ADVERTISEMENT

ಜನವರಿಗೆ ಇನ್ನೂ ಹೆಚ್ಚಾಗಲಿದೆ ಚಳಿ

ಮೂರು ದಿನಗಳಿಂದ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌

ಚಂದ್ರಕಾಂತ ಮಸಾನಿ
Published 28 ಡಿಸೆಂಬರ್ 2019, 19:45 IST
Last Updated 28 ಡಿಸೆಂಬರ್ 2019, 19:45 IST
ಔರಾದ್ ತಾಲ್ಲೂಕಿನ ಬೋರಗಿ ಗ್ರಾಮದಲ್ಲಿ ವಿಪರೀತ ಚಳಿಯಿಂದಾಗಿ ಬೆಂಕಿ ಕಾಯಿಸಿಕೊಂಡ ಗ್ರಾಮಸ್ಥರು
ಔರಾದ್ ತಾಲ್ಲೂಕಿನ ಬೋರಗಿ ಗ್ರಾಮದಲ್ಲಿ ವಿಪರೀತ ಚಳಿಯಿಂದಾಗಿ ಬೆಂಕಿ ಕಾಯಿಸಿಕೊಂಡ ಗ್ರಾಮಸ್ಥರು   

ಬೀದರ್‌: ಅಪಘಾನಿಸ್ತಾನ ಕಡೆಯಿಂದ ಉತ್ತರಭಾರತದ ಕಡೆಗೆ ಬಲವಾಗಿ ಶೀತಗಾಳಿ ಬೀಸುತ್ತಿದೆ. ಇದೇ ಕಾರಣಕ್ಕೆ ದಖ್ಖನ್‌ ಪ್ರಸ್ಥಭೂಮಿಯಲ್ಲಿ ಈಗ ಚಳಿ ಹೆಚ್ಚಾಗಿದೆ. ಜನವರಿ ಮೊದಲ ಹಾಗೂ ಎರಡನೇ ವಾರದಲ್ಲಿ ಚಳಿ ಇನ್ನಷ್ಟು ಜಾಸ್ತಿಯಾಗಲಿದೆ.

ಬೀದರ್‌ ನಗರ, ಮನ್ನಳ್ಳಿ, ಭಾಲ್ಕಿ ತಾಲ್ಲೂಕಿನ ಹಲಬರ್ಗಾ, ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರು, ಮುಚಳಂಬ, ಔರಾದ್‌ ತಾಲ್ಲೂಕಿನ ದಾಬಕಾ ಹಾಗೂ ಬೋರಗಿಯಲ್ಲಿ
ಮೂರು ದಿನ ಹೆಚ್ಚು ಚಳಿ ಇತ್ತು. ಡಿಸೆಂಬರ್ 26 ರಿಂದ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇದೆ.

ಬೆಳಿಗ್ಗೆ ಮನೆಯಿಂದ ಹೊರಗೆ ಬರದಷ್ಟು ಚಳಿ ಇದೆ. ಜನ ತಲೆಗೆ ಟೊಪ್ಪಿಗೆ, ಸ್ವೇಟರ್‌, ಜರ್ಕಿನ್‌ ಹಾಗೂ ಶಾಲು ಹಾಕಿಕೊಂಡು ವಾಕಿಂಗ್ಗೆ ಹೊರಟಿದ್ದಾರೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವೃದ್ಧರು ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ.

ADVERTISEMENT

ನದಿ ತಟಗಳಲ್ಲಿರುವ ಗ್ರಾಮಗಳಲ್ಲಿ ಬೆಳಿಗ್ಗೆ 11 ಗಂಟೆಯಾದರೂ ಚಳಿ ಕಡಿಮೆಯಾಗುತ್ತಿಲ್ಲ. ಸಂಜೆ 4 ಗಂಟೆಗೆ ವೇಳೆಗೆ ಮತ್ತೆ ಚಳಿ ಆವರಿಸಿಕೊಳ್ಳುತ್ತಿದೆ. ಹೀಗಾಗಿ ಜನರು ಒಣ ಹುಲ್ಲು ಹಾಗೂ ಕಸಕ್ಕೆ ಬೆಂಕಿ ಇಟ್ಟು ಕಾಯಿಸಿಕೊಳ್ಳುತ್ತಿದ್ದಾರೆ.

ಕಂಕಣ ಸೂರ್ಯಗ್ರಹಣದ ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಬೆಳಿಗ್ಗೆ ಹಾಗೂ ಮಧ್ಯಾಹ್ನ ಮಳೆ ಹನಿಗಳು ಉದುರಿದ್ದವು. ಶುಕ್ರವಾರ ಹಾಗೂ ಶನಿವಾರ ಒಂದೇ ರೀತಿಯ ವಾತಾವರಣ ಇದ್ದ ಕಾರಣ ಅಸ್ತಮಾ ಹಾಗೂ ಶ್ವಾಸಕೋಶದ ಸೋಂಕು ಇರುವವರು ಕಿರಿಕಿರಿ ಅನುಭವಿಸಿದರು.

‘ಜಿಲ್ಲೆಯಲ್ಲಿ ಮೂರು ದಿನಗಳಿಂದ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ ಇದೆ. ಜನವರಿ ಮೊದಲ ಹಾಗೂ ಎರಡನೇ ವಾರದಲ್ಲಿ ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯಸ್‌ ವರೆಗೂ ಕುಸಿಯುವ ಸಾಧ್ಯತೆ ಇದೆ’ ಎಂದು ಬೀದರ್‌ನ ಹವಾಮಾನ ತಜ್ಞ ಬಸವರಾಜ ಬಿರಾದಾರ ಹೇಳುತ್ತಾರೆ.

‘ಈಶಾನ್ಯ–ಪೂರ್ವ ದಿಕ್ಕಿನಿಂದ ಬಲವಾದ ಶೀತಗಾಳಿ ಬೀಸುತ್ತಿದೆ. ಗಾಳಿಯಲ್ಲಿ ಸಣ್ಣಪ್ರಮಾಣದಲ್ಲಿ ದೂಳು ಸಹ ಇದೆ.ಅಸ್ತಮಾ ರೋಗಿಗಳಿಗೆ ಸಮಸ್ಯೆಯನ್ನು ಉಂಟು ಮಾಡಲಿದೆ. ರೋಗಿಗಳು ಬೆಳಗಿನ ಅವಧಿಯಲ್ಲಿ ಮನೆಯಿಂದ ಹೊರಗೆ ಬರದಿರುವುದೇ ಸೂಕ್ತ’ ಎನ್ನುತ್ತಾರೆ ಅವರು.

‘ಡಿಸೆಂಬರ್‌ 29ರಿಂದ ಜನವರಿ 3ರ ವರೆಗೆ ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗಲಿದೆ. ಆದರೆ ನಂತರದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿಯಲಿದೆ. ಹೊಸ ವರ್ಷದಲ್ಲಿ 15 ದಿನ ಚಳಿ ಮುಂದುವರಿಯಲಿದೆ’ ಎಂದು ಬೆಂಗಳೂರಿನ ಕೆಎಸ್‌ಎನ್‌ಡಿಎಂ ಯೋಜನಾ ವಿಜ್ಞಾನಿ ಗಂಗಾಧರ ಮಠ ಹೇಳುತ್ತಾರೆ.

ನಗರ ಪ್ರದೇಶದಲ್ಲಿ ಜನರು ಕಸಕ್ಕೆ ಬೆಂಕಿ ಹಚ್ಚಿ ಚಳಿಯಿಂದ ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಚಹಾ ಅಂಗಡಿಗಳ ಮುಂದೆ ಜನ ಸಾಲುಗಟ್ಟಿ ನಿಂತು ಚಹಾ ಸೇವಿಸುತ್ತಿದ್ದಾರೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ವೃತ್ತಗಳಲ್ಲಿ ಬೆಳಿಗ್ಗೆ ಚಹಾ ವ್ಯಾಪಾರ ಭರ್ಜರಿಯಾಗಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.