ADVERTISEMENT

ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಭರಾಟೆ

ಗಾತ್ರಕ್ಕೆ ಅನುಗುಣವಾಗಿ ದರ ನಿಗದಿ: ಮಹಾರಾಷ್ಟ್ರ, ತೆಲಂಗಾಣಗಳಿಂದ ಹಣ್ಣು ಆವಕ

​ಪ್ರಜಾವಾಣಿ ವಾರ್ತೆ
Published 15 ಮೇ 2022, 12:41 IST
Last Updated 15 ಮೇ 2022, 12:41 IST
ಚಿಟಗುಪ್ಪ ಪಟ್ಟಣದ ಬಸವರಾಜ್‌ ವೃತ್ತದಲ್ಲಿ ಮಾವಿನ ಹಣ್ಣು ಮಾರಾಟ ಮಾಡುತ್ತಿರುವ ಮಹಿಳೆಯರು
ಚಿಟಗುಪ್ಪ ಪಟ್ಟಣದ ಬಸವರಾಜ್‌ ವೃತ್ತದಲ್ಲಿ ಮಾವಿನ ಹಣ್ಣು ಮಾರಾಟ ಮಾಡುತ್ತಿರುವ ಮಹಿಳೆಯರು   

ಚಿಟಗುಪ್ಪ: ಈಗ ಮಾವಿನ ಹಣ್ಣಿನ ಸುಗ್ಗಿ. ಎಲ್ಲೆಡೆ ಹಣ್ಣಿನ ರಾಜನದ್ದೇ ದರ್ಬಾರು.

ಪಟ್ಟಣ ಹಾಗೂ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಾವಿನ ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಗಾತ್ರಕ್ಕೆ ಅನುಗುಣವಾಗಿ ದರ ನಿಗದಿಪಡಿಸಲಾಗಿದೆ. ಹೀಗಾಗಿ, ಗ್ರಾಹಕರು ರಸಪೂರಿತ ಮಾವಿನ ಹಣ್ಣು ಖರೀದಿಗೆ ಮುಗಿಬೀಳುತ್ತಿದ್ದಾರೆ.

ಪಟ್ಟಣದಲ್ಲಿ ತಳ್ಳುವ ಗಾಡಿಗಳಲ್ಲೇ ಹೆಚ್ಚಾಗಿ ಮಾವಿನ ಹಣ್ಣಿನ ಮಾರಾಟ ನಡೆಯುತ್ತಿದೆ. ಆದಾಗ್ಯೂ ಸುತ್ತಲಿನ ವಳಖಿಂಡಿ, ಇಟಗಾ, ರಾಮಪುರ್‌, ಕುಡಂಬಲ್‌, ಮುಸ್ತರಿ, ಉಡಬಾಳ ಗ್ರಾಮಗಳಿಂದ ನಸುಕಿನ ಜಾವದಲ್ಲಿಯೇ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ವಿವಿಧ ಬಗೆಯ ಮಾವಿನ ಹಣ್ಣು ತುಂಬಿಕೊಂಡು ಬಂದು ಬಸವರಾಜ್‌ ವೃತ್ತದಲ್ಲಿ ಸಾಲಾಗಿ ಕುಳಿತು ಮಾರಾಟ ಮಾಡುತ್ತಿದ್ದಾರೆ.

ADVERTISEMENT

ರಸಪೂರಿ, ಕಸಿ ಮಾವು, ಸಿಂಧೂರು ಇತ್ಯಾದಿ ತಳಿಯ ಮಾವಿನ ಹಣ್ಣನ್ನು ಮಾರಾಟಕ್ಕೆ ಇಡಲಾಗಿದೆ.

ರಸಪೂರಿ ಮಾವಿನ ಹಣ್ಣಿಗೆ ಒಂದು ಕೆಜಿಗೆ ₹100 ದರ ಇದೆ. ಉಳಿದ ತಳಿಯ ಹಣ್ಣಿನ ದರ ₹90 ರಿಂದ ₹80 ಇದೆ. ಕೊಳ್ಳುವವರು ಚೌಕಾಸಿ ಮಾಡಿದರೂ ವ್ಯಾಪಾರಿಗಳು ದರ ಇಳಿಸುವುದಕ್ಕೆ ನಿರಾಕರಿಸುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮಾವಿನ ಕಾಯಿ ಹದಕ್ಕೆ ಬಂದ ವೇಳೆ ಮರದಿಂದ ಕಿತ್ತು ಹಣ್ಣು ಮಾಡುವ ಪದ್ಧತಿ ಚಾಲ್ತಿಯಲ್ಲಿತ್ತು. ಆದರೆ, ಈಗ ಅಂಥ ವ್ಯವಸ್ಥೆ ಇಲ್ಲ. ಮಾವಿನ ಕಾಯಿಗೆ ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡುವ ಪದ್ಧತಿ ಚಾಲ್ತಿಗೆ ಬಂದಿದೆ. ಹೀಗಾಗಿ, ಎಳೆಯ ಕಾಯಿ ಕೂಡ ಹಣ್ಣಾಗುತ್ತದೆ. ಅಂಥ ಹಣ್ಣು ತಿಂದರೆ ಹುಳಿಯಿಂದ ಗ್ರಾಹಕರು ಮೋರೆ ಕೆಡಿಸುತ್ತಾರೆ.

ವ್ಯಾಪಾರಿಗಳು ಮಹಾರಾಷ್ಟ್ರ, ತೆಲಂಗಾಣಗಳಿಂದ ಮಧ್ಯವರ್ತಿಗಳ ಮೂಲಕ ಹಣ್ಣುಗಳನ್ನು ಖರೀದಿಸಿ ಪಟ್ಟಣದಲ್ಲಿ ಮಾರಾಟ ಮಾಡಲಾಗುತ್ತದೆ. ಹೀಗಾಗಿ, ಜಿಲ್ಲೆ, ತಾಲ್ಲೂಕಿನ ಕೆಲವೆಡೆ ಮಾವು ಬೆಳೆದಿರುವ ರೈತರು ವ್ಯಾಪಾರಿಗಳ ಮನೋಧರ್ಮದಿಂದ ಸಂಕಷ್ಟ ಅನುಭವಿಸುವಂತಾಗಿದೆ.

ಗ್ರಾಮೀಣ ಭಾಗದ ಮಾವು ಬೆಳೆಗಾರರು ಹದಕ್ಕೆ ಬಂದ ಮಾವಿನ ಕಾಯಿಯನ್ನೇ ನೈಸರ್ಗಿಕವಾಗಿ ಹಣ್ಣು ಮಾಡಿ ಪಟ್ಟಣದ ಬೀದಿಗಳಲ್ಲಿ ವ್ಯಾಪಾರ ಮಾಡುತ್ತಾರೆ.

ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಸಾರ್ವಜನಿಕರು ಅವರ ಬಳಿ ಹಣ್ಣು ಕೊಳ್ಳಲು ಮುಂದಾಗುವುದಿಲ್ಲ. ರಾಸಾಯನಿಕ ಮಿಶ್ರಣದಿಂದ ಹಣ್ಣಾದ ಮಾವು ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ.

‘ಪ್ರಸ್ತುತ ಮಾವಿನ ಹಣ್ಣಿನ ಭರಾಟೆ ಹೆಚ್ಚಿದೆ. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷ ವ್ಯಾಪಾರವಿಲ್ಲದೆ ಕಂಗಲಾಗಿದ್ದ ಹಣ್ಣಿನ ವ್ಯಾಪಾರಿಗಳಿಗೆ ಈ ಬಾರಿ ಬೇಡಿಕೆ ಹೆಚ್ಚಾಗಿದ್ದಕ್ಕೆ ಖುಷಿಯಾಗಿದೆ’ ಎಂದು ಮಾವಿನ ಹಣ್ಣು ಮಾರಾಟ ಮಾಡುವ ವರ್ತಕ ಶಿವಕುಮಾರ್‌ ತಿಳಿಸುತ್ತಾರೆ.

ಸದ್ಯ ಪಟ್ಟಣ ಸೇರಿದಂತೆ ತಾಲ್ಲೂಕಿನ ನಿರ್ಣಾ, ಮನ್ನಾಎಖ್ಖೇಳಿ, ಬೇಮಳಖೇಡಾ ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ಮಾವಿನ ಹಣ್ಣಿನ ಮಾರಾಟ ನಡೆಯುತ್ತಿದೆ. ಜತೆಗೆ ಸ್ಥಳದಿಂದ ಸ್ಥಳಕ್ಕೆ ಬೆಲೆ ವ್ಯತ್ಯಾಸವೂ ಕಂಡುಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.