ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 17:21 IST
Last Updated 26 ಜೂನ್ 2020, 17:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀದರ್: ಶಾಲೆಯಿಂದ ಮನೆಗೆ ಬಂದ ಅಣ್ಣನ 11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ಇಲ್ಲಿಯ ಪೋಸ್ಕೊ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಆರೋಪಿಗೆ ಜೀವಾವಧಿ ಶಿಕ್ಷೆ, ₹ 50 ಸಾವಿರ ದಂಡ, ಬಾಲಕಿಗೆ ಜೀವ ಬೆದರಿಕೆ ಹಾಕಿದ್ದಕ್ಕೆ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ನ್ಯಾಯಾಧೀಶೆ ಎಚ್‌.ಆರ್.ರಾಧಾ ತೀರ್ಪು ನೀಡಿದ್ದಾರೆ.

₹ 50 ಸಾವಿರ ದಂಡ ಪಾವತಿಸದಿದ್ದಲ್ಲಿ ಮತ್ತೆ ಆರು ತಿಂಗಳು ಸಾಮಾನ್ಯ ಶಿಕ್ಷೆ ಅನುಭವಿಸಬೇಕು. ದಂಡದ ರೂಪದಲ್ಲಿ ನೀಡಿದ ಹಣದಲ್ಲಿ ₹ 25 ಸಾವಿರ ಬಾಲಕಿಗೆ ಪರಿಹಾರವಾಗಿ ಕೊಡಬೇಕು. ಬಾಲಕಿ ಹೆಚ್ಚಿನ ಪರಿಹಾರ ಕೋರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

ADVERTISEMENT

2017ರ ಫೆಬ್ರುವರಿ 11 ರಂದು ಬಾಲಕಿಯ ತಂದೆ–ತಾಯಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಶಾಲೆಯಿಂದ ಮನೆಗೆ ಬಂದ ಬಾಲಕಿಯು ಸೋದರತ್ತೆ ಜತೆ ಆಟವಾಡುತ್ತಿದ್ದಳು.

ಆರೋಪಿ ತನ್ನ ತಂಗಿ (ಬಾಲಕಿ ಸೋದರತ್ತೆ)ಗೆ ಉಪಾಹಾರ ತರಲು ಹಣ ಕೊಟ್ಟು ಅಂಗಡಿಗೆ ಕಳಿಸಿದ್ದ. ನಂತರ ಕಾಲು ನೋಯುತ್ತಿದ್ದು ಒತ್ತುವಂತೆ ಹೇಳಿ ಬಾಲಕಿಯನ್ನು ಕೊಠಡಿಯೊಳಗೆ ಒಯ್ದು ಅತ್ಯಾಚಾರ ಮಾಡಿದ್ದ. ಮನೆಯಲ್ಲಿ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದ. ತೀವ್ರ ರಕ್ತಸ್ರಾವ ಆಗುತ್ತಿದ್ದರಿಂದ ಬಾಲಕಿ, ತಂದೆ–ತಾಯಿ ಮನೆಗೆ ಬಂದ ಮೇಲೆ ಘಟನೆಯನ್ನು ವಿವರಿಸಿದ್ದಳು.

ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಭಾಲ್ಕಿ ಗ್ರಾಮೀಣ ಪಿಎಸ್‌ಐ ಸುನೀಲ್‌ಕುಮಾರ ಪ್ರಕರಣ ದಾಖಲಿಸಿಕೊಂಡಿದ್ದರು. ಸಿಪಿಐ ಎಂ.ಎಸ್‌.ಮುಲ್ಲಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ಅಭಿಯೋಜಕ ವಿದ್ಯಾಧರ ಸರ್ಕಾರದ ಪರ ವಕಾಲತು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.