ಬಸವಕಲ್ಯಾಣ (ಬೀದರ್ ಜಿಲ್ಲೆ): ತಾಲ್ಲೂಕಿನ ನಿರ್ಗುಡಿ ಗ್ರಾಮದಲ್ಲಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ ಬಿರಾದಾರ (25) ಎಂಬ ಯುವಕನನ್ನು ಶುಕ್ರವಾರ ರಾತ್ರಿ ತಲೆ ಮೇಲೆ ಕಲ್ಲು ಹಾಕಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಪ್ರಶಾಂತ ಅದೇ ಊರಿನ ಅನ್ಯ ಸಮುದಾಯದ ಯುವತಿಯನ್ನು ಪ್ರೀತಿಸುತ್ತಿದ್ದನು. ಯುವಕ ಮರಾಠ ಸಮುದಾಯಕ್ಕೆ ಸೇರಿದವನಾಗಿದ್ದರೆ ಯುವತಿ ಕುರುಬ ಸಮುದಾಯದವಳು. ಈ ಯುವತಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ನೌಕರಿಯಲ್ಲಿದ್ದಾಳೆ. ಆದರೆ, ಯುವಕ ಪುಣೆಯಲ್ಲಿ ಗೂಡ್ಸ್ ವಾಹನ ಚಲಾಯಿಸುತ್ತಿದ್ದನು. ಕೆಲ ದಿನಗಳ ಹಿಂದೆ ಸಹೋದರಿಯ ಮದುವೆಗಾಗಿ ಊರಿಗೆ ಬಂದು ಇಲ್ಲಿಯೇ ಇದ್ದನು.
ಆಗ ಗ್ರಾಮದಲ್ಲಿಯೇ ಇದ್ದ ಯುವತಿಯೊಂದಿಗೆ ಈತ ಕೆಲ ಸಲ ಭೇಟಿ ಆಗಿರುವುದು ಯುವತಿಯ ಸಹೋದರರಿಗೆ ಸಿಟ್ಟಿಗೆ ತರಿಸಿದೆ. ಆದ್ದರಿಂದ ಗ್ರಾಮದ ಶಾಲೆ ಎದುರಿನ ರಸ್ತೆಯಲ್ಲಿ ಈತನೊಂದಿಗೆ ಜಗಳ ತೆಗೆದ ಯುವತಿಯ ಸಹೋದರರು ಆತನ ತಲೆಯ ಮೇಲೆ ಕಲ್ಲು ಹಾಕಿದ್ದಾರೆ. ಹೀಗಾಗಿ ಈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಯಲ್ಲಾಲಿಂಗ ಮೇತ್ರೆ ಮತ್ತು ಪ್ರಶಾಂತ ಮೆತ್ರೆ ಈ ಇಬ್ಬರು ಅಣ್ಣ ತಮ್ಮಂದಿರು ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಮೃತನ ತಂದೆ ಭರತ ಬಿರಾದಾರ ಠಾಣೆಗೆ ದೂರು ನೀಡಿದ್ದರಿಂದ ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.