ADVERTISEMENT

ಮೇಲಧಿಕಾರಿಗಳ ನಿರ್ಲಕ್ಷ್ಯ: ಹದಗೆಟ್ಟ ಡಿ.ದೇವರಾಜ ಅರಸು ಹಿರಿಯ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 5:56 IST
Last Updated 26 ಜೂನ್ 2025, 5:56 IST
ಹುಲಸೂರ ಸಮೀಪದ ಮೆಹಕರ ಗ್ರಾಮದ ಡಿ.ದೇವರಾಜ ಅರಸು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಂದಿಗಳು ಓಡಾಡುತ್ತಿರುವುದು
ಹುಲಸೂರ ಸಮೀಪದ ಮೆಹಕರ ಗ್ರಾಮದ ಡಿ.ದೇವರಾಜ ಅರಸು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಂದಿಗಳು ಓಡಾಡುತ್ತಿರುವುದು    

ಹುಲಸೂರ: ಸಮೀಪದ ಗಡಿಭಾಗದಲ್ಲಿನ ಮೆಹಕರ ಗ್ರಾಮದ ಡಿ.ದೇವರಾಜ ಅರಸು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇಲಧಿಕಾರಿಗಳು ಹಾಗೂ ಶಿಕ್ಷಕರ ನಿರ್ಲಕ್ಷ್ಯದಿಂದ ಶಾಲೆಯ ವಾತಾವರಣ ಹದಗೆಟ್ಟು, ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಗ್ರಾಮದ ಶಿಕ್ಷಣಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಹಕರ ಗ್ರಾಮದ ಡಿ.ದೇವರಾಜ ಅರಸು (ಕನ್ನಡ, ಮರಾಠಿ, ಇಂಗ್ಲಿಷ್‌) ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 40 ಮಕ್ಕಳ ದಾಖಲಾತಿ ಇದ್ದು, ಒಬ್ಬ ಮುಖ್ಯಶಿಕ್ಷಕ ಸೇರಿ ಮೂರೂ ಜನ ವಿಷಯವಾರು ಸಿಬ್ಬಂದಿ ಕೆಲಸ ನಿರ್ವಹಿಸುತಿದ್ದಾರೆ.

‘ಶಾಲೆಯಲ್ಲಿ ದಾಖಲಾತಿ ಪಡೆದ ಒಟ್ಟು ಮಕ್ಕಳಲ್ಲಿ ಅರ್ಧ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಕೇವಲ 4 ರಿಂದ 8 ಮಕ್ಕಳು ನಿತ್ಯ ಶಾಲೆಗೆ ಬರುತ್ತಾರೆ. ಆ ಮಕ್ಕಳು ಕೂಡ ಮಧ್ಯಾಹ್ನದ ಬಿಸಿಯೂಟದ ನಂತರ ತಮ್ಮ ಮನೆಗೆ ಹೋಗುತ್ತಾರೆ. ಹಾಗಾದರೆ ಮಧ್ಯಾಹ್ನದ ತನಕ ಶಾಲೆ ನಡೆಯುತ್ತಿದೆಯೇ’ ಎಂಬುದು ಸ್ಥಳೀಯರು ಪ್ರಶ್ನೆ.

ADVERTISEMENT

‘ಶಾಲೆಯ ಮುಖ್ಯಶಿಕ್ಷಕ ಬೆಳಿಗ್ಗೆ 10 ಗಂಟೆಗೆ ಶಾಲೆಗೆ ಬಂದು ಮತ್ತೆ ಪುನಃ ಮಧ್ಯಾಹ್ನ 12 ಗಂಟೆಗೆ ಮರಳಿ ಯಾವುದೋ ಕಚೇರಿ ಕೆಲಸದ ನೆಪ ಹೇಳಿ ಸಿಬ್ಬಂದಿಗೆ ಪ್ರಭಾರವಹಿಸಿ ತಮ್ಮ ಕೆಲಸಕ್ಕೆ ಹೋಗಿಬಿಡುತ್ತಾರೆ. ಅಲ್ಲಿರುವ ಕನ್ನಡ ಶಿಕ್ಷಕರು ಕನ್ನಡ ಸಾಹಿತ್ಯ ಪರಿಷತ್‌ನ ಸಾಯಗಾಂವ್ ವಲಯ ಅಧ್ಯಕ್ಷರಾಗಿದ್ದು, ಮಕ್ಕಳಿಗೆ ಪಾಠ ಹೇಳಿಕೊಡಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಯಾವಾಗಲೂ ತಮ್ಮ ಖಾಸಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಮಯ ಕೊಡುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯರೊಬ್ಬರು ಆರೋಪಿಸಿದರು. 

‘ಶಾಲೆಯ ಒಬ್ಬ ಶಿಕ್ಷಕರಂತೂ ಮಧ್ಯಾಹ್ನ ಊಟದ ನಂತರ ಶಾಲೆಯಲ್ಲಿ ಚಾಪೆ ಹಾಸಿ ಮಲಗುತ್ತಾರೆ. ಮತ್ತೊಬ್ಬ ಶಿಕ್ಷಕರಂತೂ ಮಧ್ಯಾಹ್ನ ಮದ್ಯ ಸೇವಿಸಿ ಶಾಲೆಗೆ ಬರುತ್ತಾರೆ. ಈ ರೀತಿ ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು’ ಎಂಬುದು ಶಿಕ್ಷಣ ಪ್ರೇಮಿಗಳ ಆಗ್ರಹ.

ಶಿಕ್ಷಣ ಪ್ರೇಮಿಗಳ ಆರೋಪಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಸ್ಥಳೀಯ ಸಂಪನ್ಮೂಲ ವ್ಯಕ್ತಿ ರಣಜಿತ್ ರಾಠೋಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ನಾನು ಹೋದ ವರ್ಷ ಮಾತ್ರ ಈ ಶಾಲೆಗೆ ಭೇಟಿ ಕೊಟ್ಟಿದ್ದು, ಇಲ್ಲಿವರೆಗೆ ಶಾಲೆಗೆ ಭೇಟಿ ಕೊಟ್ಟಿಲ್ಲ. ಶೀಘ್ರ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತೇನೆ’ ಎಂದರು.

ಶಿಕ್ಷಣ ಇಲಾಖೆಯ ಅಧಿಕಾರಿ ಮಹೇಂದ್ರ ಮಾನಕಾರಿ ಮಾತನಾಡಿ, ‘ಈ ವಿಷಯದ ಕುರಿತು ಸ್ಥಳೀಯ ಸಂಪನ್ಮೂಲ ವ್ಯಕ್ತಿಯೊಂದಿಗೆ ಚರ್ಚಿಸಿ, ವರದಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.

ಮೂಲ ಸೌಕರ್ಯ ವಂಚಿತ ಶಾಲೆ:

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಶಾಲೆಯಲ್ಲಿ ಮೂಲ ಸೌಕರ್ಯ ಇಲ್ಲದೆ ಇರುವುದು ಹಾಗೂ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶಾಲೆಗೆ ತಡೆಗೋಡೆ ಇಲ್ಲದ ಇರುವುದು, ಪಾಠಮಾಡುವ ಕೋಣೆಯೂ ಅವ್ಯವಸ್ಥೆಯಿಂದ ಕೂಡಿದ್ದು, ಶಿಕ್ಷಕರ ಕೋಣೆಯು ಗೋದಾಮಾಗಿ ಮಾರ್ಪಟ್ಟಿದೆ. ಹೀಗಾಗಿ ಶಾಲೆಗೆ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ.

ದೇವರಾಜ ಅರಸು ಶಾಲೆಗೆ ಸಂಬಂಧಿಸಿದಂತೆ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಇಸಿಒ ಹಾಗೂ ಬಿಆರ್‌ಪಿ ವರದಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು
  ಚನ್ನಪ್ಪ ಹಳ್ಳದ ಕ್ಷೇತ್ರ ಶಿಕ್ಷಣಾಧಿಕಾರಿ
ಸರ್ಕಾರಿ ಶಾಲೆ ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣ ನೀಡವ ಕಡೆ ಗಮನ ಹರಿಸಬೇಕು. ತಿಂಗಳಿಗೊಮ್ಮೆಯಾದರೂ ಮೇಲಧಿಕಾರಿಗಳು ಶಾಲೆಗೆ ಭೇಟಿ ಕೊಡಬೇಕು.
ಸುನಿಲ ಕುಲಕರ್ಣಿ ಶಿಕ್ಷಣ ಪ್ರೇಮಿ
‘ಸರ್ಕಾರಿ ಶಾಲಾ ಮಕ್ಕಳ ಓದು ಖಾಸಗಿ ಶಾಲೆಯಲ್ಲಿ’
‘ಗಡಿಭಾಗದಲ್ಲಿ ಕೆಲವು ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ದಾಖಲು ಮಾಡಿ ಖಾಸಗಿ ಶಾಲೆಗಳಿಗೆ ಓದಲು ಕಳುಹಿಸುತ್ತಿದ್ದಾರೆ. ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಸರ್ಕಾರಿ ಮಕ್ಕಳಿಗೆ ಏನಾದರೂ ಅನಾಹುತವಾದಲ್ಲಿ ಹೊಣೆಗಾರರು ಯಾರು? ಮೇಲಧಿಕಾರಿಗಳು ಈ ವಿಷಯದ ಕಡೆ ಗಮನಹರಿಸುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ತಿಂಗಳಿಗೊಮ್ಮೆಯಾದರೂ ಗಡಿ ಭಾಗದ ಶಾಲೆಗೆ ಭೇಟಿ ಕೊಟ್ಟು ಶಾಲಾ ಸುಧಾರಣೆಗೆ ಆಸಕ್ತಿ ತೋರಬೇಕಿದೆ’ ಎಂದು ಗ್ರಾಮದ ಶಿಕ್ಷಣ ಪ್ರೇಮಿ ವೆಂಕಟ ಲಾಳೆ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.