ADVERTISEMENT

ಸಂಸ್ಕಾರ ಉಳಿಸುವ ಸಾಹಿತ್ಯ ರಚನೆಯಾಗಲಿ: ಶಿವಕುಮಾರ ಕಟ್ಟೆ

ಪುಸ್ತಕ ಬಿಡುಗಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 15:26 IST
Last Updated 2 ಆಗಸ್ಟ್ 2021, 15:26 IST
ಬೀದರ್‌ನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಚಂದ್ರಪ್ಪ ಹೆಬ್ಬಾಳಕರ್ ಹಾಗೂ ಶಂಭುಲಿಂಗ ವಾಲ್ದೊಡ್ಡಿ ಅವರನ್ನು ಸನ್ಮಾನಿಸಲಾಯಿತು
ಬೀದರ್‌ನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಚಂದ್ರಪ್ಪ ಹೆಬ್ಬಾಳಕರ್ ಹಾಗೂ ಶಂಭುಲಿಂಗ ವಾಲ್ದೊಡ್ಡಿ ಅವರನ್ನು ಸನ್ಮಾನಿಸಲಾಯಿತು   

ಬೀದರ್‌: ‘ಆಧುನಿಕತೆಯಲ್ಲೂ ಸಂಸ್ಕಾರ ಉಳಿಸುವ ಹಾಗೂ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವಂಥ ಸಾಹಿತ್ಯ ರಚಿಸುವ ಅಗತ್ಯವಿದೆ. ಈ ದಿಸೆಯಲ್ಲಿ ಯುವ ಸಾಹಿತಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು’ ಎಂದು ಸಾಹಿತಿ ಶಿವಕುಮಾರ ಕಟ್ಟೆ ಹೇಳಿದರು.

ನಗರದ ಮೈಲೂರ್ ಕ್ರಾಸ್ ಸಮೀಪದ ಶ್ರೀ ಕೃಷ್ಣದರ್ಶಿನಿ ಹೋಟೆಲ್‌ನ ಮಹಾಲಕ್ಷ್ಮಿ ಸಭಾಂಗಣದಲ್ಲಿ ಶೋಭಾ ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸಾಹಿತಿಗಳಾದ ಚಂದ್ರಪ್ಪ ಹೆಬ್ಬಾಳಕರ್ ಹಾಗೂ ಶಂಭುಲಿಂಗ ವಾಲ್ದೊಡ್ಡಿ ರಚಿತ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜಾಗತೀಕರಣದ ಕರಿ ನೆರಳಿನಲ್ಲಿ ಮಾನವೀಯ ಮೌಲ್ಯಗಳು ಮಾಯವಾಗುತ್ತಿವೆ. ಮೊದಲು ಅವಿಭಕ್ತ ಕುಟುಂಬಗಳು ಹೆಚ್ಚಿದ್ದವು. ಈಗ ವಿಭಕ್ತ ಕುಟುಂಬಗಳು ಅಧಿಕವಾಗಿವೆ. ಹಿಂದೆ ಮಕ್ಕಳು ತಾತ, ಅಜ್ಜ, ಅಜ್ಜಿ ಮಾರ್ಗದರ್ಶನದಲ್ಲಿ ಬಾಲ್ಯ ಕಳೆಯುತ್ತಿದ್ದರು. ಇದೀಗ ಕಿಡ್ಸ್‌ಗಳಲ್ಲಿ ಬೆಳೆಯುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಸಾಹಿತಿ ಗವಿಸಿದ್ದಪ್ಪ ಪಾಟೀಲ ಮಾತನಾಡಿ, ‘ಹಾಯಿಕುಗಳು ಜಪಾನ ಸಾಹಿತ್ಯವಾಗಿದೆ. ಇದನ್ನು ವ್ಯಾಕರಣಕುಂಜ ಮೂಲಕ ಶಂಭುಲಿಂಗ ವಾಲ್ದೊಡ್ಡಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಯೋಗ ಮಾಡಿದ್ದಾರೆ. ಸಾಹಿತಿಗಳಾದ ಚಂದ್ರಕಾಂತ ಕುಸನೂರು ಹಾಗೂ ಅರವಿಂದ ಕುಲಕರ್ಣಿ ಅವರು ಹಾಯಿಕುಗಳನ್ನು ಹಿಂದಿಯಿಂದ ಕನ್ನಡ ಭಾಷೆಗೆ ತರ್ಜುಮೆ ಮಾಡಿದ್ದಾರೆ’ ಎಂದು ತಿಳಿಸಿದರು.

ದೇಶದಲ್ಲಿ ಮೌಢ್ಯ, ಅಸ್ಪೃಶ್ಯತೆ, ಜಾತಿಯತೆ ಅಧಿಕವಾಗಿದೆಯಾದರೂ ಭಾರತ ಜಾತ್ಯತೀತ ದೇಶ ಎಂದು ಬಿಂಬಿಸಲಾಗುತ್ತಿದೆ. ಮಾನವೀಯತೆ ಹಾಗೂ ಪ್ರಗತಿಪರ ವಿಚಾರಧಾರೆಗಳಿಗೆ ಪ್ರಾಮುಖ್ಯತೆ ನೀಡಬೇಕಾಗಿದೆ’ ಎಂದು ತಿಳಿಸಿದರು.

ಸಾಹಿತಿ ಸೋಮನಾಥ ನುಚ್ಚಾ ಮಾತನಾಡಿ, ‘ಹೊಸ ದಿಗಂತ ಹಾಯಿಕುಗಳು’ ಕೃತಿಯಲ್ಲಿ ಶಾಂತಿ ದೂತ ಗೌತಮ ಬುದ್ಧ, ಯೇಸು, ಪೈಗಂಬರ್, ಬಸವಣ್ಣ ಹಾಗೂ ಅಂಬೇಡ್ಕರ್‌ ಅವರ ಚಿಂತನೆಗಳ ಮೂಲಕ ಸಮಾಜದಲ್ಲಿ ಮರೆಮಾಚಿರುವ ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲಲಾಗಿದೆ’ ಎಂದು ತಿಳಿಸಿದರು.

ಸಾಹಿತಿ ಪಂಡಿತ ಬಸವರಾಜ ಪುಸ್ತಕ ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ ಅಧ್ಯಕ್ಷತೆ ವಹಿಸಿದ್ದರು.

ಇದಕ್ಕೂ ಮೊದಲು ಚಂದ್ರಪ್ಪ ಹೆಬ್ಬಾಳಕರ್ ರಚಿತ ‘ಚಿಂತನ ಮಂಥನ’, ‘ವೃದ್ಧರ ವೇದನೆಗಳು’, ಶಂಭುಲಿಂಗ ವಾಲ್ದೊಡ್ಡಿ ಬರೆದ ‘ಹೊಂಗನಸಿನ ಹಾಯಿಕುಗಳು’ ಹಾಗೂ ‘ಹೊಸ ದಿಗಂತದ ಹಾಯಿಕುಗಳು’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶಂಭುಲಿಂಗ ವಾಲ್ದೊಡ್ಡಿ ಅವರ 65ನೇ ಹಾಗೂ ಶಿವಕುಮಾರ ಕಟ್ಟೆಯವರ 50ನೇ ಜನ್ಮ ದಿನ ಆಚರಿಸಲಾಯಿತು.

ಸಾಹಿತಿ ಸಂಜುಕುಮಾರ ಅತಿವಾಳೆ, ಶಾಮರಾವ್ ನೆಲವಾಡೆ, ಬಸವರಾಜ ಬಲ್ಲೂರು, ಚಂದ್ರಗುಪ್ತ ಚಾಂದಕವಠೆ, ಪಿ.ಎಸ್. ಇಟಗಂಪಳ್ಳಿ, ವಿದ್ಯಾವತಿ ಪಡಸಾಲೆ, ಪಾರ್ವತಿ ಸೋನಾರೆ ಇದ್ದರು.

ಶೋಭಾ ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಶಂಭುಲಿಂಗ ವಾಲ್ದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯದೇವಿ ಗಾಯಕವಾಡ ರಚಿತ ಹಾಡುಗಳನ್ನು ಜಾನಪದ ಕಲಾವಿದ ದೇವದಾಸ ಚಿಮಕೋಡ ಹಾಡಿದರು. ರಶ್ಮಿ ಶರ್ಮಾ ಭಾವಗೀತೆ ಹಾಡಿದರು. ಮಹೇಶ ಗೋರನಾಳಕರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.