ಹುಲಸೂರ: ‘ಸಮೀಪದ ಸಾಯಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಸರ ಜವಳಗಾ ಗ್ರಾಮದಿಂದ ಹಾದು ಹೋಗುವ ಬೀದರ್ - ಲಾತೂರ್ ಹೆದ್ದಾರಿ ಪಕ್ಕದಲ್ಲಿರುವ ಬಸ್ ತಂಗುದಾಣ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಇದರಿಂದ ತೀವ್ರ ಸಮಸ್ಯೆಯಾಗುತ್ತಿದೆ’ ಎಂದು ನಾಗರಿಕರು ದೂರಿದ್ದಾರೆ.
ಲಾತೂರ-ಬೀದರ್ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೇಸರಜವಳಗಾ ನಿಲ್ದಾಣವು ಸಾಯಿಗಾಂವ, ಮೇಹಕರ, ಅಳವಾಯಿ, ಅಟ್ಟರ್ಗಾ, ಗುಂಜರಗಾ, ಶ್ರೀಮಳ್ಳಿ ಹಾಗೂ ಮಹಾರಾಷ್ಟ್ರದ ವಲಂಡಿ, ದೇವಣಿ, ಉದಗೀರಗಳಿಗೆ ತೆರಳುವ ಪ್ರಯಾಣಿಕರಿಗೆ ಕೇಂದ್ರ ಸ್ಥಾನವೆನಿಸಿದೆ.
ಸುತ್ತಮುತ್ತಲಿನ ಗ್ರಾಮಗಳಿಂದ ನಿತ್ಯ ನೂರಾರು ಪ್ರಯಾಣಿಕರು ನಗರ ಪ್ರದೇಶಗಳಿಗೆ ಹೋಗಲು ಕೇಸರ ಜವಳಗಾ ಗ್ರಾಮಕ್ಕೆ ಬಂದು ಹೋಗುತ್ತಾರೆ. ಈ ಬಸ್ ನಿಲ್ದಾಣವು 2001 - 2002ನೇ ಸಾಲಿನಲ್ಲಿ ನಿರ್ಮಿಸಿದ್ದು, ಈಗ ಇದು ಮದ್ಯ ಮತ್ತು ಧೂಮಪಾನ ಮಾಡುವವರ ಅಡ್ಡೆಯಾಗಿದೆ. ಸರಿಯಾಗಿ ನಿರ್ವಹಣೆ ಮಾಡದ ಕಾರಣ ನಿಲ್ದಾಣದಲ್ಲಿ ತ್ಯಾಜ್ಯ ತುಂಬಿದೆ.
ಮದ್ಯಪಾನ ಮಾಡಿದವರು ಬಾಟಲಿ ಮತ್ತು ಆಹಾರ ತ್ಯಾಜ್ಯವನ್ನು ಇಲ್ಲಿ ಬೀಸಾಡಿ ಹೋಗುತ್ತಾರೆ. ಧೂಮಪಾನ ಹಾಗೂ ಮದ್ಯಪಾನ ಮಾಡುವುದರಿಂದ ತಂಗುದಾಣ ಸಂಪೂರ್ಣವಾಗಿ ದುರ್ವಾಸನೆ ಬಿರುತ್ತಿದೆ. ಇದರಿಂದ ಜನ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಅಹಸ್ಯ ಪಡುವಂತಾಗಿದೆ. ಹೀಗಾಗಿ ಜನ ತಂಗುದಾಣದ ಹೊರಗೆ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಸನ ವ್ಯವಸ್ಥೆ ಸರಿಯಿಲ್ಲದ ಕಾರಣ, ಬಸ್‌ಗಾಗಿ ಕಾಯುವ ವಯಸ್ಸಾದವರು, ಅಂಗವಿಕಲರು ಪರದಾಡುತ್ತಾರೆ. ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದ್ದರಿಂದ ಸಂಜೆ ವೇಳೆ ಬರುವ ಪ್ರಯಾಣಿಕರು, ವಿಶೇಷವಾಗಿ ಹೆಣ್ಣು ಮಕ್ಕಳು ಭಯದಲ್ಲಿಯೇ ಬಸ್ ಬರುವಿಕೆಗಾಗಿ ಕಾಯುವಂತಾಗಿದೆ’ ಎಂದು ನಾಗರಿಕರು ದೂರುತ್ತಾರೆ.
ಶೌಚಕ್ಕೆ ಬಯಲೇ ಆಧಾರ : ಕಳೆದ 20 ವರ್ಷಗಳ ಹಿಂದೆ ನಿರ್ಮಿಸಿದ ಬಸ್ ತಂಗುದಾಣದಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ನಡೆದಿಲ್ಲ. ಹೀಗಾಗಿ ಶೌಚಕ್ಕೆ ಪ್ರಯಾಣಿಕರು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರು ಬಯಲನ್ನೇ ಆಸರಿಸಿದ್ದು, ಸಂಜೆ ವೇಳೆ ಕುಡುಕರ ಹಾವಳಿಯಿಂದ ಬಸ್ ನಿಲ್ದಾಣದ ವಾತಾವರಣ ಹದಗೆಡುವಂತಾಗಿದೆ.
ನಾಯಿ ಹಾವಳಿ : ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯಬೇಕಾದರೆ ದುರ್ವಾಸನೆ ಸೇವನೆ ಅನಿವಾರ್ಯ. ಬಸ್ ತಂಗುದಾಣದಲ್ಲಿ ತ್ಯಾಜ್ಯ ವಸ್ತುಗಳನ್ನು ಬೀಸಾಡುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಪ್ರಯಾಣಿಕರು ನಿರಾಳವಾಗಿ ನಿಲ್ದಾಣದಲ್ಲಿ ನಿಲ್ಲುವಂತಿಲ್ಲ, ಬೀದಿ ನಾಯಿಗಳು ಜಗಳವಾಡಿಕೊಂಡು ಬಂದು ಪ್ರಯಾಣಿಕರ ಮೇಲೆ ಎರಗುತ್ತವೆ ಎಂದು ಹೆಸರು ಹೇಳ ಬಯಸದ ಪ್ರಯಾಣಿಕರೊಬ್ಬರು ದೂರುತ್ತಾರೆ.
ಸೌಲಭ್ಯ ಇಲ್ಲ : ಒಂದೆಡೆ ಬಸ್ ತಂಗುದಾಣದಲ್ಲಿ ಅವ್ಯವಸ್ಥೆಯ ನಡುವೆ ಸೌಲಭ್ಯ ಕೊರತೆ ಉಂಟಾಗಿದೆ. ಒಂದು ಬಸ್ ಬಂದರೆ ಸಾಕು ದಟ್ಟವಾದ ದೂಳು ಆವರಿಸಿಕೊಂಡು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಕೂಡಬೇಕು. ಸುತ್ತಮುತ್ತಲಿನ ಅಂಗಡಿ, ಹೋಟೆಲ್‌ಗಳಲ್ಲಿ ಧೂಳು ಬರುತ್ತಿದ್ದುದರಿಂದ ಅಂಗಡಿಕಾರರು ತೊಂದರೆ ಅನುಭವಿಸುವಂತಾಗಿದೆ. ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕೂಡ ಮರೀಚಿಕೆಯಾಗಿದೆ. ಕೂಡಲೇ ಇಲಾಖೆ ಅಧಿಕಾರಿಗಳು ಕೇಸರ ಜವಳಗಾ ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡಲು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.