ADVERTISEMENT

250 ಅಭ್ಯರ್ಥಿಗಳಿಗೆ ಸೇನಾ ತರಬೇತಿ

15 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 12:47 IST
Last Updated 12 ಆಗಸ್ಟ್ 2021, 12:47 IST
ಶರಣಪ್ಪ ಸಿಕೇನಪುರೆ
ಶರಣಪ್ಪ ಸಿಕೇನಪುರೆ   

ಬೀದರ್: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಇಲ್ಲಿಯ ಬೆನಕನಳ್ಳಿ ರಸ್ತೆಯಲ್ಲಿ ಇರುವ ಗ್ಲೊಬಲ್ ಸೈನಿಕ ಅಕಾಡೆಮಿಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಸಶಸ್ತ್ರ ಪಡೆಗಳು ಹಾಗೂ ಅರೆಸೇನಾ ಪಡೆಗಳ ಪೂರ್ವಸಿದ್ಧತಾ ತರಬೇತಿ ಹಮ್ಮಿಕೊಂಡಿದೆ.

ಊಟ, ವಸತಿ ಸಹಿತ ಮೂರು ತಿಂಗಳ ತರಬೇತಿಯಲ್ಲಿ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಸೇನೆಗೆ ಭರ್ತಿಯಾಗ ಬಯಸುವ ಎಸ್ಸೆಸ್ಸೆಲ್ಸಿಯಿಂದ ಪದವಿವರೆಗಿನ 18 ರಿಂದ 23 ವರ್ಷದ ಒಳಗಿನ 250 ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಹಾಗೂ ಗ್ಲೊಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರೆ ನಗರದಲ್ಲಿ ಗುರುವಾರ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

1,200 ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 225 ಯುವಕರು ಹಾಗೂ 25 ಯುವತಿಯರು ಸೇರಿ 250 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅವರಿಗೆ ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿ, ವ್ಯಕ್ತಿತ್ವ ವಿಕಸನ, ಸ್ಪೋಕನ್ ಇಂಗ್ಲಿಷ್, ಅಂತರರಾಷ್ಟ್ರೀಯ ಸಂಬಂಧಗಳು ಸೇರಿದಂತೆ ಸೇನೆ ಭರ್ತಿಗೆ ಅಗತ್ಯ ಇರುವ ಎಲ್ಲ ತರಬೇತಿ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಬಹುತೇಕ ಪಾಲಕರು ತಮ್ಮ ಮಕ್ಕಳು ವೈದ್ಯ ಇಲ್ಲವೇ ಎಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ. ಆದರೆ, ಸೇನೆಯಲ್ಲೂ ಬಹಳಷ್ಟು ಉದ್ಯೋಗ ಅವಕಾಶಗಳ ಇರುವ ಬಗ್ಗೆ ಹೆಚ್ಚಿನ ಜನರಿಗೆ ತಿಳಿವಳಿಕೆ ಇಲ್ಲ. ಸೇನೆಯಲ್ಲಿ ಆಕರ್ಷಕ ಸಂಬಳ, ಪಿಂಚಣಿ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳು ಇವೆ. ದೇಶ ಸೇವೆಗೆ ಒಳ್ಳೆಯ ಅವಕಾಶವಾಗಿದೆ ಎಂದು ತಿಳಿಸಿದರು.

ಈ ಭಾಗದ ಅಭ್ಯರ್ಥಿಗಳನ್ನು ಸೇನಾ ಭರ್ತಿಗೆ ಅಣಿಗೊಳಿಸುವುದು ತರಬೇತಿಯ ಉದ್ದೇಶವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಭಾಗದ ಐದಾರು ಸಾವಿರ ಅಭ್ಯರ್ಥಿಗಳು ಸೇನೆಗೆ ಸೇರುವ ದಿಸೆಯಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

15 ರಂದು ಉದ್ಘಾಟನೆ: ಗ್ಲೊಬಲ್ ಸೈನಿಕ ಅಕಾಡೆಮಿಯಲ್ಲಿ ಆಗಸ್ಟ್ 15 ರಂದು ಬೆಳಿಗ್ಗೆ 11.45ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತರಬೇತಿಗೆ ಚಾಲನೆ ನೀಡಲಿದ್ದಾರೆ. ಬೀದರ್ ವಾಯುಪಡೆ ತರಬೇತಿ ಕೇಂದ್ರದ ಏರ್ ಕಮಾಡೋರ್ ಸಮೀರ್ ಸೋಂಧಿ, ಚೀಫ್ ಆಪರೇಟಿಂಗ್ ಆಫಿಸರ್ ಅಜೀತ್ ಕುಲಕರ್ಣಿ, ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಘದ ವತಿಯಿಂದ ಈಗಾಗಲೇ ಕಲಬುರ್ಗಿಯಲ್ಲಿ ಐಎಎಸ್, ಐಪಿಎಸ್, ಕೆಎಎಸ್, ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ಭಾಗದಲ್ಲಿ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಕಲೆ, ಸಂಸ್ಕøತಿಗೆ ಉತ್ತೇಜನ ಹಾಗೂ ಯುವ ಸಬಲೀಕರಣಕ್ಕಾಗಿ ನಿರಂತರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಂಘದ ಜಿಲ್ಲಾ ಸಂಯೋಜಕ ರೇವಣಸಿದ್ದ ಜಾಡರ, ತಾಲ್ಲೂಕು ಸಂಯೋಜಕ ಗಣಪತಿ ಹಡಪದ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.