ಬೀದರ್: ‘ಜಿಲ್ಲೆಯ ಎಲ್ಲ ವಸತಿ ನಿಲಯಗಳ ಮಕ್ಕಳಲ್ಲಿ ಮನೋಸ್ಥೈರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಔರಾದ್ ಪಟ್ಟಣದ ಬಾಲಕಿಯರ ವಸತಿ ನಿಲಯದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ,‘ಮನೋ ವೈದ್ಯರ ಮೂಲಕ ಪ್ರತಿ ವಾರ ಸಮಾಲೋಚನೆ ನಡೆಸಿ, ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸಬೇಕು’ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನೀರಗುಡೆ, ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಕಿರಣ್ ಪಾಟೀಲ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಜತೆಗೆ ತುರ್ತು ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು.
‘ಜಿಲ್ಲೆಯ ಸಿಎಚ್‌ಸಿ ಮತ್ತು ಪಿಎಚ್‌ಸಿ ಕೇಂದ್ರಗಳಲ್ಲಿನ ವೈದ್ಯಾಧಿಕಾರಿಗಳು ಪ್ರತಿ ವಾರ ತಮ್ಮ ವ್ಯಾಪ್ತಿಯ ವಸತಿ ನಿಲಯಗಳಿಗೆ ಭೇಟಿ ನೀಡಬೇಕು. ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಬೇಕು. ಅವರ ಚಲನವಲನಗಳಲ್ಲಿ ವ್ಯತ್ಯಾಸ ಕಂಡು ಬಂದರೆ, ಖಿನ್ನತೆಯಿಂದ ಬಳಲುತ್ತಿದ್ದರೆ ಅವರ ಬಗ್ಗೆ ಇಲಾಖೆಯ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳು ಮತ್ತು ವಾರ್ಡನ್‌ಗಳ ಮಾಹಿತಿಯನ್ನು ಅಧಿಕಾರಿಗಳು ಒಂದೆರಡು ದಿನಗಳಲ್ಲಿ ನೀಡಬೇಕು. ಹಾಸ್ಟೆಲ್‌ಗಳಿಗೆ ಆಯಾ ವ್ಯಾಪ್ತಿಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗುವುದು’ ಎಂದು ಹೇಳಿದರು.
ಮನೋವೈದ್ಯ ಡಾ.ಅಮಲ್ ಮತ್ತು ಡಾ.ರಾಘವೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.