ADVERTISEMENT

ಲೋಕಸಭಾ ಚುನಾವಣೆ | ಸರ್ಕಾರಿ ಅಧಿಕಾರಿ, ಸಿಬ್ಬಂದಿಗೆ ಕಾರ್ಯ ‘ಭಾರ’

ಲೋಕಸಭಾ ಚುನಾವಣೆ, ಎಸ್ಸೆಸ್ಸೆಲ್ಸಿ ಪರೀಕ್ಷೆ, ಸಾಲು ಸಾಲು ಹಬ್ಬ ಹರಿದಿನಗಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 25 ಮಾರ್ಚ್ 2024, 6:20 IST
Last Updated 25 ಮಾರ್ಚ್ 2024, 6:20 IST
ಹೋಳಿ ಹಬ್ಬದ ಅಂಗವಾಗಿ ಪೊಲೀಸರು ಬೀದರ್‌ನಲ್ಲಿ ಭಾನುವಾರ ಸಂಜೆ ಪಥ ಸಂಚಲನ ನಡೆಸಿದರು
ಹೋಳಿ ಹಬ್ಬದ ಅಂಗವಾಗಿ ಪೊಲೀಸರು ಬೀದರ್‌ನಲ್ಲಿ ಭಾನುವಾರ ಸಂಜೆ ಪಥ ಸಂಚಲನ ನಡೆಸಿದರು   

ಬೀದರ್‌: ದೈನಂದಿನ ಕಚೇರಿ ಕೆಲಸ, ಲೋಕಸಭಾ ಚುನಾವಣೆ, ಎಸ್ಸೆಸ್ಸೆಲ್ಸಿ ಪರೀಕ್ಷೆ, ಬರ ನಿರ್ವಹಣೆ, ಹಬ್ಬ ಹರಿದಿನಗಳು... ಹೀಗೆ ಒಂದಾದ ನಂತರ ಒಂದು ಬರುತ್ತಿರುವುದರಿಂದ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಈಗ ಬಿಡುವಿಲ್ಲದ ಕೆಲಸ. ಹೆಚ್ಚುವರಿ ಕಾರ್ಯ ‘ಭಾರ’.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆ ಸರ್ಕಾರಿ ನೌಕರರು, ಸಿಬ್ಬಂದಿ ಮೇಲಿದೆ. ಬಹುತೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಿದ್ದರೂ ಅವುಗಳ ಅನುಷ್ಠಾನಕ್ಕೆ ಪ್ರಯತ್ನಿಸುತ್ತಿದ್ದಾರೆ.

ಕಳೆದ ಆರು ತಿಂಗಳಿಂದ ಲೋಕಸಭಾ ಚುನಾವಣೆಯ ತಯಾರಿಯಲ್ಲಿ ನೌಕರರು ತೊಡಗಿಸಿಕೊಂಡಿದ್ದಾರೆ. ಈಗ ಚುನಾವಣೆ ಘೋಷಣೆಯಾಗಿದ್ದು, ಈಗ ಅವರಿಗೆ ಬಿಡುವಿಲ್ಲದ ಕೆಲಸ. ಪಿಯುಸಿ ಪರೀಕ್ಷೆ ಮುಗಿಯುತ್ತಿದ್ದಂತೆ ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರದಿಂದ (ಮಾ.245) ಆರಂಭವಾಗುತ್ತಿದ್ದು, ಏಪ್ರಿಲ್‌ 6ರ ವರೆಗೆ ನಡೆಯಲಿವೆ. ಇದಾದ ಬಳಿಕ ಪಿಯು, ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಬೇಕಿದೆ.

ADVERTISEMENT

ಇನ್ನು, ಸಮರ್ಪಕವಾಗಿ ಮಳೆಯಾಗದ ಕಾರಣಕ್ಕೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕುಡಿಯುವ ನೀರು, ಮೇವಿಗೆ ಕೊರತೆ ಆಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಇದೆ. ಇದಕ್ಕಾಗಿ ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ. ಇದರೊಟ್ಟಿಗೆ ಚುನಾವಣೆಯ ಕೆಲಸವನ್ನು ಚಾಚೂತಪ್ಪದೇ ಮಾಡಲೇಬೇಕಿದೆ. ಹೀಗೆ ಒಂದಾದ ನಂತರ ಒಂದು ಹೆಚ್ಚುವರಿ ಕೆಲಸ ಅವರ ಹೆಗಲ ಮೇಲೆ ಬೀಳುತ್ತಿರುವುದರಿಂದ ಅವರು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದರೆ, ಸರ್ಕಾರಿ ಆದೇಶ ಪಾಲಿಸಲೇಬೇಕಾದ ಅನಿವಾರ್ಯತೆ ಅವರಿಗಿದೆ.

ಅದರಲ್ಲೂ ಪೊಲೀಸರ ಮೇಲೆ ಹೆಚ್ಚಿನ ಒತ್ತಡ ಇದೆ. ಪ್ರತಿಯೊಂದಕ್ಕೂ ಪೊಲೀಸರು ಇರಲೇಬೇಕು. ಚುನಾವಣೆ, ಪರೀಕ್ಷೆ, ಹಬ್ಬ ಹರಿದಿನಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಹೊಣೆ ಪೊಲೀಸ್‌ ಇಲಾಖೆಯ ಮೇಲಿದೆ.

ಈಗ ಚುನಾವಣೆ ಘೋಷಣೆ ಆಗಿರುವುದರಿಂದ ಪೊಲೀಸರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಅವುಗಳನ್ನು ತಡೆಯಬೇಕಿದೆ. ಇನ್ನೊಂದೆಡೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಅಕ್ರಮಗಳು ತಡೆಯದಂತೆ ನೋಡಿಕೊಳ್ಳಬೇಕು. ಹೋಳಿ ಹಬ್ಬ, ರಂಜಾನ್‌ ಮಾಸ ಇರುವುದರಿಂದ ಶಾಂತಿ, ಸೌಹಾರ್ದತೆಗೆ ಧಕ್ಕೆ ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

‘ದಿನೇ ದಿನೇ ಪೊಲೀಸರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಟಿಎ, ಡಿಎ ಕೊಡುತ್ತಾರೆ. ಆದರೆ, ಅವಧಿ ಮೀರಿ ಕೆಲಸ ಮಾಡಿದರೆ ಆರೋಗ್ಯ ಏನಾಗಬಾರದು. ಕಾಲಕಾಲಕ್ಕೆ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಂಡರೆ ಈ ಪರಿಸ್ಥಿತಿ ಉಂಟಾಗುವುದಿಲ್ಲ. ಆದರೆ, ಆ ಕೆಲಸ ಆಗುತ್ತಿಲ್ಲ. ಹೀಗಾಗಿ ಇರುವ ಸಿಬ್ಬಂದಿ ಎಲ್ಲವೂ ಮಾಡಬೇಕಾದ ಪರಿಸ್ಥಿತಿ ಇದೆ. ಬೀದರ್‌ ಜಿಲ್ಲೆಯಲ್ಲಿ 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಆದರೆ, 1200ರಿಂದ 1500 ಪೊಲೀಸ್‌ ಸಿಬ್ಬಂದಿ ಇದ್ದೇವೆ. ವೈಜ್ಞಾನಿಕವಾಗಿ ಜನಸಂಖ್ಯೆಗೆ ತಕ್ಕಂತೆ ಇದು ಸರಿಯಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್‌ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಸಲ ಚುನಾವಣೆ ಬಂದಾಗ ಯಾಕಪ್ಪ ಇದು ಬಂತು ಅನಿಸುತ್ತದೆ. ನಿತ್ಯದ ಕಚೇರಿ ಕೆಲಸ ಮಾಡಲೇಬೇಕು. ಜೊತೆಗೆ ಚುನಾವಣೆಯ ಹೆಚ್ಚುವರಿ ಕೆಲಸ ಮಾಡಬೇಕು. ಚುನಾವಣೆ ಕೆಲಸದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಗೋಳು ತೋಡಿಕೊಂಡರು.

ಹೋಳಿ ಹಬ್ಬದ ಅಂಗವಾಗಿ ಬೀದರ್‌ನಲ್ಲಿ ಭಾನುವಾರ ಸಂಜೆ ಮಾರಾಟಕ್ಕೆ ಇಡಲಾಗಿದ್ದ ಬಗೆಬಗೆ ವಿನ್ಯಾಸದ ಬಲೂನ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು
ಹೋಳಿ ರಂಗಿನಾಟದ ಮುನ್ನನ ದಿನವಾದ ಭಾನುವಾರ ಬೀದರ್‌ನಲ್ಲಿ ಬಗೆಬಗೆಯ ಬಣ್ಣ ಪಿಚಕಾರಿಗಳನ್ನು ಜನ ಖರೀದಿಸಿದರು –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
‘ರಾಜ್ಯದಾದ್ಯಂತ ಒಂದೇ ವ್ಯವಸ್ಥೆ ಇದೆ’
ಪೊಲೀಸರಿಗೆ ಚುನಾವಣಾ ಕೆಲಸಕ್ಕೆ ಹೆಚ್ಚುವರಿ ಟಿಎ ಡಿಎ ಕೊಡಲಾಗುತ್ತದೆ. ಇಡೀ ರಾಜ್ಯದಾದ್ಯಂತ ಒಂದೇ ವ್ಯವಸ್ಥೆ ಇದೆ. ಪ್ರತಿಸಲ ಚುನಾವಣೆ ಬಂದಾಗ ಈ ಕೆಲಸ ಇದ್ದೇ ಇರುತ್ತದೆ. ಜೊತೆಗೆ ಕಾನೂನು ಸುವ್ಯವಸ್ಥೆಯೂ ನೋಡಿಕೊಳ್ಳಬೇಕಾಗುತ್ತದೆ. ನಮ್ಮ ಕರ್ತವ್ಯ ನಿಭಾಯಿಸಲೇಬೇಕಾಗುತ್ತದೆ. –ಚನ್ನಬಸವಣ್ಣ ಎಸ್‌.ಎಲ್‌. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬೀದರ್‌
‘ಚುನಾವಣೆ ಕೆಲಸದಿಂದ ಯಾರಿಗೂ ವಿನಾಯಿತಿ ಇಲ್ಲ’
ದೈನಂದಿನ ಕಚೇರಿ ಕೆಲಸದ ಜೊತೆಗೆ ಚುನಾವಣಾ ಕಾರ್ಯ ಮಾಡಲೇಬೇಕು. ಚುನಾವಣಾ ಆಯೋಗಕ್ಕೆ ಪ್ರತ್ಯೇಕ ಸಿಬ್ಬಂದಿ ಇಲ್ಲ. ರಾಜ್ಯದಾದ್ಯಂತ ಒಂದೇ ನಿಯಮ ಇದೆ. ಯಾರಿಗೂ ಚುನಾವಣೆ ಕೆಲಸದಿಂದ ವಿನಾಯಿತಿ ಇಲ್ಲ. ಎಲ್ಲರೂ ಅವರಿಗೆ ಒಪ್ಪಿಸಿದ ಕೆಲಸ ನಿರ್ವಹಿಸಲೇಬೇಕು. –ಗೋವಿಂದ ರೆಡ್ಡಿ ಜಿಲ್ಲಾ ಚುನಾವಣಾಧಿಕಾರಿ
‘ಒತ್ತಡ ಇರುವುದು ಸತ್ಯ’
ಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವುದು ಸತ್ಯ. ಚುನಾವಣೆ ಕರ್ತವ್ಯ ಎಲ್ಲರೂ ನಿಭಾಯಿಸಬೇಕು. ಮೇಲಧಿಕಾರಿಗಳ ಆದೇಶ ಎಲ್ಲರೂ ಪಾಲಿಸಬೇಕು. –ರಾಜೇಂದ್ರಕುಮಾರ ಗಂದಗೆ ರಾಜ್ಯ ಉಪಾಧ್ಯಕ್ಷ ಸರ್ಕಾರಿ ನೌಕರರ ಸಂಘ
ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ
ಬೀದರ್‌ ಜಿಲ್ಲೆಯಲ್ಲಿ ಸೋಮವಾರದಿಂದ (ಮಾ. 25) ಏಪ್ರಿಲ್‌ 6ರ ವರೆಗೆ 90 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಒಟ್ಟು 29645 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಮಾ. 25ರಂದು ಪ್ರಥಮ ಭಾಷಾ ಪರೀಕ್ಷೆ 27ರಂದು ಸಮಾಜ ವಿಜ್ಞಾನ 30ರಂದು ವಿಜ್ಞಾನ ಮತ್ತು ಏ. 2ರಂದು ಗಣಿತ 3ರಂದು ಅರ್ಥಶಾಸ್ತ್ರ ( ಅಂಧ ಮಕ್ಕಳಿಗೆ) 4ರಂದು ತೃತೀಯ ಭಾಷೆ 6ರಂದು ದ್ವೀತಿಯ ಭಾಷೆಗಳ ಪರೀಕ್ಷೆ ನಡೆಯಲಿದೆ. ಜಿಲ್ಲೆಯ 560 ಶಾಲೆಗಳಲ್ಲಿ ಮಕ್ಕಳು ಪರೀಕ್ಷೆಗಳನ್ನು ಬರೆಯುವರು. 27194 ವಿದ್ಯಾರ್ಥಿಗಳು ಮೊದಲ ಸಲ ಪರೀಕ್ಷೆ ಬರೆಯುತ್ತಿದ್ದಾರೆ. ರಿಪೀಟರ್‌ 2451 ಸೇರಿ ಒಟ್ಟು 29645 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು.
ಚೆಕ್‌ಪೋಸ್ಟ್‌ಗಳಿಲ್ಲ ಅನುಕೂಲಕರ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಜಿಲ್ಲೆಯಲ್ಲಿ 18 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಕೆಲವು ಕಡೆ ಟೆಂಟ್‌ ಮತ್ತೆ ಕೆಲವೆಡೆ ಟೀನ್‌ ಶೆಡ್‌ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಆದರೆ ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಸಮಸ್ಯೆಯಾಗುತ್ತಿದೆ ಎಂದು ಅಲ್ಲಿ ಕೆಲಸಕ್ಕೆ ನಿಯೋಜನೆಗೊಂಡವರು ಗೋಳು ತೋಡಿಕೊಂಡರು. ‘ಈಗ ವಿಪರೀತ ಬಿಸಿಲು. ಚೆಕ್‌ಪೋಸ್ಟ್‌ಗಳಲ್ಲಿ ಕೂರಲಾಗದಂತಹ ಪರಿಸ್ಥಿತಿ ಇದೆ. ಫ್ಯಾನ್‌ಗಳಿಗೆ ವ್ಯವಸ್ಥೆ ಮಾಡಬೇಕು. ಅಲ್ಲಿ ಕೆಲಸ ನಿರ್ವಹಿಸುವವರಿಗೆ ಉಪಾಹಾರ ಊಟ ಅಲ್ಲಿಯೇ ಕೊಟ್ಟರೆ ಸೂಕ್ತ. ಬಿಸಿಲು ತಡೆದುಕೊಳ್ಳುವ ಟೆಂಟ್‌ ಹಾಕಿಸಿದರೆ ಸೂಕ್ತ’ ಎಂದು ಹೆಸರು ಹೇಳಲಿಚ್ಛಿಸದ ಚೆಕ್‌ ಪೋಸ್ಟ್‌ ಸಿಬ್ಬಂದಿ ತಿಳಿಸಿದರು.
ಪೊಲೀಸರಿಂದ ಪಥ ಸಂಚಲನ
ರಂಜಾನ್‌ ಹಾಗೂ ಹೋಳಿ ಹಬ್ಬದ ಅಂಗವಾಗಿ ಪೊಲೀಸರು ಬೀದರ್‌ ನಗರದಲ್ಲಿ ಭಾನುವಾರ ಸಂಜೆ ಪ್ರಮುಖ ಮಾರ್ಗಗಳಲ್ಲಿ ಪಥ ಸಂಚಲನ ನಡೆಸಿದರು. ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ ಬಸವೇಶ್ವರ ವೃತ್ತ ನಯಾ ಕಮಾನ್‌ ಚೌಬಾರ ಮಹಮೂದ್‌ ಗಾವಾನ್‌ ಚೌಕ ವೃತ್ತದಲ್ಲಿ ಪಥ ಸಂಚಲನ ನಡೆಸಿದರು. ಕೆಎಸ್ಆರ್‌ಪಿ ಸಿವಿಲ್ ಪೊಲೀಸ್. ಡಿಎಆರ್ ಅಕ್ಕಪಡೆ ಗೃಹರಕ್ಷಕ ಸಿಬ್ಬಂದಿ ಪಾಲ್ಗೊಂಡಿದ್ದರು.  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಮಾತನಾಡಿ ರಂಜಾನ್‌ ಮಾಸ ಹೋಳಿ ಹಬ್ಬವನ್ನು ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಹೋಗುವವರ ಮೇಲೆ ಬಣ್ಣ ಎರಚಿ ತೊಂದರೆ ಉಂಟು ಮಾಡಬಾರದು ಎಂದು ಹೇಳಿದರು. ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ ಡಿವೈಎಸ್ಪಿ ಶಿವನಗೌಡ ಪಾಟೀಲ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.