ಔರಾದ್: ತಾಲ್ಲೂಕಿನ ವಿವಿಧೆಡೆ ಎರಡು ದಿನಗಳಿಂದ ಮಳೆಯಾಗುತ್ತಿದ್ದು ನದಿ, ಹಳ್ಳ,ಕೊಳ್ಳಗಳಿಗೆ ನೀರು ಹರಿದು ಬರುತ್ತಿದೆ. ಪಕ್ಕದ ಮಹಾರಾಷ್ಟ್ರದಲ್ಲೂ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಹರಿಯುವ ಮಾಂಜ್ರಾ ನದಿ ಮೈದುಂಬಿ ಹರಿಯುತ್ತಿದೆ.
ಸಂತಪುರ, ವಡಗಾಂವ್, ಚಿಂತಾಕಿ ಹೋಬಳಿಯಲ್ಲಿ ಮಳೆ ತೀವ್ರತೆ ಜಾಸ್ತಿ ಇದೆ. ಈ ಭಾಗದ ಸಣ್ಣ ಸೇತುವೆಗಳು ಮುಳುಗಡೆಯಾಗಿವೆ. ಇದರಿಂದ ಕೆಲ ಗ್ರಾಮಗಳ ಸಂಚಾರ ಕಡಿತವಾಗಿದೆ. ಕಂದಗೂಳ, ವಡಗಾಂವ್, ನಾಗೂರ, ಬೋರ್ಗಿ, ಜೋಜನಾ, ಚಟ್ನಾಳ ಸೇರಿದಂತೆ ಹತ್ತಾರು ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.
ಶನಿವಾರ ಸಂಜೆ ನಾಲೆಗೆ ಹೆಚ್ಚು ನೀರು ಬಂದು ಚಟ್ನಾಳ ಗ್ರಾಮದ ಕೆಲ ರೈತರು ಸಿಕ್ಕಿಹಾಕಿಕೊಂಡಿದ್ದರು. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ದೊಡ್ಡ ಅವಘಡ ತಪ್ಪಿದೆ. ಕೆಲ ಗ್ರಾಮಗಳಲ್ಲಿ ಕಂಬಗಳು ಬಿದ್ದು ವಿದ್ಯುತ್ ಕಡಿತವಾಗಿದೆ.
ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮುಂಗಾರು ಬೆಳೆಗೆ ಹಾನಿ ಆಗಿದೆ. ಮೊಳಕೆ ಹಂತದಲ್ಲಿ ರುವ ಸೋಯಾ ಬೆಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.