ADVERTISEMENT

ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕ್ರಮ: ಎಸ್ಪಿ ಸಿದ್ದರಾಜು

ಸಾರ್ವಜನಿಕರ ಕುಂದು ಕೊರತೆ, ಅಹವಾಲು ಸ್ವೀಕಾರ ಸಭೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:26 IST
Last Updated 22 ಆಗಸ್ಟ್ 2025, 5:26 IST
ಹುಮನಾಬಾದ್ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾತನಾಡಿದರು
ಹುಮನಾಬಾದ್ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾತನಾಡಿದರು   

ಹುಮನಾಬಾದ್: ‘ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಬರುವ ಸಾರ್ವಜನಿಕರಿಗೆ ತೊಂದರೆ ಕೊಟ್ಟ ದೂರುಗಳು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.‌

‘ಸಾರ್ವಜನಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ವಿಳಂಬ ಮಾಡದೇ ಮಾಡಿಕೊಡಬೇಕಾಗಿದ್ದು ಸರ್ಕಾರಿ ನೌಕರರ ಕರ್ತವ್ಯ. ಭ್ರಷ್ಟಾಚಾರ ನಡೆಸಿದರೆ ಭ್ರಷ್ಟಾಚಾರ ಕಾಯ್ದೆಯಲ್ಲಿಯೇ ಕ್ರಮ ಜರುಗಿಸಬೇಕು ಎಂಬುದಿಲ್ಲ, ಲೋಕಾಯುಕ್ತ ಕಾಯ್ದೆಯಲ್ಲೂ ಕ್ರಮ ಜರುಗಿಸಲು ಅವಕಾಶವಿದೆ. ಪ್ರಕರಣ ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಖಚಿತ’ ಎಂದು ಎಚ್ಚರಿಸಿದರು.

ADVERTISEMENT

‘ಆರ್‌ಟಿಐ ಅಡಿ ಮಾಹಿತಿ ಕೇಳಿದರೆ ಕಾನೂನಿನ ಚೌಕಟ್ಟಿನಲ್ಲಿ ಒದಗಿಸಿ. ಇಲ್ಲದಿದ್ದಲ್ಲಿ ಹಿಂಬರಹ ನೀಡಿ. ಬ್ಲಾಕ್ ಮೇಲ್‌ ಮಾಡುವವರ ವಿರುದ್ಧ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ಸಲ್ಲಿಸಿ. ನಮಗೂ ಮಾಹಿತಿ ನೀಡಿ’ಎಂದರು.

ನಂತರ ಲೋಕಾಯುಕ್ತ ಅಧಿಕಾರಿಗಳ ತಂಡವು ರಸ್ತೆ ಹಾಳಾಗಿರುವ ಕುರಿತು ದೂರುಗಳು, ಪಿಂಚಣಿ ಮಂಜೂರಾತಿಯಲ್ಲಿ ಇರುವ ವಿಳಂಬ, ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಲಂಚ–ಅಕ್ರಮಗಳ ಬಗ್ಗೆ ಸಾರ್ವಜನಿಕರಿಂದ ನೇರವಾಗಿ ಮಾಹಿತಿ ಸ್ವೀಕರಿಸಿದರು. ವಿವಿಧ ಸಮಸ್ಯೆಗಳ ಬಗ್ಗೆ 6 ಅರ್ಜಿಗಳು ಸಲ್ಲಿಕೆಯಾಗಿವೆ.

ಅಹವಾಲುಗಳನ್ನು ಆಲಿಸಿದ ಬಳಿಕ ಲೋಕಾಯುಕ್ತ ಎಸ್.ಪಿ ಜನತೆ ನೀಡಿದ ಪ್ರತಿಯೊಂದು ದೂರುಗಳನ್ನೂ ದಾಖಲಿಸಿ, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಕ್ಷಣದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಹಣಮಂತರಾಯ, ಸಿಪಿಐಗಳಾದ ಸಂತೋಷ ರಾತೋರೆ, ಅರ್ಜುನಪ್ಪ, ತಹಶೀಲ್ದಾರ್ ಅಂಜುಮ್ ತಬಸುಮ್, ತಾ.ಪಂ ಇಒ ದಿಪೀಕಾ ನಾಯ್ಕರ್ ಸೇರಿದಂತೆ ಇತರರು ಇದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.