ADVERTISEMENT

ಬಿಎಸ್‌ಎಸ್‌ಕೆ ಆರಂಭಕ್ಕೆ ಖಂಡ್ರೆ ಹಿಂದೇಟು: ಆರೋಪ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 6:34 IST
Last Updated 21 ಜುಲೈ 2025, 6:34 IST
ವಿಶ್ವನಾಥ್ ಪಾಟೀಲ ಮಾಡಗೂಳ
ವಿಶ್ವನಾಥ್ ಪಾಟೀಲ ಮಾಡಗೂಳ   

ಹುಮನಾಬಾದ್: ‘ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಪುನಶ್ಚೇತನ ಮಾಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಕಾರ್ಖಾನೆಯ ನಿರ್ದೇಶಕರಾದ ಮಲ್ಲಿಕಾರ್ಜುನ ಪಾಟೀಲ, ವಿಶ್ವನಾಥ್ ಪಾಟೀಲ ಮಾಡಗೂಳ ಆರೋಪಿಸಿದ್ದಾರೆ.

ಪಟ್ಟಣದ ಮಾಜಿ ಶಾಸಕ ಸುಭಾಷ ಕಲ್ಲೂರ್ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಸಚಿವರು ಜಿಲ್ಲೆಯ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ಕಾರ್ಖಾನೆ ಆರಂಭ ಮಾಡಬೇಕಿತ್ತು. ಆದರೆ ನಿರ್ಲಕ್ಷ ಮಾಡುತ್ತಿರುವುದು ಸರಿಯಲ್ಲ’ ಎಂದರು.

‘ಬಿಎಸ್‌ಎಸ್‌ಕೆ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ಕಾರ್ಖಾನೆ ಎರಡು ವರ್ಷಗಳಿಂದ ಬಂದ್ ಆಗಿತ್ತು . ಇದನ್ನು ಪ್ರಾರಂಭಿಸಲು ಅನೇಕ ಒತ್ತಡಗಳು ಎದುರಾದರೂ ಸಹ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ 50 ದಿನಗಳಲ್ಲಿ 54,574 ಮೆಟ್ರಿಕ್‌ ಟನ್ ಕಬ್ಬು ನುರಿಸಿದ್ದೆವು. ಹಳೆ ಆಡಳಿತ ಮಂಡಳಿಯವರ ಕಾಲಾವಧಿಯಲ್ಲಿ 5 ವರ್ಷಗಳಿಂದ ಯಾವುದೇ ಲೆಕ್ಕ ಪತ್ರಗಳ ಅಡಿಟ್ ಸಹ ಮಾಡದೇ ಬೇಜವಾಬ್ದಾರಿ ತೋರಿದ್ದರು’ ಎಂದರು.

ADVERTISEMENT

ನಾವು ಅಧಿಕಾರ ವಹಿಸಿಕೊಂಡಿದ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ನಯಾ ಪೈಸೆ ಇರಲಿಲ್ಲ. ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಸಂಪೂರ್ಣ ಹಾಳಾಗಿತ್ತು. ಹಿಂದೆ 5 ವರ್ಷ ಸಂಜಯ್‌ ಖೇಣಿ ಅಧಿಕಾರ ಮಾಡಿದ್ದಾರೆ. ಅವರ ಅವಧಿಯಲ್ಲಿ ಕಾರ್ಖಾನೆಯ ಬಗ್ಗೆ ಒಂದೇ ಒಂದು ಲೆಕ್ಕ ಪತ್ರಗಳು ಸಹ ಇರಲಿಲ್ಲ. ಅವರ ಅವಧಿಯಲ್ಲಿ ಸರ್ಕಾರದಿಂದ ₹ 30 ಕೋಟಿ ಅನುದಾನ ನೀಡಿದರೂ ಕಾರ್ಖಾನೆ ಪ್ರಾರಂಭ ಮಾಡಿರಲಿಲ್ಲ’ ಎಂದರು.

‘ಖಂಡ್ರೆ ರಾಜಕೀಯದಲ್ಲಿ ಬೆಳೆಯಲು ಬಿಎಸ್‌ಎಸ್‌ಕೆ ಕಾರಣ: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯಿಂದ ಜಿಲ್ಲೆಯಲ್ಲಿ ಖಂಡ್ರೆ ಕುಟುಂಬ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಕಾರ್ಖಾನೆಯ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ ಹೇಳಿದರು. ಮಾಜಿ ಸಚಿವ ಭೀಮಣ್ಣ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈ ಕಾರ್ಖಾನೆಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ರಾಜ್ಯ ರಾಜಕಾರಣದಲ್ಲಿ ಪ್ರಬಲವಾಗಿ ಬೆಳೆಯಲು ಮೊದಲು ನೆಲೆ ಕೊಟ್ಟಿದ್ದೇ ಬಿಎಸ್‌ಎಸ್‌ಕೆ. ಕಾರ್ಖಾನೆ ಪುನಶ್ಚೇತನಕ್ಕೆ ಸಚಿವರು ಮುಂದೆ ಬರಬೇಕು ಎಂದು ಒತ್ತಾಯಿಸಿದರು.

ಮಲ್ಲಿಕಾರ್ಜುನ ಪಾಟೀಲ
‘ಖಂಡ್ರೆ ವಿರುದ್ಧ ಪ್ರತಿಭಟನೆ’
‘ಕಾರ್ಖಾನೆಯ‌ ಪುನಶ್ಚೇತನಕ್ಕೆ ಸಚಿವ ಖಂಡ್ರೆ ಅವರು ಓಟಿಎಸ್ ಯೋಜನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹತ್ತಿರ ಆದಷ್ಟು ಬೇಗ ಸಮಯ ಕೇಳಿ ಚರ್ಚೆ ನಡೆಸಬೇಕು. ಇಲ್ಲದಿದ್ದರೆ ಈಶ್ವರ ಖಂಡ್ರೆ ವಿರುದ್ಧ ಪ್ರತಿಭಟನೆ ಮಾಡುತ್ತೇವೆ’ ಎಂದು ಕಾರ್ಖಾನೆಯ ಉಪಾಧ್ಯಕ್ಷ ವಿಶ್ವನಾಥ್ ಪಾಟೀಲ ಮಾಡಗೂಳ ತಿಳಿಸಿದರು. ಈ ಕಾರ್ಖಾನೆ ಲೀಸ್‌ ತೆಗೆದುಕೊಳ್ಳಲು ಯಾರೂ ಬಂದಿರಲಿಲ್ಲ. ಆದರೆ ಈಗ ಮೂವರು ಉದ್ಯಮಿಗಳು ಲೀಸ್‌ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸಚಿವರು ಮೌನ ವಹಿಸುವುದು ಸರಿಯಲ್ಲ. ಬೆಂಗಳೂರಿನಲ್ಲಿ ಸಭೆ ಮಾಡಿ 20 ದಿನಗಳು ಕಳೆದಿವೆ. ಯಾವ ಕಾರಣಕ್ಕೆ ನೀವು ಈ ಕಾರ್ಖಾನೆ ಆರಂಭ ಮಾಡುವುದಕ್ಕೆ ಮನಸ್ಸು ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.