕ್ಷಣ ಇಲಾಖೆ ಹಾಗೂ ಬ್ಯಾಂಕ್‌ ಅಧಿಕಾರಿಗಳ ಕಾರ್ಯವೈಖರಿಯಿಂದ ಸಿಡಿಮಿಡಿಗೊಂಡ ಸಚಿವರು, ‘ಫೆಬ್ರುವರಿ 15ರೊಳಗೆ ಆಧಾರ್ ಜೋಡಣೆಗೆ ಕ್ರಮ ವಹಿಸಿ ಎಲ್ಲ ಮಕ್ಕಳಿಗೂ ಶಿಷ್ಯವೇತನ ಮಂಜೂರು ಮಾಡಿ ಈ ಬಗ್ಗೆ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ಡಾ.ಎಚ್. ಆರ್. ಮಹಾದೇವ, ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಇದ್ದರು.

*ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಆಸಕ್ತಿ ಇಲ್ಲದವರು ಬೇರೆಡೆ ವರ್ಗ ಮಾಡಿಸಿಕೊಳ್ಳಬಹುದು.
-ಬಂಡೆಪ್ಪ ಕಾಶೆಂಪೂರ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.