ADVERTISEMENT

`ಮತ್ತೆ ಕಲ್ಯಾಣ' ಅಭಿಯಾನ ಸಿದ್ಧತಾ ಸಭೆ ಜು. 3 ಕ್ಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 15:26 IST
Last Updated 1 ಜುಲೈ 2019, 15:26 IST
ಮತ್ತೆ ಕಲ್ಯಾಣ ಅಭಿಯಾನದ ಲೋಗೋ
ಮತ್ತೆ ಕಲ್ಯಾಣ ಅಭಿಯಾನದ ಲೋಗೋ   

ಬಸವಕಲ್ಯಾಣ: `ಬಸವಾದಿ ಶರಣರ ಕ್ರಾಂತಿಭೂಮಿ ಬಸವಕಲ್ಯಾಣದೆಡೆಗೆ ಹೊರಟಿರುವ ಅರಿವಿನ ನಡಿಗೆ `ಮತ್ತೆ ಕಲ್ಯಾಣ' ಅಭಿಯಾನದ ಸಮಾರೋಪ ಸಮಾರಂಭದ ಸಿದ್ಧತೆಗಾಗಿ ಜುಲೈ 3 ರಂದು ಇಲ್ಲಿ ಪೂರ್ವಸಿದ್ಧತಾ ಸಭೆ ಆಯೋಜಿಸಲಾಗಿದೆ' ಎಂದು ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ತಿಳಿಸಿದ್ದಾರೆ.

`ಅಂದು ಸಂಜೆ 4 ಗಂಟೆಗೆ ಇಲ್ಲಿನ ತೇರು ಮೈದಾನದಲ್ಲಿನ ಸಭಾಂಗಣದಲ್ಲಿ ಸಭೆ ನಡೆಯಲಿದೆ. ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷರಾದ ಬಸವಲಿಂಗ ಪಟ್ಟದ್ದೇವರು, ಲಿಂಗವಂತ ಶರಣ ಹರಳಯ್ಯ ಪೀಠಾಧ್ಯಕ್ಷೆ ಡಾ.ಗಂಗಾಂಬಿಕಾ ಪಾಟೀಲ ನೇತೃತ್ವ ವಹಿಸಲಿದ್ದಾರೆ' ಎಂದಿದ್ದಾರೆ.

`ಶರಣರ ಕಾಯಕ, ದಾಸೋಹ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ 12 ನೇ ಶತಮಾನದ ಶರಣ ಚಳವಳಿಗೆ ಮರುಜೀವ ನೀಡುವ ಸದುದ್ದೇಶದಿಂದ ರಾಜ್ಯಾದ್ಯಂತ ಈ ಪಯಣ ನಡೆಯಲಿದೆ. ಸಾಣೆಹಳ್ಳಿ ಸಹಮತ ವೇದಿಕೆಯ ಅಲ್ಲಿನ ಶ್ರೀಮಠದ ಪಂಡಿತಾರಾಧ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಆಗಸ್ಟ್ 1 ರಂದು ತರೀಕೆರೆಯಿಂದ ಅಭಿಯಾನ ಆರಂಭವಾಗಲಿದೆ. ಪ್ರತಿದಿನ ಒಂದೊಂದು ಪಟ್ಟಣದಲ್ಲಿ ಸಭೆ ಆಯೋಜಿಸಿ ಒಂದು ತಿಂಗಳ ನಂತರ ಆಗಸ್ಟ್ 30 ರಂದು ಇಲ್ಲಿಗೆ ತಲುಪಲಿದೆ. ಅಂದು ಇಲ್ಲಿ ಬೃಹತ್ ಸಮಾರಂಭ ಆಯೋಜಿಸಲಾಗುತ್ತದೆ' ಎಂದಿದ್ದಾರೆ.

ADVERTISEMENT

`ಸಾಹಿತಿ, ಚಿಂತಕರ, ಗಣ್ಯರ ಜತೆಯಲ್ಲಿ ಹಲವಾರು ಸಲ ಸಭೆ ನಡೆಸಿ ಚಿಂತನ, ಮಂಥನ ನಡೆಸಿದ ನಂತರ ಈ ಅಭಿಯಾನ ರೂಪುಗೊಂಡಿದ್ದು ರಾಜ್ಯದಲ್ಲಿನ ಅನೇಕರು ಈಗಾಗಲೇ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಸಾಣೆಹಳ್ಳಿ ಸ್ವಾಮೀಜಿಯವರ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿ ನಡೆಯಲು ಸಿದ್ಧರಾಗಿದ್ದಾರೆ. ಆದ್ದರಿಂದ ಕಲ್ಯಾಣ ನಾಡಿನವರಾದ ನಾವು ಯಾವುದೇ ರೀತಿಯಲ್ಲಿ ಹಿಂದೆ ಬೀಳುವುದು ಸರಿಯಲ್ಲ. ಇಲ್ಲಿ ನಡೆಯುವ ಸಮಾರೋಪ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಯೋಜಿಸಲು ಈಗೀನಿಂದಲೇ ಸಿದ್ಧರಾಗಬೇಕಾಗಿದೆ ಆದ್ದರಿಂದ ಪೂರ್ವಸಿದ್ಧತಾ ಸಭೆಯಲ್ಲಿ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ ನೀಡಬೇಕು' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.