ADVERTISEMENT

ಸಾಹಿತ್ಯಕ್ಕಿದೆ ಮನಸು ಜೋಡಿಸುವ ಶಕ್ತಿ

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 15:27 IST
Last Updated 15 ಮಾರ್ಚ್ 2021, 15:27 IST
ಬೀದರ್‌ನ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ‘ಹದಿಹರೆಯಕ್ಕೆ ಸಾಹಿತ್ಯ ಸುಧೆ’ ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ ಉದ್ಘಾಟಿಸಿದರು
ಬೀದರ್‌ನ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ‘ಹದಿಹರೆಯಕ್ಕೆ ಸಾಹಿತ್ಯ ಸುಧೆ’ ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ ಉದ್ಘಾಟಿಸಿದರು   

ಬೀದರ್: ‘ದೇಶ, ಸಮಾಜ ಮತ್ತು ಮನಸ್ಸುಗಳನ್ನು ಒಂದುಗೂಡಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಸಮಾಜದ ಕಟ್ಟಕಡೆಯ ಜೀವಿ ಕಲ್ಯಾಣ ಸಾಧಿಸುವಂತಹ ಗಟ್ಟಿ ಸಾಹಿತ್ಯವನ್ನು ಇಂದಿನ ಯುವ ಬರಹಗಾರರು ಹಾಗೂ ಸಾಹಿತಿಗಳು ರಚಿಸಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ ನುಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಾತೃಭೂಮಿ ಸೇವಾ ಪ್ರತಿಷ್ಠಾನ ಹಾಗೂ ಕರ್ನಾಟಕ ಕಾಲೇಜಿನ ಸಹಯೋಗದಲ್ಲಿ ನಗರದ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ‘ಹದಿಹರೆಯಕ್ಕೆ ಸಾಹಿತ್ಯ ಸುಧೆ’ ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡದಿಂದ ಮರಾಠಿಗೆ, ಮರಾಠಿಯಿಂದ ಕನ್ನಡಕ್ಕೆ ಸಾಹಿತ್ಯ ಅನುವಾದ ಮಾಡುವ ಮೂಲಕ ಮೌಲಿಕ ವಿಷಯಗಳು ವಿನಿಮಯವಾಗುವಂತೆ ಮಾಡಬೇಕು. ಈ ಮೂಲಕ ಗಡಿ ಸಮಸ್ಯೆಗಳು ತಲೆ ಎತ್ತದಂತೆ ಹಾಗೂ ವೈಮನಸ್ಸು ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ವರ್ಗ ಸಂಘರ್ಷದಿಂದ ಎಂದಿಗೂ ಸಮಾಜದ ಸುಧಾರಣೆಯಾಗುವುದಿಲ್ಲ. ಸಾಮರಸ್ಯದಿಂದ ಮಾತ್ರ ವಿಕಾಸ ಸಾಧ್ಯ. ಹೀಗಾಗಿ ಮನಸ್ಸುಗಳನ್ನು ಜೋಡಿಸುವ ಕಾರ್ಯಗಳು ನಡೆಯಬೇಕು’ ಎಂದು ತಿಳಿಸಿದರು.

‘ಹದಿಹರೆಯ ಎನ್ನುವುದನ್ನು ಅಪಾಯಕಾರಿ ಎಂದು ಭಾವಿಸುವ ಅಗತ್ಯವಿಲ್ಲ. ಹದಿಹರೆಯದಲ್ಲಿ ಬಿತ್ತಿದ ಬೀಜ ಹೆಮ್ಮರವಾಗಿ ಬೆಳೆದು ಮುಂದಿನ ದಿನಗಳಲ್ಲಿ ವ್ಯಕ್ತಿತ್ವ ರೂಪಿಸುತ್ತದೆ’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ಬೀದರ್‌ನಲ್ಲಿ ಯುವ ಬರಹಗಾರರ ಬೃಹತ್ ಸಮಾವೇಶ ಹಮ್ಮಿಕೊಂಡರೆ ಅಕಾಡೆಮಿ ವತಿಯಿಂದ ಸಹಕಾರ ನೀಡಲಾಗುವುದು’ ಎಂದರು.

‘ವಿದ್ಯಾರ್ಥಿ ದೆಸೆಯಲ್ಲಿ ಸಾಹಿತ್ಯ ರಚನೆ ಶುರುವಾಗಬೇಕು. ಹದಿಹರೆಯದಲ್ಲಿ ಮೂಡುವ ಚಿಂತನೆಗಳಿಗೆ ಸಾಹಿತ್ಯದ ರೂಪ ನೀಡಬೇಕು’ ಎಂದು ಸಾಹಿತಿ ಶಿವಕುಮಾರ ಕಟ್ಟೆ ತಿಳಿಸಿದರು.

‘ಉತ್ತಮ ಸಾಹಿತ್ಯ ಮನುಷ್ಯನನ್ನು ಚಿಂತನೆಗೆ ಒಳಪಡಿಸುತ್ತದೆ. ಸಾಹಿತ್ಯ ರಚನೆಯೂ ಒಂದು ಕುಶಲಕಲೆ. ನಮ್ಮೊಳಗಿನ ವ್ಯಕ್ತಿಯನ್ನು ಹೊರತರುವ ಕ್ರಿಯೆಯಾಗಿದೆ. ಇಂದಿನ ವಿದ್ಯಾರ್ಥಿಗಳು ಮೊಬೈಲ್, ಫೇಸ್‍ಬುಕ್, ವಾಟ್ಸ ಆ್ಯಪ್‍ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಮಾತೃಭೂಮಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಗುರುನಾಥ ರಾಜಗೀರಾ ಪ್ರಾಸ್ತಾವಿಕ ಮಾತನಾಡಿದರು.
ಸ್ವ-ರಚಿತ ಕವನ ವಾಚಿಸಿದ ಪ್ರಾರ್ಥನಾ, ನಿಕಿತಾ, ಶಿಭಾ, ರೀಟಾ ಹಾಗೂ ಭವಾನಿ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.

ಪ್ರೊ.ಡಿ.ಬಿ ಕಂಬಾರ, ಎಂ.ಬಿ ಯೋಗೇಶ, ಸುನೀತಾ ಕೂಡ್ಲಿಕರ್ ಇದ್ದರು. ಪ್ರಾಚಾರ್ಯ ಜಗನ್ನಾಥ ಹೆಬ್ಬಾಳೆ ಸ್ವಾಗತಿಸಿದರು. ಸಚಿನ್ ವಿಶ್ವಕರ್ಮ ನಿರೂಪಿಸಿದರು. ವಿವೇಕಾನಂದ ಸಜ್ಜನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.