ADVERTISEMENT

ಕಮಲನಗರ| ಜಾನುವಾರುಗಳನ್ನು ಬಾಧಿಸುತ್ತಿದೆ ಚರ್ಮ ಗಂಟು ರೋಗ: ಕುಸಿದ ಹಾಲು ಉತ್ಪಾದನೆ

ಮೇವು ತಿನ್ನದೆ ಮೂಲಕ ರೋದನೆ ಮಾಡುತ್ತಿರುವ ದನ–ಕರುಗಳು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 6:47 IST
Last Updated 17 ಸೆಪ್ಟೆಂಬರ್ 2025, 6:47 IST
ಕಮಲನಗರ ತಾಲ್ಲೂಕಿನ ಮುರ್ಕಿ ಗ್ರಾಮದಲ್ಲಿ ಆಕಳು ಕರುವಿನಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿರುವುದು
ಕಮಲನಗರ ತಾಲ್ಲೂಕಿನ ಮುರ್ಕಿ ಗ್ರಾಮದಲ್ಲಿ ಆಕಳು ಕರುವಿನಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿರುವುದು   

ಕಮಲನಗರ: ದನ–ಕರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ಎರಡು ದಿನಗಳಿಂದ ತಾಲ್ಲೂಕಿನ ಗಡಿ ಗ್ರಾಮಗಳಾದ ದಾಬಕಾ (ಸಿ), ಚಿಕ್ಲಿ (ಯು), ಚಿಮ್ಮೇಗಾಂವ, ಮುರ್ಕಿ, ಡೋಣಗಾಂವ (ಎಂ), ಹೊಳಸಮುದ್ರ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದೆ.

ಸುಮಾರು 90ಕ್ಕೂ ಹೆಚ್ಚು ಜಾನುವಾರುಗಳಿಗೆ ಈ ರೋಗ ಕಾಣಿಸಿಕೊಂಡಿದೆ. ವಿಶೇಷವಾಗಿ ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡ ಗ್ರಾಮಗಳು ಹೆಚ್ಚು ಭಾದಿತವಾಗಿವೆ. ಈ ರೋಗದಿಂದಾಗಿ ಜಾನುವಾರುಗಳು ಮೇವು ತಿನ್ನದೆ ಮೂಕ ರೋದನ ಮಾಡುತ್ತಿವೆ. ಜಾನುವಾರುಗಳ ಹಾಲು ಉತ್ಪಾದನೆ ಕಡಿಮೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ADVERTISEMENT

ರಾಸುಗಳಲ್ಲಿ ಕಾಣಿಸಿಕೊಂಡ ಲಂಪಸ್ಕಿನ್ (ಚರ್ಮ ಗಂಟು ರೋಗ) ರೋಗ ನಿಯಂತ್ರಿಸಲು ಪಶು ವೈದ್ಯರ ತಂಡ ರಚಿಸಲಾಗಿದೆ. ತೀವ್ರತರ ರೋಗ ಬಾಧಿತ ರಾಸುಗಳಿಗೆ ಸ್ಥಳದಲ್ಲಿಯೇ ಲಸಿಕೆ ನೀಡಲಾಗಿದೆ. ರೈತರು ಆತಂಕ ಪಡದೆ ವೈದ್ಯರಿಂದ ಸೂಕ್ತ ಸಲಹೆ ಪಡೆದು ರಾಸುಗಳಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸುರೇಶ ದಿನಕರ್ ತಿಳಿಸಿದ್ದಾರೆ.

ರೋಗ ಲಕ್ಷಣಗಳು: ರಾಸುಗಳಲ್ಲಿ ಮೊದಲು ಮೈಮೇಲೆ ಗಂಟುಗಳು ಕಾಣಿಸಿಕೊಂಡು ಕೆಲವೇ ದಿನಗಳಲ್ಲಿ ಮೈ ತುಂಬಾ ಗಂಟು ಆವರಿಸಿಕೊಳ್ಳುತ್ತದೆ. ಜ್ವರ, ಹಾಲು ಉತ್ಪಾದನೆ ಕ್ಷೀಣಿಸುವುದು, ಜಾನುವಾರುಗಳು ಆಹಾರ ತಿನ್ನುವುದು ಕಡಿಮೆಯಾಗುತ್ತದೆ.

ರೋಗ ಹರಡುವುದು ಹೇಗೆ?: ಈ ಚರ್ಮಗಂಟು ರೋಗ ಒಂದು ಜಾನುವಾರಿನಿಂದ ಇನ್ನೊಂದು ಜಾನುವಾರಿಗೆ ಅತಿ ವೇಗವಾಗಿ ಹರಡುತ್ತದೆ. ರೋಗ ಬಂದ ಜಾನುವಾರಿನ ಜೊತೆಗೆನೇ ಎಲ್ಲ ಜಾನುವಾರುಗಳನ್ನು ಮೇಯಿಸುವುದು, ಒಂದೇ ಕೊಟ್ಟಿಗೆಯಲ್ಲಿ ಕಟ್ಟುವುದರಿಂದ ರೋಗ ಒಂದರಿಂದ ಒಂದಕ್ಕೆ ಅತಿ ವೇಗವಾಗಿ ಹರಡುತ್ತದೆ. ರೋಗ ಪೀಡಿತ ರಾಸುಗಳನ್ನು ಇತರ ರಾಸುಗಳಿಂದ ದೂರ ಇಡಬೇಕು. ಜಾನುವಾರು ಕಟ್ಟುವ ಸ್ಥಳದಲ್ಲಿ ನೊಣ ಮತ್ತು ಸೊಳ್ಳೆ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ರೋಗ ಅಂಟಿಕೊಂಡರೆ ಜಾನುವಾರಿನ ದೇಹದ ತುಂಬೆಲ್ಲ ಗಂಟುಗಳು ಆಗುತ್ತವೆ.

ಜಾನುವಾರುಗಳಲ್ಲಿ ಕಾಣಿಸಿಕೊಂಡ ಚರ್ಮಗಂಟು ರೋಗಕ್ಕೆ ಲಸಿಕೆ ಸೂಕ್ತವಾಗಿದೆ. ರೈತರು ತಕ್ಷಣ ಆಯಾ ಪಶು ವೈದ್ಯಾಧಿಕಾರಿಗಳನ್ನು ಭೇಟಿಯಾಗಿ ರಾಸುಗಳಿಗೆ ಲಸಿಕೆ ಹಾಕಿಸಿ ಜಾನುವಾರುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು
ಡಾ.ಸುರೇಶ ದಿನಕರ್ ಮುಖ್ಯ ಪಶುವೈದ್ಯಾಧಿಕಾರಿ ಕಮಲನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.