ADVERTISEMENT

ಕಾಯಕ, ದಾಸೋಹ ಬಸವ ತತ್ವದ ಜೀವಾಳ

ಮರಣವೇ ಮಹಾನವಮಿ ಉತ್ಸವದಲ್ಲಿ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 10:40 IST
Last Updated 9 ಅಕ್ಟೋಬರ್ 2019, 10:40 IST
ಬೀದರ್‌ನ ಶರಣ ಉದ್ಯಾನದಲ್ಲಿ ನಡೆದ ಹತ್ತು ದಿನದ ಮರಣವೇ ಮಹಾನವಮಿ ಮಹೋತ್ಸವದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೀನಾಕ್ಷಿ ಸಂಗ್ರಾಮ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ದೀಪ ಬೆಳಗಿಸಿದರು
ಬೀದರ್‌ನ ಶರಣ ಉದ್ಯಾನದಲ್ಲಿ ನಡೆದ ಹತ್ತು ದಿನದ ಮರಣವೇ ಮಹಾನವಮಿ ಮಹೋತ್ಸವದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೀನಾಕ್ಷಿ ಸಂಗ್ರಾಮ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ದೀಪ ಬೆಳಗಿಸಿದರು   

ಬೀದರ್‌: ‘ಕಾಯಕ, ಪ್ರಸಾದ ದಾಸೋಹಗಳು ಬಸವ ತತ್ವದ ಜೀವಾಳವಾಗಿವೆ. ಕಾಯಕದಿಂದ ಗಳಿಸಿದ ಸಂಪತ್ತನ್ನು ಬಳಸುವ ಕಲೆ ಪ್ರಸಾದ ಮತ್ತು ದಾಸೋಹಗಳಲ್ಲಿ ಅಡಕವಾಗಿದೆ’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.

ಇಲ್ಲಿನ ಶರಣ ಉದ್ಯಾನದಲ್ಲಿ ನಡೆದ 10 ದಿನದ ಮರಣವೇ ಮಹಾನವಮಿ ಮಹೋತ್ಸವದಲ್ಲಿ ‘ಪ್ರಸಾದ ತತ್ವ’ ಕುರಿತು ಮಾತನಾಡಿದರು.

‘ಸತ್ಯ ಶುದ್ಧ ಕಾಯಕದಿಂದ ಬಂದ ಪದಾರ್ಥಕ್ಕೆ ಪರಮಾತ್ಮನ ಅನುಗ್ರಹ ಬೆರೆತಾಗ ಅದು ಪ್ರಸಾದವಾಗುತ್ತದೆ. ಗಳಿಸಿದ್ದರಲ್ಲಿ ಇತರರಿಗೆ ದಾಸೋಹ ಗೈದ ನಂತರ ಉಳಿದದ್ದು ಪ್ರಸಾದ. ಪ್ರಸಾದವನ್ನು ಉಂಡರೆ ಪ್ರಸನ್ನತೆ ಲಭಿಸುತ್ತದೆ’ ಎಂದು ನುಡಿದರು.

ADVERTISEMENT

‘ಮಹಾಶಿವಶರಣ ಚನ್ನಯ್ಯನ ಅಂಬಲಿ ಪ್ರಸಾದವಾಗಿತ್ತು. ಚೋಳ ರಾಜನ ಪಂಚಪಕ್ವಾನಗಳಿಗಿಂತ ಚನ್ನಯ್ಯನ ಅಂಬಲಿಯೇ ರುಚಿಯೆನಿಸಲು ಕಾರಣ ಅದರಲ್ಲಿ ದೇವ ಕರುಣಾರಸ ಬೆರೆತಿತ್ತು. ಮೌನದಲ್ಲುಂಬುದು ಆಚಾರವಲ್ಲ. ಲಿಂಗಾರ್ಪಿತವಾದ ಬಳಿಕ ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು. ಕೂಡಲ ಸಂಗಮ ದೇವನ ನೆನೆಯುತ್ತಲುಂಡಡೆ ಕರಣ ವೃತ್ತಿಗಳಡಗುವವು ಎಂಬುದು ಗುರುದೇವರ ಸಂದೇಶವಾಗಿದೆ. ಇದನ್ನರಿತು ಭಕ್ತನಾದವನು ಲಿಂಗ ಪೂಜೆ ಮಾಡುವಾಗ ಯಾವ ಮನೋಸ್ಥಿತಿಯಲ್ಲಿರುವನೋ ಅದೇ ಮನೋಸ್ಥಿತಿಯಲ್ಲಿ ಪ್ರಸಾದ ಸೇವಿಸು ವುದು ಶರಣನ ಲಕ್ಷಣ’ ಎಂದರು.

ಉಪನ್ಯಾಸ ನೀಡಿದ ಉಮಾದೇವಿ ಚಿಲ್ಲರಗಿ, ‘ಅಷ್ಟಾವರಣಗಳಲ್ಲಿ ಪ್ರಸಾದಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಪ್ರಸಾದವು ಊಟ ಮಾಡುವ ಕ್ರಮವನ್ನು ಸಹ ತಿಳಿಸುತ್ತದೆ. ಆಢ್ಯತೆಯಿಂದ ಉಂಡು ಹೆಚ್ಚು ಮಾಡಿ ತಿಪ್ಪೆಗೆ ಸುರಿಯುವುದು ಪ್ರಸಾದವಲ್ಲ. ತನ್ನ ಬದುಕಿಗೆ ಮತ್ತು ಆರೋಗ್ಯಕ್ಕೆ ಬೇಕಾದಷ್ಟನ್ನು ಪರಮಾತ್ಮನಿಗೆ ಸಮರ್ಪಿಸಿ ಹಿತ-ಮಿತ ವಾಗಿ ಸೇವಿಸುವುದು ಪ್ರಸಾದ’ ಎಂದು ತಿಳಿಸಿದರು.

‘ಪ್ರಸಾದವಾದ ನಂತರ ತಟ್ಟೆ ತೊಳೆದು ಕುಡಿಯುವ ಪದ್ಧತಿ ಲಿಂಗಾಯತ ಧರ್ಮದಲ್ಲಿದೆ. ಆಹಾರಕ್ಕೆ ನೀಡುವ ಪರಮೋಚ್ಛ ಗೌರವವಿದು’ ಎಂದು ಮಾರ್ಮಿಕವಾಗಿ ಹೇಳಿದರು.

ಕಾವೇರಿ ಸ್ವಾಮಿ ಮಾತನಾಡಿ, ‘ಬಯಸಿ ಬಂದದ್ದು ಅಂಗಭೋಗ. ಬಯಸದೇ ಬಂದದ್ದು ಲಿಂಗಭೋಗ ಎಂದು ನಂಬಿ ತನ್ನ ಪಾಲಿಗೆ ಬಂದು ದ್ದನ್ನು ಪಂಚಾಮೃತ ಎಂದು ಭಾವಿಸಿ ಸಂತೃಪ್ತನಾಗಿರುವವನು ಪ್ರಸಾದಿ ಎನಿಸುವನು’ ಎಂದು ತಿಳಿಸಿದರು.

ಶಾಲಿನಿ ಚಿಂತಾಮಣಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೀನಾಕ್ಷಿ ಸಂಗ್ರಾಮ, ಸುನೀತಾ ಮಜಗೆ, ಲತಾ ವರ್ಮಾ, ವಿಜಯಲಕ್ಷ್ಮಿ ಬಿರಾದಾರ, ಚೆನ್ನಮ್ಮ ಎಚ್. ಸ್ವಾಮಿ ಮತ್ತು ಗಂಗಮ್ಮ ಸ್ವಾಮಿ ಇದ್ದರು. ರೇಖಾ ದುಬಲಗುಂಡೆ ಧ್ವಜಾರೋಹಣ ನೆರವೇರಿಸಿದರು.

ಭಾಗ್ಯಶ್ರೀ ಪಂಚಾಳ ವಚನಗಾಯನ ಮತ್ತು ಮಧುಮತಿ ಮೈನಾಳೆ ವಚನಪಠಣ ಮಾಡಿದರು. ಜ್ಯೋತಿ ಹಳಗುಂಡೆ ಸ್ವಾಗತಿಸಿದರು. ಪ್ರಭಾವತಿ ನಂದಿ ನಿರೂಪಿಸಿದರು. ಪದ್ಮಿನಿ ಕಾಜಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.