ADVERTISEMENT

ಭಾಲ್ಕಿ: ಮಲ್ಲಣ್ಣ ದೇವರ ಜಾತ್ರೆ ಆರಂಭ; ಹರಿದು ಬಂದ ಭಕ್ತ ಸಾಗರ

ಹರಿದು ಬಂದ ಭಕ್ತ ಸಾಗರ: ಭಕ್ತರು, ವ್ಯಾಪಾರಿಗಳಲ್ಲಿ ಮನೆ ಮಾಡಿದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:05 IST
Last Updated 1 ಡಿಸೆಂಬರ್ 2025, 5:05 IST
ಮಲ್ಲಣ್ಣ ದೇವರ ವಿಗ್ರಹ
ಮಲ್ಲಣ್ಣ ದೇವರ ವಿಗ್ರಹ   

ಭಾಲ್ಕಿ: ತಾಲ್ಲೂಕಿನ ಖಾನಾಪೂರದ ಐತಿಹಾಸಿಕ ಮಲ್ಲಣ್ಣ ದೇವರ ಒಂದು ತಿಂಗಳ ಪರ್ಯಂತ ನಡೆಯುವ ಜಾತ್ರಾ ಮಹೋತ್ಸವ ನ.26ರಂದು ಆರಂಭವಾಗಿದ್ದು, ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ವ್ಯಾಪಾರಿಗಳಲ್ಲಿ ಸಂತಸ, ಸಂಭ್ರಮ ಮನೆ ಮಾಡಿದೆ.

ಗ್ರಾಮದೆಲ್ಲೆಡೆ ವಿದ್ಯುತ್‌ ದೀಪಾಲಂಕಾರ ಕಂಗೊಳಿಸುತ್ತಿದೆ. ಸ್ವಾಗತ ಕೋರುವ ಪ್ಲೆಕ್ಸ್ ಗಳು ರಾರಾಜಿಸುತ್ತಿವೆ. ದೇವಾಲಯ ಆವರಣದಲ್ಲಿ ಸ್ವಚ್ಛತೆ, ಅಲಂಕಾರ ತುಂಬಿದೆ. ಇಡೀ ದೇವಾಲಯವು ಕಂಗೊಳಿಸುತ್ತಿದ್ದು, ದೀಪಾಲಂಕಾರ ಮತ್ತು ಇನ್ನಿತರ ವ್ಯವಸ್ಥೆಯು ಮಾಡಲಾಗಿದೆ. ದೇವಾಲಯದ ಪರಿಸರದಲ್ಲಿ ಅಂಗಡಿ ಮುಂಗಟ್ಟುಗಳು ತಲೆಯೆತ್ತಿವೆ. ತೆಂಗಿನಕಾಯಿ, ಧಾರ್ಮಿಕ ಕಾರ್ಯಗಳಿಗೆ ಬಳಸುವ ವಸ್ತುಗಳನ್ನು ಮಾರುವರು ಸಹ ಬೀಡುಬಿಟ್ಟಿದ್ದಾರೆ.

ಜಾತ್ರೆಯ ಮೊದಲ ಭಾನುವಾರ (ನ.30) ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದರು. ಸಾಕಷ್ಟು ಸಂಖ್ಯೆಯ ಭಕ್ತರು ಶನಿವಾರ ರಾತ್ರಿಯ ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನದ ಆವರಣ, ಯಾತ್ರಿ ನಿವಾಸದಲ್ಲಿ ತಂಗಿದ್ದರು. ನಸುಕಿನ ಜಾವದಲ್ಲಿ ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೆ ಪುಷ್ಪಣಿಯಲ್ಲಿ ಪವಿತ್ರ ಸ್ನಾನ ಮಾಡಿದರು. ನಂತರ ಮಲ್ಲಣ್ಣ ದೇವರ ದರ್ಶನ ಪಡೆದು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ಭಕ್ತಿ ಸಮರ್ಪಿಸಿದರು.

ADVERTISEMENT

ಜಾತ್ರೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಪ್ರತಿನಿತ್ಯ ಐದು ಸಾವಿರ ಭಕ್ತರು ಆಗಮಿಸುತ್ತಾರೆ. ಭಾನುವಾರಗಳಂದು ಸುಮಾರು 40 ರಿಂದ 50 ಸಾವಿರದವರೆಗೆ ಭಕ್ತರು ಆಗಮಿಸುತ್ತಾರೆ. ಒಟ್ಟಿನಲ್ಲಿ ಒಂದು ತಿಂಗಳ ಜಾತ್ರೆಯಲ್ಲಿ ಸುಮಾರು ಐದು ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎನ್ನುತ್ತಾರೆ ದೇವಸ್ಥಾನದ ವ್ಯವಸ್ಥಾಪಕ ಸಂಜು.

ಜಾತ್ರೆಯ ವಿವರ: ನ. 26 ರಂದು ರಾತ್ರಿ 9.30ಕ್ಕೆ ಮಲ್ಹಾರಿ ಮತ್ತು ಮಾಳಸಾಕಾಂತೆ ಹಾಗೂ ಭಾನು ಅವರ ಮದುವೆಯೊಂದಿಗೆ ಜಾತ್ರೆ ಆರಂಭವಾಗಿದೆ. ನ. 30 ರಂದು ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ ಹಾಗೂ ನಂದಿ ಮೇಲೆ ದೇವರ ವಿಗ್ರಹದ ಮೆರವಣಿಗೆ ಜರುಗಿತು. ಡಿ. 4 ರಂದು ರಾತ್ರಿ 8.30ಕ್ಕೆ ನವಿಲು ಮೇಲೆ ದೇವರ ವಿಗ್ರಹದ ಮೆರವಣಿಗೆ, ಡಿ. 7ರಂದು ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ, ಕುದುರೆ ಮೇಲೆ ದೇವರ ವಿಗ್ರಹದ ಮೆರವಣಿಗೆ, ಡಿ. 14 ರಂದು ಪಲ್ಲಕ್ಕಿ ಉತ್ಸವ, ಆನೆಯ ಮೇಲೆ ದೇವರ ವಿಗ್ರಹದ ಮೆರವಣಿಗೆ, ಡಿ. 21ರಂದು ಪಲ್ಲಕ್ಕಿ ಉತ್ಸವ, ನಂದಿಯ ಮೇಲೆ ದೇವರ ವಿಗ್ರಹದ ಮೆರವಣಿಗೆ ನಡೆಯಲಿದೆ. ಡಿ. 26 ರಂದು ಬೆಳಿಗ್ಗೆ 11ಕ್ಕೆ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಜರುಗಲಿದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕರು.

ಭಾಲ್ಕಿ ತಾಲ್ಲೂಕಿನ ಖಾನಾಪೂರದ ಮೈಲಾರ ಮಲ್ಲಣ್ಣ ದೇವರ ಜಾತ್ರೆಯ ಮೊದಲ ಭಾನುವಾರ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ
ದೇವಸ್ಥಾನ ಪಕ್ಕದ ಪವಿತ್ರ ಪುಷ್ಕರಣಿಯಲ್ಲಿ ಸ್ನಾನ ಮಾಡುತ್ತಿರುವ ಭಕ್ತರು
ಭಕ್ತರಿಗಾಗಿ ವಸತಿ ಪ್ರಸಾದ ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಒಂದು ತಿಂಗಳ ಜಾತ್ರೆಯಲ್ಲಿ ಸುಮಾರು 5 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ
ಸಂಜು ದೇವಸ್ಥಾನ ವ್ಯವಸ್ಥಾಪಕ
ಮಲ್ಲಣ್ಣ ದೇವರ ಜಾತ್ರೆ ಭಕ್ತರಲ್ಲಿ ಧಾರ್ಮಿಕ ಚೈತನ್ಯ ತುಂಬುವುದರ ಜೊತೆಗೆ ಸಣ್ಣಪುಟ್ಟ ವ್ಯಾಪಾರಿಗಳ ಮೊಗದಲ್ಲಿ ಹರ್ಷ ಮೂಡಿಸುತ್ತದೆ. ಜಾತ್ರೆ ವ್ಯಾಪಾರಿಗಳ ಆರ್ಥಿಕ ಚೈತನ್ಯಕ್ಕೆ ತುಂಬಾ ಸಹಾಯಕವಾಗಿದೆ
ಆಕಾಶ ಹಿರಿವಗ್ಗೆ, ಗ್ರಾಮಸ್ಥ

ಕೊಬ್ಬರಿ ಹಾರಿಸುವ ವೈಶಿಷ್ಟ್ಯ

ಮೈಲಾರ ಮಲ್ಲಣ್ಣನಿಗೆ ಭಕ್ತರು ಭಂಡಾರ ಹಾಗೂ ಕೊಬ್ಬರಿ ಹಾರಿಸುವ ವಾಡಿಕೆ ಇದೆ. ಇದಕ್ಕೆ ಚೌಪಡಿ ಎನ್ನುತ್ತಾರೆ. ಮಲ್ಲಣ್ಣ ದೇವರು ಅಸುರರನ್ನು ಸಂಹರಿಸಲು ಮಾರ್ಥಂಡ ರೂಪದಲ್ಲಿ ಬಂದಾಗ ಅಸುರರು ಮಾರ್ಥಂಡಗೆ ಹೊಡೆದು ತೀವ್ರ ಗಾಯಗೊಳಿಸಿದ್ದರು. ಆಗ ತನ್ನ ಮೈಗೆ ಭಂಡಾರ ಹಾಕಿಕೊಂಡ ತಕ್ಷಣವೇ ವಾಸಿಯಾಯಿತು. ಅಸುರರನ್ನು ಸಂಹರಿಸಿದ ಕಾರಣಕ್ಕಾಗಿ ತೆಂಗಿನ ಕಾಯಿ ಹಾರಿಸಿ ವಿಜಯೋತ್ಸವ ಆಚರಣೆ ಮಾಡಿದ್ದರಿಂದ ದೇವಸ್ಥಾನದಲ್ಲಿ ಭಂಡಾರ ಹಾಗೂ ತೆಂಗಿನಕಾಯಿ ಹಾರಿಸುವ ಪದ್ಧತಿಯಿದೆ ಎನ್ನುತ್ತಾರೆ ಹಿರಿಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.