ADVERTISEMENT

ಬೀದರ್| ಜಿಲ್ಲೆಯಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ

ಶೇಂಗಾ ಹೋಳಿಗೆ ಸವಿದರು, ಎಳ್ಳು–ಸಕ್ಕರೆ ಹಂಚಿದರು

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 14:48 IST
Last Updated 15 ಜನವರಿ 2020, 14:48 IST
ಬೀದರ್‌ನಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಬುಧವಾರ ಹೆಣ್ಣು ಮಕ್ಕಳಿಬ್ಬರು ತಾಯಿಯೊಂದಿಗೆ ಮನೆ ಅಂಗಳದಲ್ಲಿ ರಂಗೋಲಿ ಬಿಡಿಸಿದರು
ಬೀದರ್‌ನಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಬುಧವಾರ ಹೆಣ್ಣು ಮಕ್ಕಳಿಬ್ಬರು ತಾಯಿಯೊಂದಿಗೆ ಮನೆ ಅಂಗಳದಲ್ಲಿ ರಂಗೋಲಿ ಬಿಡಿಸಿದರು   

ಬೀದರ್: ಸಮೃದ್ಧಿಯ ಸಂಕೇತವಾದ ಮಕರ ಸಂಕ್ರಾಂತಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಮನೆ ಮನೆಗಳಲ್ಲೂ ಉತ್ತರಾಯಣ ಪುಣ್ಯ ಕಾಲದ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಹಿಳೆಯರು ಮನೆ ಅಂಗಳದಲ್ಲಿ ಆಸಕ್ತಿಯಿಂದ ಚಿತ್ತಾಕರ್ಷಕ ರಂಗೋಲಿ ಬಿಡಿಸಿದರು. ಪುರುಷರು ಸಂಪ್ರದಾಯದಂತೆ ಹಬ್ಬ ಆಚರಿಸಿದರು.

ಮಕ್ಕಳು, ಯುವಕರು, ಹಿರಿಯರು ಮೈಗೆ ಎಳ್ಳಿನ ಹಿಟ್ಟು ಹಚ್ಚಿಕೊಂಡು ಸ್ನಾನ ಮಾಡಿದರು. ದೇವರಿಗೆ ನೈವೇದ್ಯ ಅರ್ಪಿಸಿ, ಎಳ್ಳು-ಸಕ್ಕರೆ, ಪೇರಲ, ಬಾರೆಹಣ್ಣು, ಕ್ಯಾರೆಹಣ್ಣು, ಕಬ್ಬು ಸವಿದರು. ನಂತರ ಶೇಂಗಾ ಹೋಳಿಗೆ, ಸಿಹಿ ತಿನಿಸುಗಳೊಂದಿಗೆ ಊಟ ಮಾಡಿದರು.

ADVERTISEMENT

ಜಿಲ್ಲೆಯ ಅನೇಕ ಕಡೆ ಮಕ್ಕಳು, ಯುವಕರು ಗಾಳಿ ಪಟಗಳನ್ನು ಹಾರಿಸಿದರು. ಆಗಸದಲ್ಲಿ ಎತ್ತರೆತ್ತರಕ್ಕೆ ಗಾಳಿಪಟ ಹಾರಿಸುವುದು, ಪೇಂಚ್ ಹಾಕುವುದನ್ನು ಕಂಡು ಜನ ಖುಷಿಪಟ್ಟರು.

ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಆರ್‌.ಜಿ. ಹಿಬಾರೆ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ನಾಗರಾಜ ಹಿಬಾರೆ ಮಕ್ಕಳೊಂದಿಗೆ ಗಾಳಿಪಟ ಹಾರಿಸಿದರು.

ಹಬ್ಬದ ಪ್ರಯುಕ್ತ ರೈತರು ಹೊಸ ಬೆಳೆಗಳಿಗೆ ಪೂಜೆ ಸಲ್ಲಿಸಿದರು. ಹಳ್ಳಿಗಳಲ್ಲಿ ಜಾನುವಾರುಗಳ ಮೈ ತೊಳೆದು ಸಿಂಗರಿಸಿ, ಮೆರವಣಿಗೆ ಮಾಡಿ, ಕಿಚ್ಚು ಹಾಯಿಸಿದರು.

ಎಳ್ಳು-ಬೆಲ್ಲ ತಿಂದು ಹಿತ ನುಡಿಗಳನ್ನು ಆಡುವ ಉದ್ದೇಶದಿಂದ ಪರಸ್ಪರ ಎಳ್ಳು ಹಂಚಿ ಸಂಭ್ರಮಿಸಿದರು. ಮಕ್ಕಳು, ಯುವಕರು ಎಳ್ಳು, ಸಕ್ಕರೆ, ಕುಸುರೆಳ್ಳು ಮಿಶ್ರಣ ಮಾಡಿದ ಪಾಕೇಟ್‌ಗಳನ್ನು ಹಿಡಿದುಕೊಂಡು ಸ್ನೇಹಿತರು, ಬಂಧುಗಳ ಮನೆಗೆ ತೆರಳಿ ಎಳ್ಳು ಬೀರಿದರು. ಹಿರಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಸಂಕ್ರಾಂತಿ ದಿನ ಸೂರ್ಯ ಉತ್ತರದ ಕಡೆ ತನ್ನ ಪಥ ಬದಲಿಸುತ್ತಾನೆ. ಸೂರ್ಯನ ಪಥ ಬದಲಾವಣೆಯಿಂದ ಕೊರೆಯುವ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಇರುತ್ತದೆ ಎನ್ನುವ ನಂಬಿಕೆ ಜನರಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.