ಬಸವಕಲ್ಯಾಣ: ತಾಲ್ಲೂಕಿನ ಕೊಹಿನೂರ ಹೋಬಳಿಯ ಅತಿವೃಷ್ಟಿಯಿಂದ ಹಾನಿಗೊಳಗಾದ ಗ್ರಾಮಗಳಿಗೆ ಶಾಸಕ ಶರಣು ಸಲಗರ ಶುಕ್ರವಾರ ಭೇಟಿ ನೀಡಿ ಹಾನಿಯ ಸಮೀಕ್ಷೆಯಲ್ಲಿ ಲೋಪ ಆಗದಿರಲಿ ಎಂದು ಸ್ಥಳದಲ್ಲಿ ಹಾಜರಿದ್ದ ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.
ನಾಲ್ಕು ದಿನಗಳ ಹಿಂದೆ ಈ ಭಾಗದಲ್ಲಿ ಭಾರಿ ಮಳೆ ಆಗಿದ್ದರಿಂದ ನಾಲೆಗಳಲ್ಲಿ ನೀರು ಉಕ್ಕಿ ಹರಿದಿತ್ತು. ಈ ನೀರು ಪಕ್ಕದ ಹೊಲಗಳಿಗೆ ನುಗ್ಗಿದ್ದರಿಂದ ಅನೇಕ ಕಡೆ ಜಮೀನಿನಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿ ಬೆಳೆಗಳು ನೆಲಕಚ್ಚಿರುವುದನ್ನು ಅವರು ವೀಕ್ಷಿಸಿದರು. ಹಾನಿಯ ವರದಿ ಹಾಗೂ ಭಾವಚಿತ್ರಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಕೃಷಿ ಸಚಿವರಿಗೆ ಮಾಹಿತಿ ನೀಡಿ ರೈತರಿಗೆ ಪರಿಹಾರ ನೀಡಲು ಆಗ್ರಹಿಸುತ್ತೇನೆ ಎಂದು ಜನರಿಗೆ ಭರವಸೆ ನೀಡಿದರು.
ಕೊಹಿನೂರ, ಕೊಹಿನೂರವಾಡಿ, ಬಟಗೇರಾ, ಬಟಗೇರಾ ವಾಡಿ, ಅಟ್ಟೂರ್, ಲಾಡವಂತಿ, ರಾಮತೀರ್ಥ, ಪಹಾಡ ಗ್ರಾಮಗಳಿಗೆ ಭೇಟಿ ನೀಡಿದರು. ಲಾಡವಂತಿ ವ್ಯಾಪ್ತಿಯ ಹೊಲಗಳಲ್ಲಿ ಟೊಮೆಟೊ ಒಳಗೊಂಡು ಹತ್ತಾರು ಎಕರೆಯಲ್ಲಿನ ತರಕಾರಿ ಹಾಗೂ ತೋಟದ ಬೆಳೆ ಹಾಳಾಗಿರುವುದನ್ನು ಕಂಡರು.
ಬಟಗೇರಾ-ಪಹಾಡ ಮಧ್ಯದ ಸೇತುವೆ, ಲಾಡವಂತಿ ವಾಡಿ ಮತ್ತು ಕೊಹಿನೂರ ಹತ್ತಿರದ ಸೇತುವೆ ಹಾಗೂ ವಿವಿಧೆಡೆ ಜಮೀನುಗಳಲ್ಲಿ ನೀರು ನುಗ್ಗಿ ಬೆಳೆ ಮಣ್ಣು ಪಾಲಾಗಿರುವುದನ್ನು ವೀಕ್ಷಿಸಿದರು. ‘ವರ್ಷ ವರ್ಷವೂ ಈ ಭಾಗದಲ್ಲಿ ಅತಿವೃಷ್ಟಿ ಆಗುತ್ತಿರುವ ಕಾರಣ ನಷ್ಟವಾಗುತ್ತಿದೆ’ ಎಂದು ರಾಜಪ್ಪ ಅವರೆದುರು ಅಳಲು ತೋಡಿಕೊಂಡರು.
‘ಮುಂಗಾರು ಮಳೆ ಮೊದಲೇ ತಡವಾಗಿ ಬಂದಿದ್ದರಿಂದ ಬಿತ್ತನೆ ಕೈಗೊಳ್ಳಲು ವಿಳಂಬ ಆಯಿತು. ಅದಾದಮೇಲೂ ಮತ್ತೆ ಮಳೆ ಕೈಕೊಟ್ಟಿತು. ಆದರೆ, ಈಗ ದಿಢೀರನೆ ಭಾರಿ ವರ್ಷಧಾರೆ ಸುರಿದಿದ್ದರಿಂದ ಸೋಯಾ ಅವರೆ, ತೊಗರಿ, ಉದ್ದು, ಹೆಸರು ನೀರಿನೊಂದಿಗೆ ಹರಿದು ಹೋಗಿ ರೈತರು ಸಂಕಟ ಅನುಭವಿಸುವಂತಾಗಿದೆ. ಆದ್ದರಿಂದ ಬಿತ್ತನೆ ಬೀಜ ಮತ್ತು ಬೆಳೆ ಹಾನಿಗೆ ಪರಿಹಾರ ಒದಗಿಸಬೇಕು’ ಎಂದು ಕೊಹಿನೂರನ ರೈತ ಶಿವಪ್ಪ ಒತ್ತಾಯಿಸಿದರು.
ತಹಶೀಲ್ದಾರ್ ದತ್ತಾತ್ರೇಯ ಜೆ.ಗಾದಾ, ಕೃಷಿ ಸಹಾಯಕ ನಿರ್ದೇಶಕ ಗೌತಮ, ಮುಖಂಡರಾದ ರಾಜಕುಮಾರ ಶಿರಗಾಪುರ, ರತಿಕಾಂತ ಕೊಹಿನೂರ, ವಿಲಾಸ ತರಮೂಡೆ, ಶಿವಶರಣಪ್ಪ ಸಂತಾಜಿ, ರೋಹಿದಾಸ ಬಿರಾದಾರ ಉಪಸ್ಥಿತರಿದ್ದರು.
ಮಳೆಯಿಂದ ಸಾವಿರಾರು ಎಕರೆಯಲ್ಲಿನ ಬೆಳೆ ಹಾಳಾಗಿದೆ. ಸೇತುವೆ ಮತ್ತು ರಸ್ತೆ ದುರುಸ್ತಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನ ಒದಗಿಸುತ್ತೇನೆ.ಶರಣು ಸಲಗರ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.