ಘೋಡಂಪಳ್ಳಿ (ಜನವಾಡ): ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಬೀದರ್ ತಾಲ್ಲೂಕಿನ ಘೋಡಂಪಳ್ಳಿಯಲ್ಲಿ ಮಂಗಳವಾರ ನಡೆದ ಪೌಷ್ಟಿಕ ಆಹಾರ ಮೇಳದಲ್ಲಿ ಸಿರಿಧಾನ್ಯ ಗಮನ ಸೆಳೆದವು.
ನವಣೆ, ಸಜ್ಜೆ, ರಾಗಿ, ಜೋಳ, ಊದಲು, ಸಾಮೆ, ಅರ್ಕ, ಕೂರಲೆ, ಪ್ರದರ್ಶನದಲ್ಲಿದ್ದವು. ರಾಗಿ ಗಂಜಿ, ಮೊಳಕೆ ಕಾಳು, ತರಕಾರಿಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗಿತ್ತು.
ಮೇಳ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿ ಉದಯಕುಮಾರ ಮಾತನಾಡಿ,‘ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಸೇವನೆ ಬಹಳ ಅವಶ್ಯಕವಾಗಿದೆ. ಸಿರಿಧಾನ್ಯಗಳು ಅತ್ಯಧಿಕ ಪೌಷ್ಟಿಕಾಂಶ ಹೊಂದಿವೆ. ಹೀಗಾಗಿ ಅವುಗಳನ್ನು ನಿತ್ಯ ಆಹಾರದ ಭಾಗವಾಗಿಸಬೇಕು’ ಎಂದರು.
ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮಯೂರ ಎನ್.ಟಿ. ಮಾತನಾಡಿ,‘ಅಪೌಷ್ಟಿಕತೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪೌಷ್ಟಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹ, ಮನಸ್ಸು ಉಲ್ಲಸಿತವಾಗಿರುತ್ತದೆ’ ಎಂದು ಹೇಳಿದರು.
ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಜಾನಕನೋರ, ಜ್ಞಾನ ವಿಕಾಸ ಕಾರ್ಯಕ್ರಮದ ಬೀದರ್ ಗ್ರಾಮಾಂತರ ಸಮನ್ವಯಾಧಿಕಾರಿ ಜಯಸುಧಾ ಮಾತನಾಡಿದರು. ವಲಯ ಮೇಲ್ವಿಚಾರಕ ಮಂಜುನಾಥ, ಎಸ್ತರ್ ರಾಣಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.