ADVERTISEMENT

ಸಾಹಿತ್ಯ ಮನುಷ್ಯನ ಜೀವನದ ಅವಿಭಾಜ್ಯ 

ಕರ್ನಾಟಕ ಸಾಹಿತ್ಯ ಸಂಘದಲ್ಲಿ ಸಾಹಿತ್ಯ ವೇದಿಕೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2022, 6:45 IST
Last Updated 18 ಡಿಸೆಂಬರ್ 2022, 6:45 IST
ಬೀದರ್‌ನ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಆಯೋಜಿಸಿದ್ದ ಸಾಹಿತ್ಯ ವೇದಿಕೆ ಕಾರ್ಯಕ್ರಮವನ್ನು ಸಾಹಿತಿ ಸುನೀತಾ ಬಿರಾದಾರ ಉದ್ಘಾಟಿಸಿದರು
ಬೀದರ್‌ನ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಆಯೋಜಿಸಿದ್ದ ಸಾಹಿತ್ಯ ವೇದಿಕೆ ಕಾರ್ಯಕ್ರಮವನ್ನು ಸಾಹಿತಿ ಸುನೀತಾ ಬಿರಾದಾರ ಉದ್ಘಾಟಿಸಿದರು   

ಬೀದರ್: ಸಾಹಿತ್ಯ ಎನ್ನುವುದು ಇಂದು ಪ್ರತಿಯೊಬ್ಬ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಕವನ, ಕಥೆ, ಕಾದಂಬರಿಗಳಂತಹ ಸಾಹಿತ್ಯ ರಚನೆಯಿಂದ ವ್ಯಕ್ತಿಯ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದು ಹಿರಿಯ ಸಾಹಿತಿ ಸುನೀತಾ ಬಿರಾದಾರ ತಿಳಿಸಿದರು.

ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಸಹಯೋಗದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಆಯೋಜಿಸಿದ್ದ ಸಾಹಿತ್ಯ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಪರಸ್ಪರ ಮನಸ್ಸುಗಳು ಸಂಚುಕಿತಗೊಂಡು ಅನರ್ಥದಿಂದ ಅನಾಹುತಗಳಾಗುತ್ತಿವೆ. ಹೃದಯ ವೈಶಾಲ್ಯವಿಲ್ಲದೆ ಎಲ್ಲೆಲ್ಲೂ ಬರೀ ವಿವಾದಗಳು ಕಂಡುಬಂದು ಹೃದಯದ ಬೆಸುಗೆ ಕಡಿಮೆಯಾಗುತ್ತಿವೆ. ಮನಸ್ಸುಗಳನ್ನು ಒಂದುಗೂಡಿಸಿ, ಸಮಾಜವನ್ನು ಸಧೃಢವಾಗಿ ಕಟ್ಟುವ ಸಾಹಿತ್ಯಗಳನ್ನು ರಚನೆ ಮಾಡಬೇಕಾಗಿದೆ ಎಂದರು.

ADVERTISEMENT

ಸಾಹಿತಿಗಳ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ. ದೇಶ-ದೇಶಗಳ ಮಧ್ಯೆ ಹಾಗೂ ಮಾನವನ ಮಧ್ಯೆ ಪ್ರೀತಿ-ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯವನ್ನು ಸೇತುವೆಯಾಗಿ ಮಾಡಿಕೊಂಡು ಗಟ್ಟಿಯಾಗಿ ರಚನೆ ಮಾಡಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಮಾತನಾಡಿ, ಕವಿಗಳು ಸಮಾಜಮುಖಿಯಾಗಿರಬೇಕು. ಕವಿಗಳಾಗುವವರು ಸದಾ ಅಧ್ಯಯನಶೀಲರಾಗಿರಬೇಕು. ನಾಡಿನ ಹೆಸರಾಂತ ಕವಿಗಳ ಕವಿತೆಗಳನ್ನು ಅಧ್ಯಯನ ಮಾಡುವಂತಿರಬೇಕು ಎಂದು ನುಡಿದರು.

ನಿಘಂಟು ನೋಡುವುದರಿಂದ ಉತ್ತಮ ಕಾವ್ಯಗಳನ್ನು ಕಟ್ಟಲು ಸಾಧ್ಯವಾಗುತ್ತದೆ. ಕವಿತೆಗಳನ್ನು ವರ್ತಮಾನಕ್ಕೆ ಸಂಬಂಧಿಸಿದಂತೆ ರಚಿಸಿದರೆ ವ್ಯಕ್ತಿಯ ಹೃದಯಕ್ಕೆ ಮುಟ್ಟಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘವು ಉದಯೋನ್ಮುಖ ಕವಿಗಳನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ದುಡಿಯುತ್ತಿದೆ. ಯುವಕರು ಹೆಚ್ಚು ಸಾಹಿತ್ಯದ ಕಡೆಗೆ ಒಲವು ತೋರಿಸಬೇಕು. ಇಂತಹ ಕವಿಗೋಷ್ಠಿಗಳಲ್ಲಿ ಪ್ರೇಕ್ಷಕರಾಗಿಯೂ ಪಾಲ್ಗೊಂಡು ಸಾಹಿತ್ಯದ ಕುರಿತು ಅಭಿರುಚಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಕರ್ನಾಟಕ ಕಾಲೇಜಿನ ಉಪನ್ಯಾಸಕಿ ಸುನೀತಾ ಕೂಡ್ಲಿಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಪ್ರೊ. ಎಸ್.ಬಿ.ಬಿರಾದಾರ, ಶಂಕರರಾವ ಹೊನ್ನಾ, ಅಶೋಕ ಎಲಿ, ಶಿವಾನಂದ ಗುಂದಗಿ, ಪ್ರಕಾಶ ಕನ್ನಾಳೆ ಇದ್ದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ವೈಷ್ಣವಿ ಮೂಲಗೆ ಪ್ರಾರ್ಥಿಸಿದರು. ಸಂಶೋಧನಾ ವಿದ್ಯಾರ್ಥಿ ಕಿರಣ ವಲ್ಲೆಪುರೆ ನಿರೂಪಿಸಿದರು. ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವಂದಿಸಿದರು.

ಕವಿಗೋಷ್ಠಿ: ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ಮಾಂಗಲ್ಯದ ಮಹತ್ವ, ಸಾಹಿತ್ಯ ಸಂಘ, ಹಾರಕೂಡಶ್ರೀಗಳು, ಗುರುಶಿಷ್ಯರ ಸಂಬಂಧ, ತಂದೆ-ತಾಯಿ ಮಹತ್ವ, ಓಝೋನ್ ಪದರಿನ ಮಹತ್ವ, ಬದುಕಿನ ಬವಣೆ, ಪರಿಸರ ಹಾಗೂ ದೇಶಭಕ್ತಿ ಕುರಿತ ಕವನಗಳು ಮೂಡಿ ಬಂದವು.

ಎಸ್.ಬಿ.ಕುಚಬಾಳ, ಮಹಾರುದ್ರ ಡಾಕುಳಗೆ, ಮಹಾನಂದ ಮಡಕಿ, ಸಾವಿತ್ರಿಬಾಯಿ ಹೆಬ್ಬಾಳೆ, ಮಲ್ಲಮ್ಮ ಸಂತಾಜಿ, ಮಹಾದೇವಿ ಕಪಲಾಪುರೆ, ಮಾನಾ ಸಂಗೀತಾ, ಸ್ವರೂಪಾ ನಾಗೂರೆ, ಅಂಬಿಕಾ ಬಿರಾದಾರ, ರಕ್ಷಿತಾ, ಮಹಾಂತೇಶ, ಪವನ ಬಾರೆ, ಕಿರಣ ವಲ್ಲೆಪುರೆ ಕವನ ವಾಚನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.