ADVERTISEMENT

ಬೀದರ್‌ ಪಶು ವಿಶ್ವವಿದ್ಯಾಲಯದಲ್ಲಿ ಜ. 17ರಿಂದ ಜಾನುವಾರು, ಕುಕ್ಕುಟ, ಮತ್ಸ್ಯಮೇಳ

ಕುಲಪತಿ ಡಾ. ಕೆ.ಸಿ. ವೀರಣ್ಣ ತಿಳಿಸಿದರು.

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 10:15 IST
Last Updated 13 ಜನವರಿ 2025, 10:15 IST
<div class="paragraphs"><p>ಜಾನುವಾರು (ಸಂಗ್ರಹ ಚಿತ್ರ)</p></div>

ಜಾನುವಾರು (ಸಂಗ್ರಹ ಚಿತ್ರ)

   

ಬೀದರ್‌: ‘ತಾಲ್ಲೂಕಿನ ಕಮಠಾಣ ಸಮೀಪದ ನಂದಿನಗರದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜ. 17ರಿಂದ 19ರ ವರೆಗೆ ವಿವಿಧ ಜಾನುವಾರು, ಕುಕ್ಕುಟ ತಳಿಗಳ ಪ್ರದರ್ಶನ ಮತ್ತು ಮತ್ಸ್ಯ ಮೇಳ ಜರುಗಲಿದೆ’ ಎಂದು ಕುಲಪತಿ ಡಾ. ಕೆ.ಸಿ. ವೀರಣ್ಣ ತಿಳಿಸಿದರು.

ಸಂಶೋಧನೆ ಮತ್ತು ತಂತ್ರಜ್ಞಾನದ ಫಲ ರೈತರಿಗೆ ತಲುಪಿಸುವ ಉದ್ದೇಶದಿಂದ ಮೂರು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು, ಪಶು ಹಾಗೂ ಮೀನು ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿರುವ ಯುವಜನರಿಗೆ ಇದರಲ್ಲಿ ಅತ್ಯಮೂಲ್ಯ ಮಾಹಿತಿ ಲಭ್ಯವಾಗುತ್ತದೆ. ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕಂಡುಕೊಳ್ಳಲು ನೆರವಾಗಲಿದೆ ಎಂದು ವಿಶ್ವವಿದ್ಯಾಲಯದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ADVERTISEMENT

ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಪ್ರಗತಿಪರ ರೈತರ 180 ಮಳಿಗೆಗಳು ವಿಶ್ವವಿದ್ಯಾಲಯದ ಆವರಣದಲ್ಲಿ ತಲೆ ಎತ್ತಲಿವೆ. ಹೈನುಗಾರಿಕೆ, ಜಾನುವಾರುಗಳ ಸಾಕಾಣಿಕೆಗೆ ಸಂಬಂಧಿಸಿದ ನವೀನ ಪರಿಕರಗಳ ಪ್ರದರ್ಶನವೂ ಇರುತ್ತದೆ. ರಾಜ್ಯದ 31 ಜಿಲ್ಲೆಗಳಿಂದ ಒಬ್ಬ ರೈತ ಹಾಗೂ ರೈತ ಮಹಿಳೆಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ರೈತರು–ವಿಜ್ಞಾನಿಗಳ ಸಂವಾದ, ರೈತರ ನಡುವೆ ಚರ್ಚೆಗಳು ಜರುಗಲಿವೆ ಎಂದು ತಿಳಿಸಿದರು.

ಮೇಳದಲ್ಲಿ ಸಂವಾದ, ಕಾರ್ಯಾಗಾರ, ವಿವಿಧ ತಳಿಗಳ ಪ್ರದರ್ಶನ, ಕೃಷಿ, ಹೈನುಗಾರಿಕೆಯ ಹೊಸ ತಂತ್ರಜ್ಞಾನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗಲಿವೆ. ಸುಗಮ ಸಂಗೀತ, ಭರತನಾಟ್ಯ, ಡೊಳ್ಳು ಕುಣಿತ, ಕಂಸಾಳೆ ಸೇರಿದಂತೆ ಹಲವು ಜಾನಪದ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಜ. 17ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸುವರು. ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅಧ್ಯಕ್ಷತೆ ವಹಿಸುವರು. ಪೌರಾಡಳಿತ ಸಚಿವ ರಹೀಂ ಖಾನ್‌, ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್‌ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮೇಳದಲ್ಲಿ ಸುಮಾರು 50 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ. ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕುಲಸಚಿವ ಪಿ. ಟಿ. ರಮೇಶ, ಡೀನ್‌ ಹಾಗೂ ವಿಜ್ಞಾನಿ ಡಾ. ಶಿವಪ್ರಕಾಶ, ಸಿಂಡಿಕೇಟ್‌ ಸದಸ್ಯ ಬಸವರಾಜ ಭತಮುರ್ಗೆ, ಮೇಳದ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಚನ್ನಪ್ಪಗೌಡ ಬಿರಾದಾರ, ಡಾ. ದಿಲೀಪಕುಮಾರ, ಅಶೋಕ ಪವಾರ, ವೀರ್‌ ಜಾಧವ, ಎಂ.ಕೆ. ತಾಂದಳೆ, ಅಹಮ್ಮದ್‌, ಶ್ರೀಕಾಂತ ಕುಲಕರ್ಣಿ ಹಾಜರಿದ್ದರು.

ಮೇಳಕ್ಕೆ ಉಚಿತ ಪ್ರವೇಶ

ಮೂರು ದಿನಗಳ ವರೆಗೆ ನಡೆಯಲಿರುವ ಮೇಳದಲ್ಲಿ ಭಾಗವಹಿಸುವವರಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತ ಪ್ರವೇಶ ಇರಲಿದೆ. ರಾಜ್ಯದ ವಿವಿಧ ಕಡೆಗಳಿಂದ ಬಂದು ಹೋಗುವ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅತಿ ಕಡಿಮೆ ಶುಲ್ಕದಲ್ಲಿ ಆಹಾರದ ಮಳಿಗೆಗಳನ್ನು ತೆರೆಯಲಾಗುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕುಲಪತಿ ಡಾ. ಕೆ.ಸಿ. ವೀರಣ್ಣ ಮನವಿ ಮಾಡಿದರು.

ಅಲಂಕಾರಿಕ ಮೀನುಗಳ ಪ್ರದರ್ಶನ

‘ಒಂಬತ್ತು ಸಾವಿರ ಚದರ ಅಡಿ ಜಾಗದಲ್ಲಿ ಅಲಂಕಾರಿಕ ಮೀನುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 16 ಮಳಿಗೆಗಳಲ್ಲಿ ವಿವಿಧ ತಳಿಗಳ ಮೀನುಗಳು ಪ್ರದರ್ಶನಕ್ಕೆ ಇರಲಿವೆ. ಮತ್ಸ್ಯಲೋಕವೇ ಧರೆಗೆ ಇಳಿಯಲಿದೆ’ ಎಂದು ಕುಲಪತಿ ಡಾ. ಕೆ.ಸಿ. ವೀರಣ್ಣ ತಿಳಿಸಿದರು.

‘ಸುಸ್ಥಿರ ಮೀನುಗಾರಿಕೆ, ಜಲಕೃಷಿಯನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶ. ಮೀನುಗಾರಿಕೆ ಶೈಕ್ಷಣಿಕ ಮತ್ತು ಉದ್ಯಮ ಮಳಿಗೆಗಳು, ರುಚಿಕರ ಆಹಾರ ಮಳಿಗೆ, ನೇಚರ್‌ ಅಕ್ವೇರಿಯಂ, ಚಿಪ್ಪುಗಳ ಪ್ರದರ್ಶನ ಕಣ್ತುಂಬಿಕೊಳ್ಳಬಹುದು’ ಎಂದು ಹೇಳಿದರು.

ಶಾಂತಿ, ಸಮಾನತೆಯ ಫಲಪುಷ್ಪ ಪ್ರದರ್ಶನ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪ್ರತಿವರ್ಷದ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ಉತ್ಸವದ ಸಂದರ್ಭದಲ್ಲಿ ಜರುಗುವ ಫಲಪುಷ್ಪ ಪ್ರದರ್ಶನದ ಮಾದರಿಯಲ್ಲಿ ‘ಶಾಂತಿ ಮತ್ತು ಸಮಾನತೆ’ಯ ಹೆಸರಿನಲ್ಲಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ.

‘ಹೂಗಳಿಂದ ಅಲಂಕರಿಸಿದ ಗೌತಮ ಬುದ್ಧನ ಮೂರ್ತಿ, ಬಸವಣ್ಣ, ಕುವೆಂಪು ಅವರ ಭಾವಚಿತ್ರಗಳನ್ನು ಹೂಗಳಿಂದ ಅಲಂಕರಿಸಲಾಗುತ್ತದೆ. ತರಕಾರಿಗಳನ್ನು ನೆಲದ ಮೇಲೆ ಕೆತ್ತಿ ತೋರಿಸುವ ವಿನೂತನ ಪ್ರದರ್ಶನ, ಹೂ ಕುಂಡಗಳ ಕಲಾತ್ಮಕ ಜೋಡಣೆ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದು ಕುಲಪತಿ ಡಾ. ಕೆ.ಸಿ. ವೀರಣ್ಣ ವಿವರಿಸಿದರು.

15 ತಳಿಗಳ 200 ಶ್ವಾನ ಪ್ರದರ್ಶನ

‘ಮೇಳದ ಕೊನೆಯ ದಿನವಾದ ಜ. 19ರಂದು 15 ವಿವಿಧ ತಳಿಗಳ 200 ಶ್ವಾನಗಳ ಪ್ರದರ್ಶನ ನಡೆಯಲಿದೆ. ಲ್ಯಾಬ್ರಡಾರ್‌, ರಿಟ್ರೀವರ್ಸ್‌, ಜರ್ಮನ್‌ ಶೆಫರ್ಡ್‌, ಗೋಲ್ಡನ್‌ ರಿಟ್ರೀವರ್ಸ್‌, ಪ್ರೊಮೆರೇನಿಯನ್ಸ್‌, ರಾಟ್‌ ವೀಲರ್ಸ್‌, ಗ್ರೇಟ್‌ ಡೇನ್ಸ್‌, ಬೀಗಲ್ಸ್‌, ಬಾಕ್ಸರ್‌, ಮುಧೋಳ ಹೌಂಡ್‌ ತಳಿ ನಾಯಿ ಪ್ರಮುಖ ಆಕರ್ಷಣೆಯಾಗಿರಲಿದೆ’ ಎಂದು ಕುಲಪತಿ ಡಾ. ಕೆ.ಸಿ. ವೀರಣ್ಣ ತಿಳಿಸಿದರು.

ಪ್ರತಿ ತಳಿಯಲ್ಲಿ ಗಂಡು, ಹೆಣ್ಣು ನಾಯಿಗಳಿಗೆ ಪ್ರಥಮ, ದ್ವಿತೀಯ ಬಹುಮಾನ ನೀಡಲಾಗುವುದು. ಮರಿಗಳ ವಿಭಾಗದಲ್ಲಿ ಅಗ್ರ 5 ನಾಯಿಮರಿಗಳ ಆಯ್ಕೆ ಮಾಡಲಾಗುವುದು. ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಶ್ವಾನಗಳಿಗೆ ಚಾಂಪಿಯನ್‌ ಆಫ್‌ ಚಾಂಪಿಯನ್ಸ್‌ ಮತ್ತು ರನ್ನರ್‌ ಅಪ್‌ ಚಾಂಪಿಯನ್‌ ಆಫ್‌ ಚಾಂಪಿಯನ್ಸ್‌ ಬಹುಮಾನ ನೀಡಲಾಗುವುದು. ಮೊದಲ ಬಹುಮಾನ ₹5 ಸಾವಿರ ನಗದು, ದ್ವಿತೀಯ ಬಹುಮಾನ ₹3 ಸಾವಿರ ನಗದು ಬಹುಮಾನ ಸಹ ಇರಲಿದೆ. ಇದೇ ಸಂದರ್ಭದಲ್ಲಿ ಎಲ್ಲ ಶ್ವಾನಗಳಿಗೆ ಉಚಿತ ರೇಬಿಸ್‌ ರೋಗ ನಿರೋಧಕ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.