ADVERTISEMENT

ಚಸ್ಮಾ ಖರೀದಿಸುವಾಗ ಖೂಬಾ ಜತೆಗಿದ್ದರಾ?

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 3:00 IST
Last Updated 4 ಡಿಸೆಂಬರ್ 2021, 3:00 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್: ‘ನಾನು, ಶಾಸಕ ರಾಜಶೇಖರ ಪಾಟೀಲ ₹ 5 ಲಕ್ಷ ಬೆಲೆಯ ರೇಬಾನ್ ಚಸ್ಮಾ ಖರೀದಿಸಿದ್ದೇವೆಂದು ಕೇಂದ್ರ ಸಚಿವ ಭಗವಂತ ಖೂಬಾ ನೀಡಿರುವ ಹೇಳಿಕೆ ಹಾಸ್ಯಾಸ್ಪದ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರತ್ಯುತ್ತರ ನೀಡಿದರು.

‘ಒಬ್ಬ ಸಚಿವರಾಗಿ ಜವಾಬ್ದಾರಿಯಿಂದ ಹೇಳಿಕೆ ಕೊಡಬೇಕು. ನಾನು ಚಸ್ಮಾ ಖರೀದಿಸುವಾಗ ಖೂಬಾ ಅವರು ಜತೆಗಿದ್ದರಾ. ನಿಮ್ಮ ಪರಮೋಚ್ಚ ನಾಯಕ ₹ 10 ಲಕ್ಷದ ಸೂಟು, ಬೂಟು ಧರಿಸಿ ಓಡಾಡುತ್ತಾರಲ್ಲ, ಅದು ಎಲ್ಲಿಂದ ಬಂತು ಎಂದು ಅವರನ್ನು ಕೇಳಿದ್ದಾರಾ’ ಎಂದು ಪ್ರಶ್ನಿಸಿದರು.

‘ಕೇಂದ್ರ ಸಚಿವರ ಬಾಯಿಗೆ ಲಗಾಮಿಲ್ಲ. ತಾನೂ ಕಳ್ಳ, ಪರರನ್ನು ನಂಬ. ಸೋಲಿನ ಭೀತಿಯಿಂದ ಕೆಳಮಟ್ಟದ ಹೇಳಿಕೆ ಕೊಡುತ್ತಿದ್ದಾರೆ. ಇವರ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಗ್ರಾಮ ಸಿಂಹ ಬೊಗಳಿದರೆ ಲೋಕಕ್ಕೇನೂ ತೊಂದರೆ ಆಗುವುದಿಲ್ಲ. ಶ್ವಾನ ಎಷ್ಟೇ ಬೊಗಳಿದರೂ ಆನೆ ಶಾಂತಿಯುತವಾಗಿ ನಡೆದುಕೊಂಡು ಹೋಗುತ್ತದೆ’ ಎಂದು ಹೇಳಿದರು.

‘ನನ್ನ ಬಗ್ಗೆ ಅವ್ಯವಹಾರ, ಅಕ್ರಮ ಎಂದು ಹೇಳುತ್ತಿದ್ದಾರೆ. ನಿಮ್ಮ ನಾಯಕರು ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿದ್ದಾರೆ. ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜ್ಯದಲ್ಲಿ ಶೇ 40 ರಷ್ಟು ಕಮಿಷನ್ ನಡೆಯುತ್ತಿರುವ ಬಗ್ಗೆ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ತಾನು ಭ್ರಷ್ಟಾಚಾರಿ, ತನ್ನ ನಾಯಕರೆಲ್ಲ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರಿಂದ ಖೂಬಾ ಅವರಿಗೆ ಇತರರೂ ಹಾಗೆಯೇ ಕಾಣುತ್ತಾರೆ’ ಎಂದು ಟೀಕಿಸಿದರು.

‘ಕೇಂದ್ರ ಸಚಿವರು ಫೇಸ್‍ಬುಕ್‍ನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ಇವರ ಅವಧಿಯಲ್ಲಿ ಬೆಂಗಳೂರಿಗೆ ವಿಮಾನ ನಿಂತಿದೆ. ಬೀದರ್ ಜಿಲ್ಲೆ, ಕಲ್ಯಾಣ ಕರ್ನಾಟಕಕ್ಕೆ ಇವರ ಕೊಡುಗೆ ಶೂನ್ಯವಾಗಿದೆ’ ಎಂದು ಟೀಕಿಸಿದರು.

‘ಬೀದರ್‌ನಲ್ಲಿ ಇಬ್ಬರೂ ಸಚಿವರು ಕೊಟ್ಟ ಒಂದೂ ಭರವಸೆ ಈಡೇರಿಸಿಲ್ಲ. ಅನುಭವ ಮಂಟಪ ಕಾಮಗಾರಿ ಆರಂಭವಾಗಿಲ್ಲ. ಬಿಎಸ್‍ಎಸ್‍ಕೆ ಆರಂಭಿಸಿಲ್ಲ’ ಎಂದು ದೂರಿದರು.

‘ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜ್ಯದಲ್ಲಿ 25 ರ ಪೈಕಿ 15 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.