ADVERTISEMENT

ಬಸವ ಧರ್ಮ ಬೆಳೆಸಿದ ಲಿಂಗಾನಂದರು

ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 17:18 IST
Last Updated 1 ಜುಲೈ 2020, 17:18 IST
ಬೀದರ್‌ನಲ್ಲಿ ನಡೆದ ಲಿಂಗಾನಂದ ಸ್ವಾಮೀಜಿ 25ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಪ್ರತಿಮೆಗೆ ಚನ್ನಬಸವಾನಂದ ಸ್ವಾಮೀಜಿ ಪುಷ್ಪ ಸಮರ್ಪಿಸಿದರು
ಬೀದರ್‌ನಲ್ಲಿ ನಡೆದ ಲಿಂಗಾನಂದ ಸ್ವಾಮೀಜಿ 25ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಪ್ರತಿಮೆಗೆ ಚನ್ನಬಸವಾನಂದ ಸ್ವಾಮೀಜಿ ಪುಷ್ಪ ಸಮರ್ಪಿಸಿದರು   

ಬೀದರ್: ‘ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಸಂಗ್ರಹಿಸಿದ ವಚನ ಸಾಹಿತ್ಯವನ್ನು ಲಿಂಗಾನಂದ ಸ್ವಾಮೀಜಿ ಅನೇಕ ಸಾಮಾಜಿಕ ಹಾಗೂ ಕೌಟುಂಬಿಕ ಕಷ್ಟ-ನಷ್ಟಗಳನ್ನು ಎದುರಿಸಿ ಬಸವ ಸಾಮ್ರಾಜ್ಯವನ್ನು ಕಟ್ಟಿ ಅಮರರಾಗಿದ್ದಾರೆ’ ಎಂದು ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ನುಡಿದರು.

ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕ, ಲಿಂಗಾಯತ ಸಮಾಜ ಹಾಗೂ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಆಶ್ರಯದಲ್ಲಿ ನಗರದ ಬಸವ ಮಂಟಪದಲ್ಲಿ ನಡೆದ ಪೂಜ್ಯ ಲಿಂಗಾನಂದ ಸ್ವಾಮೀಜಿ ಅವರ 25ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಬಸವಣ್ಣ ಮೊದಲಾಗಿ ಶರಣರು ನೀಡಿದ ವಚನ ಸಾಹಿತ್ಯ ಮತ್ತು ಲಿಂಗಾಯತ ಧರ್ಮವನ್ನು ಸುಮಾರು 800 ವರ್ಷಗಳ ವರೆಗೆ ಯಾರೊಬ್ಬರೂ ಪರಿಣಾಮಕಾರಿಯಾಗಿ ಪ್ರಚುರಪಡಿಸುವ ಗೋಜಿಗೆ ಹೋಗಿಲ್ಲ. ಗುರು ಲಿಂಗಾನಂದರು ಒಂದೇ ಕಡೆ ಜಡವಾಗಿ ಕುಳಿತುಕೊಳ್ಳದೆ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬಲಿಕೊಟ್ಟು ಶ್ರಮಿಸಿದರು’ ಎಂದು ತಿಳಿಸಿದರು.

ADVERTISEMENT

‘ಕಂಚಿನ ಕಂಠದ ಲಿಂಗಾನಂದರು ಪ್ರವಚನಕಾರರ ನಿರ್ಮಾಪಕರು, ಹೋರಾಟಗಾರರ ಸ್ಫೂರ್ತಿದಾತರು, ಯುವಕರ ಪಾಲಿನ ಪ್ರೇರಣಾದಾಯಕರಾಗಿದ್ದರು. ಆದ್ದರಿಂದಲೇ ಇಂದಿಗೂ ಅವರನ್ನು ನಾವು ನೆನೆಯುತ್ತೇವೆ. ಅವರ ನಿಸ್ವಾರ್ಥ ಸೇವೆ, ಕಠಿಣ ಪರಿಶ್ರಮವೇ ಬಸವ ಧರ್ಮ ಬೆಳೆಯಲು ಪ್ರಮುಖ ಕಾರಣ’ ಎಂದು ಬಣ್ಣಿಸಿದರು.

ನೇತೃತ್ವ ವಹಿಸಿದ್ದ ಬಸವ ಮಂಟಪದ ಮಾತೆ ಸತ್ಯಾದೇವಿ ಮಾತನಾಡಿ, ‘ಜಿಡ್ಡುಗಟ್ಟಿದ ಸಂಪ್ರದಾಯ ವೇಗವಾಗಿ ಬೆಳೆಯುತ್ತಿರುವಾಗ ಆನೆಯಂತೆ ಧೈರ್ಯದಿಂದ ಮುನ್ನುಗ್ಗಿ ಅನೇಕ ಮೂಢಾಚರಣೆಗಳನ್ನು ಹೋಗಲಾಡಿಸಿ ಹೊಸ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು’ ಎಂದು ತಿಳಿಸಿದರು.

ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಮಲ್ಲಿಕಾರ್ಜುನ ಜೈಲರ್, ಗಣಪತಿ ಬಿರಾದಾರ, ಶಾಂತಪ್ಪಾ ಮುಗಳಿ ಹಾಗೂ ರಮೇಶ ಪಾಟೀಲ ಇದ್ದರು.

ವಕೀಲ ಗಂಗಶೆಟ್ಟಿ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಸಂಗಮೇಶ ಅಳ್ಳಿ ವಚನ ಗಾಯನ ಮಾಡಿದರು. ಬಸವರಾಜ ಸಂಗಮದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಲಿಂಗ ಸ್ವಾಮಿ ಸ್ವಾಗತಿಸಿದರು. ಕಲ್ಪನಾ ಸಾವಲೆ ನಿರೂಪಿಸಿದರು. ಸಿದ್ಧವೀರ ಸಂಗಮದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.