ಬೀದರ್: ‘ಕಡಿಮೆ ಬಜೆಟ್‌ನಲ್ಲಿ ಮನೆ ನಿರ್ಮಿಸುವುದು ಹೇಗೆ ಎನ್ನುವುದರ ಬಗ್ಗೆ ಜನರಿಗೆ ಉಚಿತ ಸಲಹೆ ನೀಡುವ ‘ಬಿಲ್ಡ್ ಟೆಕ್–2025’ ಕಾರ್ಯಕ್ರಮವು ಜು.18ರಿಂದ 20ರವರೆಗೆ ನಗರದ ಕೇಂದ್ರ ಬಸ್ ನಿಲ್ದಾಣ ಸಮೀಪದ ಝೀರಾ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ತಿಳಿಸಿದರು.
‘ರಾಜ್ಯ ಹಾಗೂ ನೆರೆ ರಾಜ್ಯಗಳ 75 ಕಂಪನಿಗಳು ತಮ್ಮ ಉತ್ಪನ್ನಗಳನ್ನು ಸ್ಟಾಲ್‌ಗಳಲ್ಲಿ ಪ್ರದರ್ಶಿಸುವರು. ಪ್ರತಿದಿನ ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ ಈ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಭೇಟಿ ಕೊಟ್ಟು, ಪ್ರತಿಯೊಂದರ ಬಗ್ಗೆ ಉಚಿತವಾಗಿ ಸಲಹೆ ಪಡೆಯಬಹುದು. ಕ್ರೆಡಾಯ್ ಬೀದರ್ ಹಾಗೂ ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್‌ನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಒಂದು ಮನೆ ನಿರ್ಮಾಣಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಪ್ರದರ್ಶನದಲ್ಲಿ ಇರಿಸಲಾಗುತ್ತದೆ. ಆಧುನಿಕ ಕಾಲಕ್ಕೆ ತಕ್ಕಂತೆ ಮನೆ ನಿರ್ಮಿಸಲು ಅಗತ್ಯ ಸಲಹೆ ನೀಡಲಾಗುತ್ತದೆ. ಅನೇಕರು ಗುಣಮಟ್ಟದಿಂದ ಉತ್ತಮವಾದ ಮನೆ ನಿರ್ಮಿಸಬೇಕೆಂಬ ಕನಸು ಹೊಂದಿರುತ್ತಾರೆ. ಆದರೆ, ಅವರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡುವವರು ಎಲ್ಲಿ ಸಿಗುತ್ತಾರೆ ಎನ್ನುವುದು ಗೊತ್ತಿರುವುದಿಲ್ಲ. ಈ ಕಾರ್ಯಕ್ರಮಕ್ಕೆ ಬಂದರೆ ಪ್ರತಿಯೊಂದು ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು’ ಎಂದು ಹೇಳಿದರು.
‘ಗುಣಮಟ್ಟದ ಕಟ್ಟಡಗಳು ನಿರ್ಮಾಣವಾಗಬೇಕೆನ್ನುವುದು ನಮ್ಮ ಸದಾಶಯ. ವೃತ್ತಿಪರ ಕಾರ್ಮಿಕರು, ಗುಣಮಟ್ಟದ ವಸ್ತುಗಳು, ವಾಸ್ತು ವಿನ್ಯಾಸದ ಬಗ್ಗೆ ವಾಸ್ತು ತಜ್ಞರು, ಎಂಜಿನಿಯರ್‌ಗಳ ಬಗ್ಗೆಯೂ ಮಾಹಿತಿ ಪಡೆಯಬಹುದು. ಜು. 18ರಂದು ಮಧ್ಯಾಹ್ನ 12ಕ್ಕೆ ಸಂಸದ ಸಾಗರ್ ಖಂಡ್ರೆ ಚಾಲನೆ ನೀಡುವರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೆಸರಾಂತ ಎಂಜಿನಿಯರ್‌ಗಳ ಕೂಡ ಪಾಲ್ಗೊಳ್ಳುವರು’ ಎಂದು ವಿವರಿಸಿದರು.
ಕ್ರೆಡಾಯ್ ಕಾರ್ಯದರ್ಶಿ ಅನಿಲ್‌ಕುಮಾರ್ ಖೇಣಿ, ಪ್ರಮುಖರಾದ ಉಮಾಪತಿ, ಕಲ್ಮೇಶ್, ಸುಧೀರ್ ಅಗರವಾಲ್, ಪ್ರದೀಪ್ ಕುಲಕರ್ಣಿ, ಸತೀಶ ನೌಬಾದ್, ಸೋಮಶೇಖರ್ ಪಾಟೀಲ ಹಾಗೂ ಬಸವರಾಜ ಇದ್ದರು.
ಮೂರನೇ ವರ್ಷದ ಕಾರ್ಯಕ್ರಮ
‘2023ರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದ್ದರಿಂದ ಎರಡು ವರ್ಷಗಳ ನಂತರ ಪುನಃ ಆಯೋಜಿಸಲಾಗಿದೆ. ಇದು ಮೂರನೇ ವರ್ಷದ ಕಾರ್ಯಕ್ರಮ’ ಎಂದು ಕ್ರೆಡಾಯ್ ಅಧ್ಯಕ್ಷ ರವೀಂದ್ರನಾಥ ಮೂಲಗೆ ತಿಳಿಸಿದರು. ‘ಸದ್ಯ ಬೀದರ್ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಹೇಳಿಕೊಳ್ಳುವಂಥ ರೀತಿಯಲ್ಲಿ ನಡೆಯುತ್ತಿಲ್ಲ. ರಾಜ್ಯದಾದ್ಯಂತ ಬಹುತೇಕ ಇದೇ ಪರಿಸ್ಥಿತಿ ಇದೆ. ಕೈಗಾರಿಕೆಗಳು ಬಂದರೆ ರಿಯಲ್ ಎಸ್ಟೇಟ್ ಕ್ಷೇತ್ರ ವೇಗವಾಗಿ ಬೆಳೆಯುತ್ತದೆ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.