ADVERTISEMENT

ಅನುಭವ ಮಂಟಪಕ್ಕೆ ₹ 250 ಕೋಟಿ ನೀಡಿ

ಬಜೆಟ್‌ನಲ್ಲಿ ಬೀದರ್‌ಗೆ ಆದ್ಯತೆ: ಮುಖ್ಯಮಂತ್ರಿಗೆ ಜಿಲ್ಲೆಯ ಜನಪ್ರತಿನಿಧಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 16:05 IST
Last Updated 30 ಜನವರಿ 2019, 16:05 IST
ಬೀದರ್ ಜಿಲ್ಲೆಯ ಜನಪ್ರತಿನಿಧಿಗಳು ಬೆಂಗಳೂರಿನಲ್ಲಿ ಬುಧವಾರ ನಿಯೋಗದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು
ಬೀದರ್ ಜಿಲ್ಲೆಯ ಜನಪ್ರತಿನಿಧಿಗಳು ಬೆಂಗಳೂರಿನಲ್ಲಿ ಬುಧವಾರ ನಿಯೋಗದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು   

ಬೀದರ್: ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₹ 250 ಕೋಟಿ ಅನುದಾನ ಒದಗಿಸಬೇಕು ಎಂದು ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದರು.

ಬಸವಕಲ್ಯಾಣವು ಬಸವೇಶ್ವರರು ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಸಾಮಾಜಿಕ ಹಾಗೂ ಧಾರ್ಮಿಕ ಕಾಂಗ್ರೆಸ್ ನಡೆಸಿದ ಪುಣ್ಯಭೂಮಿಯಾಗಿದೆ. ಅಲ್ಲಿನ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಬಜೆಟ್‌ನಲ್ಲೇ ನೂತನ ಅನುಭವ ಮಂಟಪ ನಿರ್ಮಾಣದ ಘೋಷಣೆ ಮಾಡಲಾಗಿದೆ. ಬರುವ ಬಜೆಟ್‌ನಲ್ಲಿ ಅನುದಾನ ಒದಗಿಸಿ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಬೀದರ್, ಕಲಬುರ್ಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮರಾಠ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮರಾಠರ ಬಹುದಿನಗಳ ಬೇಡಿಕೆಯಂತೆ ರಾಜಶ್ರೀ ಶಾಹು ಮಹಾರಾಜ್ ಅಭಿವೃದ್ಧಿ ಮಂಡಳಿ ರಚಿಸಿ ಅದಕ್ಕೆ ಅಗತ್ಯ ಅನುದಾನ ಕಲ್ಪಿಸಬೇಕು ಎಂದು ಬೇಡಿಕೆ ಮಂಡಿಸಿದರು.

ಕೊಂಗಳಿ ಗ್ರಾಮದ ಹತ್ತಿರ ಮಾಂಜ್ರಾ ನದಿಯಿಂದ 2.0 ಟಿ.ಎಂ.ಸಿ. ನೀರು ಎತ್ತಿ ಮೇಲ್ಮೈ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಗೆ ಮಂಜೂರಾತಿ ನೀಡಬೇಕು. ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವ ದಿಸೆಯಲ್ಲಿ ರೆಡಿಮೇಡ್ ಗಾರ್ಮೆಂಟ್ ಅಪ್ಪರೇಲ್‌ ಪಾರ್ಕ್ ನಿರ್ಮಾಣಕ್ಕೆ ಪ್ರೋತ್ಸಾಹ ಧನ ಒದಗಿಸಬೇಕು.

ಜಿಲ್ಲೆಗೆ ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜು, ಕಾನೂನು ಪದವಿ ಕಾಲೇಜು, ಕೃಷಿ ಪದವಿ ಕಾಲೇಜು, ಬಿ.ಎಸ್ಸಿ ನರ್ಸಿಂಗ್ ಮಾದರಿಯಲ್ಲಿ ಬಿ.ಎಸ್ಸಿ ನೇತ್ರಶಾಸ್ತ್ರ, ಬಿ.ಎಸ್ಸಿ ಕಾರ್ಡಿಯಾಲಜಿ ಹಾಗೂ ಬಿ.ಎ. ಪ್ರವಾಸೋದ್ಯಮ ಕೋರ್ಸ್‌ಗಳನ್ನು ಮಂಜೂರು ಮಾಡಬೇಕು.

ಬೀದರ್ ನಗರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ₹ 5 ಕೋಟಿ ಅನುದಾನ ನೀಡಬೇಕು. ಬೀದರ್‌ನ ಪಾಪನಾಶ ಕೆರೆ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸುವ ಘೋಷಣೆ ಮಾಡಬೇಕು. ಚುಳುಕಿ ನಾಲಾ ಯೋಜನೆಯ ನಾಲೆಗಳ ಆಧುನೀಕರಣ ಕಾಮಗಾರಿ ಆರಂಭಿಸಬೇಕು. ಬೆಂಗಳೂರು ಇಂದಿರಾಗಾಂಧಿ ಶಿಶು ಆಸ್ಪತ್ರೆ ವಿಭಾಗದ ಮಾದರಿಯಲ್ಲಿ ಬೀದರ್‌ನಲ್ಲೂ ಶಿಶು ಆಸ್ಪತ್ರೆ ವಿಭಾಗ ಪ್ರಾರಂಭಿಸಬೇಕು. ಕಾರಂಜಾ ಜಲಾಶಯ ಪ್ರದೇಶದಲ್ಲಿ ಬೃಂದಾವನ ಉದ್ಯಾನ ಮಾದರಿಯಲ್ಲಿ ಉದ್ಯಾನ ನಿರ್ಮಿಸಿ ಜಲಕ್ರೀಡೆಗಳನ್ನು ಆರಂಭಿಸಲು ಅನುದಾನ ಒದಗಿಸಬೇಕು ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್, ಶಾಸಕ ಬಿ. ನಾರಾಯಣರಾವ್, ವಿಧಾನ ಪರಿಷತ್‌ ಸದಸ್ಯರಾದ ವಿಜಯಸಿಂಗ್, ಅರವಿಂದಕುಮಾರ ಅರಳಿ, ಡಾ. ಚಂದ್ರಶೇಖರ ಪಾಟೀಲ ನಿಯೋಗದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.