ADVERTISEMENT

ಮರಕಲ್: ಬೀದರ್‌ನ ನಾಗರಿಕ ಸ್ನೇಹಿ ‘ಗ್ರಾಮ ಒನ್’

ಕಲಬುರ್ಗಿ ವಿಭಾಗದಲ್ಲಿ ಯೋಜನೆಗೆ ಆಯ್ಕೆಯಾದ ಏಕೈಕ ಗ್ರಾಮ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 6:24 IST
Last Updated 12 ಆಗಸ್ಟ್ 2021, 6:24 IST
ಗ್ರಾಮ ಒನ್
ಗ್ರಾಮ ಒನ್   

ಜನವಾಡ/ ಬೀದರ್: ನಾಗರಿಕ ಸ್ನೇಹಿ ‘ಗ್ರಾಮ ಒನ್’ ಪ್ರಾಯೋಗಿಕ ಯೋಜನೆಗೆ ಬೀದರ್ ತಾಲ್ಲೂಕಿನ ಮರಕಲ್ ಗ್ರಾಮ ಆಯ್ಕೆಯಾಗಿದೆ.

ಪ್ರಾಯೋಗಿಕ ಯೋಜನೆಗೆ ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಲ್ಲಿ ತಲಾ ಒಂದು ಗ್ರಾಮವನ್ನು ಆಯ್ಕೆ ಮಾಡಲಾಗಿದೆ. ಮರಕಲ್, ಕಲಬುರ್ಗಿ ವಿಭಾಗದಲ್ಲಿ ಆಯ್ಕೆಯಾದ ಏಕೈಕ ಗ್ರಾಮವಾಗಿದೆ.

ಆಗಸ್ಟ್ 13 ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಗ್ರಾಮದಲ್ಲಿ ಗ್ರಾಮ ಒನ್ ಸೇವಾ ಕೇಂದ್ರವನ್ನು ಉದ್ಘಾಟಿಸುವರು. ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದ್ದಾರೆ.

ADVERTISEMENT

ಏನಿದು ಗ್ರಾಮ ಒನ್: ಗ್ರಾಮ ಒನ್ ಗ್ರಾಮಮಟ್ಟದಲ್ಲೇ ಪ್ರತಿ ಪ್ರಜೆಗೂ ಸರ್ಕಾರದ ಸೇವೆ, ಬ್ಯಾಂಕಿಂಗ್ ಸೇವೆ, ಆರ್‌ಟಿಐ ಹಾಗೂ ಇತರ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಯೋಜನೆಯಾಗಿದೆ.

ಪ್ರಾಯೋಗಿಕ ಹಂತದಲ್ಲಿ 5,000ಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದ ಗ್ರಾಮಗಳಲ್ಲಿ ಗ್ರಾಮ ಒನ್ ಕೇಂದ್ರ ಪ್ರಾರಂಭಿಸಲಾಗುತ್ತದೆ. ಮೊದಲ ಹಂತದಲ್ಲಿ ಈ ಕೇಂದ್ರದಲ್ಲಿ ಸೇವಾಸಿಂಧು, ಸಕಾಲ, ಆರ್‌ಟಿಐ
ಮತ್ತು ಮೈಕ್ರೋ ಬ್ಯಾಂಕಿಂಗ್ ಸೇವೆಗಳನ್ನು ಸೇರಿಸಲಾಗಿದೆ. ಕೇಂದ್ರವು ನಾಗರಿಕರು ಮತ್ತು ಸರ್ಕಾರದ ಮಧ್ಯೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.

ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಮಟ್ಟದ ಕಾರ್ಯಪಡೆ ರಚಿಸಲಾಗುತ್ತದೆ. ಹೆಚ್ಚುವರಿ ಜಿಲ್ಲಾಧಿಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ, ಉಪ ವಿಭಾಗಾಧಿಕಾರಿ ಜಿಲ್ಲಾ ನೋಡಲ್ ಅಧಿಕಾರಿ ಆಗಿರುತ್ತಾರೆ. ತಹಶೀಲ್ದಾರ್ ನೇತೃತ್ವದ ತಾಲ್ಲೂಕುಮಟ್ಟದ ಕಾರ್ಯಪಡೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ಸಮಿತಿಯಲ್ಲಿ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.