ADVERTISEMENT

‘ಮಹಾತ್ಮ ಬಸವೇಶ್ವರ’ ಹೊಸ ರೈಲು ಮಾರ್ಗಕ್ಕೆ ಬೇಡಿಕೆ

ಬೀದರ್‌ ಜಿಲ್ಲಾ ಬಿಜೆಪಿ ನಿಯೋಗದಿಂದ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 2:34 IST
Last Updated 17 ಜುಲೈ 2025, 2:34 IST
ಬೀದರ್‌ ಜಿಲ್ಲಾ ಬಿಜೆಪಿ ನಿಯೋಗ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು
ಬೀದರ್‌ ಜಿಲ್ಲಾ ಬಿಜೆಪಿ ನಿಯೋಗ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು   

ಬೀದರ್‌: ‘ಮಹಾರಾಷ್ಟ್ರದ ಲಾತೂರ್‌ ಜಂಕ್ಷನ್‌ನಿಂದ ಬಸವಕಲ್ಯಾಣ ಮಾರ್ಗವಾಗಿ ನೀಲಂಗಾವರೆಗೆ ಪ್ರಸ್ತಾವಿತ ‘ಮಹಾತ್ಮ ಬಸವೇಶ್ವರ’ ರೈಲು ಮಾರ್ಗದ ಅನುಮೋದನೆಯನ್ನು ಬೆಂಬಲಿಸಬೇಕು’ ಎಂದು ಬೀದರ್‌ ಜಿಲ್ಲಾ ಬಿಜೆಪಿ ನಿಯೋಗ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ಕೋರಿದೆ.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿಯೂ ಆದ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ನೇತೃತ್ವದ ನಿಯೋಗ ಮಹಾರಾಷ್ಟ್ರದ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

‘ಈ ರೈಲು ಮಾರ್ಗದ ಕುರಿತು ಈಗಾಗಲೇ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ವಿನಂತಿಸಲಾಗಿದೆ. ಈ ರೈಲು ಮಾರ್ಗದಿಂದ ಮರಾಠವಾಡ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳ ಸಂಪರ್ಕ ಸುಧಾರಿಸಲಿದೆ. ಅಭಿವೃದ್ಧಿಗೆ ವೇಗ ಸಿಗಲಿದೆ’ ಎಂದು ತಿಳಿಸಿದರು.

ADVERTISEMENT

‘ಕರ್ನಾಟಕ ಗಡಿಭಾಗದ ಲಾತೂರ್ ಹಾಗೂ ಉಸ್ಮಾನಾಬಾದ್‌ ಸಮೀಪ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್‌) ಸ್ಥಾಪಿಸಬೇಕು. ಈ ಪ್ರದೇಶದಲ್ಲಿ ಮಳೆ ಸಮರ್ಪಕವಾಗಿ ಆಗುವುದಿಲ್ಲ. ಕೃಷಿಕರು ಮುಂಬೈ, ಪುಣೆ, ಬೆಂಗಳೂರು ಮತ್ತು ಹೈದರಾಬಾದ್‌ ಮಹಾನಗರಗಳಿಗೆ ವಲಸೆ ಹೋಗುತ್ತಾರೆ. ವಿಶೇಷ ಆರ್ಥಿಕ ವಲಯವಾದರೆ ಸ್ಥಳೀಯವಾಗಿ ಉದ್ಯೋಗಗಳು ಸೃಷ್ಟಿಯಾಗುತ್ತವೆ. ವಲಸೆ ತಗ್ಗಿಸಬಹುದು. ಪ್ರಾದೇಶಿಕ ಅಭಿವೃದ್ಧಿಗೆ ಇಂಬು ನೀಡುತ್ತದೆ. ತೆಲಂಗಾಣದ ಜಹೀರಾಬಾದ್‌ನಲ್ಲಿ ರಾಷ್ಟ್ರೀಯ ಹೂಡಿಕೆ ಮತ್ತು ತಯಾರಿಕಾ ವಲಯದಿಂದ ಆಗಿರುವ ಧನಾತ್ಮಕ ಬದಲಾವಣೆಯ ಪರಿಣಾಮ ಇಲ್ಲೂ ನೋಡಬಹುದು’ ಎಂದು ನಿದರ್ಶನ ನೀಡಿದರು.

ಶಾಸಕರಾದ ಪ್ರಭು ಚವಾಣ್‌, ಶರಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ, ಮಹಾರಾಷ್ಟ್ರದ ಔಸ ಕ್ಷೇತ್ರದ ಶಾಸಕ ಅಭಿಮನ್ಯು ಪವಾರ ನಿಯೋಗದಲ್ಲಿದ್ದರು.

ಮುಖ್ಯಾಂಶಗಳು...

* ಮರಾಠವಾಡ, ಕಲ್ಯಾಣ ಕರ್ನಾಟಕಕ್ಕೆ ಸಂಪರ್ಕ

* ಗಡಿಭಾಗದಲ್ಲಿ ವಿಶೇಷ ಆರ್ಥಿಕ ವಲಯಕ್ಕೆ ಮನವಿ

* ಉದ್ಯೋಗ ಸೃಷ್ಟಿಸಿ ವಲಸೆ ತಪ್ಪಿಸಲು ಬಿಜೆಪಿ ಕೋರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.