ಬೀದರ್/ಬೆಂಗಳೂರು: ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ರಾಜ್ಯದ ವಿವಿಧೆಡೆ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಕಚೇರಿ, ಮನೆ ಹಾಗೂ ಮಳಿಗೆಗಳು ಸೇರಿ ಒಟ್ಟು 69 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಏಕಕಾಲಕ್ಕೆ ಪರಿಶೀಲನೆ ನಡೆಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ 31 ಕಡೆ, ಬೀದರ್ ಜಿಲ್ಲೆಯಲ್ಲಿ 24, ಕೊಪ್ಪಳ, ಚಿಕ್ಕಮಗಳೂರಿನಲ್ಲಿ ತಲಾ ಎರಡು ಕಡೆ, ರಾಮನಗರ, ಹಾಸನ, ಕೋಲಾರ, ಉಡುಪಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಎಡಿಜಿಪಿ ಮನೀಷ್ ಖರ್ಬಿಕರ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
2018ರಿಂದ 2022ರ ಅವಧಿಯಲ್ಲಿ ಕೆಲಸ ನಿರ್ವಹಿಸಿದ ವಿವಿ ಕುಲಪತಿ, ಕುಲಸಚಿವರು, ವಿವಿಧ ನಿಕಾಯದ ಡೀನ್‌ಗಳು, ಅಧಿಕಾರಿಗಳು, ಎಂಜಿನಿಯರ್‌ಗಳು, ಗುತ್ತಿಗೆ ನೌಕರರು ಹಾಗೂ ಸಿಬ್ಬಂದಿಯ ಮನೆಯ ವಿಳಾಸವನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಲೋಕಾಯುಕ್ತ ಮೂಲಗಳು ಖಚಿತಪಡಿಸಿವೆ.
ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ತನಿಖೆ ಮೇಲೆ ಸಂಪೂರ್ಣ ವಿಶ್ವಾಸವಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಕ್ರಮ ಎಸಗಿದವರಿಂದಲೇ ನಷ್ಟ ಭರಿಸಿಕೊಳ್ಳಬೇಕು.ವೆಂಕಟ್ ರೆಡ್ಡಿ, ದೂರುದಾರ, ನಿವೃತ್ತ ಪೌಲ್ಟಿ ವಿಜ್ಞಾನದ ಪ್ರಾಧ್ಯಾಪಕ
ಪರಿಶೀಲನೆಗೆ ಒಳಪಟ್ಟ ಅಧಿಕಾರಿ–ಸಿಬ್ಬಂದಿಯನ್ನು ಆರೋಪಿಗಳು ಎಂದು ಪರಿಗಣಿಸಬೇಕಿಲ್ಲ. ತನಿಖೆಯ ಭಾಗವಾಗಿ ಅವರ ಇರುವಿಕೆ ಮತ್ತು ವಿಳಾಸಗಳನ್ನು ಪರಿಶೀಲಿಸಲಾಗಿದೆ ಅಷ್ಟೆ. ತನಿಖೆ ಮುಂದುವರೆದಂತೆ ಅವರನ್ನು ವಿಚಾರಣೆಗೆ ಒಳಪಡಿಸಬಹುದು ಇಲ್ಲವೇ ಸಾಕ್ಷಿಯಾಗಿ ಪರಿಗಣಿಸಬಹುದು ಎಂದು ಮೂಲಗಳು ವಿವರಿಸಿವೆ.
‘ನಿವೃತ್ತ ನೌಕರರೊಬ್ಬರಿಗೆ ಸೇರಿದ ನಾಲ್ಕು ಟ್ರಕ್‌ಗಳು, ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಲವು ಸಿಬ್ಬಂದಿಯನ್ನು ಇಡೀ ದಿನ ಪ್ರಶ್ನಿಸಲಾಗಿದೆ’ ಎಂದು ಬೀದರ್ ಜಿಲ್ಲಾ ಲೋಕಾಯುಕ್ತ ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಆರೋಪವೇನು...
2018ರಿಂದ 2022ರವರೆಗಿನ ಅವಧಿಯಲ್ಲಿ ವಿಶ್ವವಿದ್ಯಾಲಯ ಹಾಗೂ ಅದರ ವ್ಯಾಪ್ತಿಯಲ್ಲಿರುವ ರಾಜ್ಯದ ವಿವಿಧ ಕಡೆಗಳಲ್ಲಿರುವ ಏಳು ಕಾಲೇಜುಗಳಿಗೆ ಪೀಠೋಪಕರಣ ಕಂಪ್ಯೂಟರ್ ಪ್ರಯೋಗಾಲಯದ ಉಪಕರಣಗಳು ಸೇರಿದಂತೆ ಇತರೆ ವಸ್ತುಗಳ ಖರೀದಿಯಲ್ಲಿ ₹32.26 ಕೋಟಿ ಅಕ್ರಮ ಎಸಗಲಾಗಿದೆ ಎಂದು ಪೌಲ್ಟ್ರಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ವೆಂಕಟ್ ರೆಡ್ಡಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಅವಧಿಯಲ್ಲಿ ಎಚ್.ಡಿ. ನಾರಾಯಣಸ್ವಾಮಿ ಕುಲಪತಿಯಾಗಿದ್ದರು. ಹಾಲಿ ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಆಗ ಕುಲಸಚಿವರಾಗಿದ್ದರು. ನಿವೃತ್ತ ಹಣಕಾಸು ನಿಯಂತ್ರಣ ಅಧಿಕಾರಿ ಪ್ರೊ.ಕೆ.ಎಲ್. ಸುರೇಶ ಸಹಾಯಕ ಹಣಕಾಸು ನಿಯಂತ್ರಣ ಅಧಿಕಾರಿ ಮೃತ್ಯುಂಜಯ ಗುತ್ತಿಗೆ ನೌಕರ ಸುನೀಲ್ ಪಾಟೀಲ್ ಸೇರಿ 15 ಮಂದಿಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.