ಬೀದರ್: ‘ಕಾಣೆಯಾದ ಮಕ್ಕಳ ತನಿಖೆಯಲ್ಲಿ ನಿರ್ಲಕ್ಷ್ಯ ಮಾಡಬೇಡಿ ಮತ್ತು ಪರಿಣಾಮಕಾರಿಯಾಗಿ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸೋಮವಾರ ವಿಶೇಷ ಕಾರ್ಯಪಡೆ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
‘ಕಾಣೆಯಾದ ಮಕ್ಕಳ ಪೋಷಕರು, ಸಂಬಂಧಿಕರು ಹಾಗೂ ಸ್ನೇಹಿತರರನ್ನು ಸಂಪರ್ಕಿಸಿ ಮಾಹಿತಿಗಳನ್ನು ಪಡೆದು ಅವರನ್ನು ಟ್ರ‍್ಯಾಕ್ ಮಾಡಬೇಕು. ಮೊಬೈಲ್‌ನಿಂದ ಕೊನೆಯ ಕರೆಯ ಲೊಕೇಶನ್ ಟ್ರ‍್ಯಾಕಿಂಗ್ ಮಾಡಿ ದೇಶದ ಯಾವುದೇ ಸ್ಥಳದಲ್ಲಿದ್ದರೂ ತಂದು ಪೋಷಕರಿಗೆ ಒಪ್ಪಿಸಬೇಕು. ಮಕ್ಕಳ ಕಾಣೆಯಾದ ಪ್ರಕರಣ ದಾಖಲಿಸಿಕೊಂಡ 30 ದಿನಗಳಲ್ಲಿ ಪ್ರಕರಣ ಪೂರ್ಣಗೊಳಿಸಬೇಕು ಮತ್ತು ಪೊಲೀಸ್ ಅಧಿಕಾರಿಗಳು ಒಂದು ವೇಳೆ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು’ ಎಂದು ಹೇಳಿದರು.
ಮಕ್ಕಳ ಅಪಹರಣ, ನಾಪತ್ತೆ, ಸ್ವಯಂ ಪ್ರೇರಿತವಾಗಿ ಮತ್ತು ಪ್ರೀತಿಸಿ ಮನೆಯನ್ನು ಬಿಟ್ಟು ಹೋಗಿರುವ 18 ವರ್ಷದೊಳಗಿನ ಮಕ್ಕಳು ಕಾಣೆಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಮೌಲ್ಯ ಮಾಪನ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
2018ರಿಂದ 2025ರ ಜುಲೈವರೆಗೆ ಬಾಕಿ ಉಳಿದಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಪ್ರಕರಣಗಳು ಮುಗಿಸುವಂತೆ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ಮಾತನಾಡಿ,‘ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳ ಕಾಣೆಯಾದ ಅವರ ಜೊತೆ ಓದುತ್ತಿರುವ ಸ್ನೇಹಿತರನ್ನು ಭೇಟಿ ಮಾಡಿ ಅವರಿಗೆ ತಿಳಿದಿರುವ ಮಾಹಿತಿಗಳನ್ನು ಪಡೆಯಬೇಕು ಮತ್ತು ಪೋಷಕರಿಂದ ಮೂಲ ಮಾಹಿತಿಗಳನ್ನು ಪಡೆದು ಆದಷ್ಟು ಬೇಗ ಮಕ್ಕಳನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಅರ್ಜುನ್ ಬನಸೋಡೆ ಮಾತನಾಡಿ,‘ಮಕ್ಕಳನ್ನು ಅಪಹರಣ ಮಾಡಿ ಭಿಕ್ಷಾಟನೆ, ವೇಶ್ಯಾವಾಟಿಕೆ ಅಂತಹ ಸಮಾಜದ ಕೆಟ್ಟ ಚಟುವಟಿಕೆಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಂತಹ ಕೆಟ್ಟ ಚಟುವಟಿಕೆಗಳಿಂದ ಮಕ್ಕಳನ್ನು ರಕ್ಷಿಸಿ ಅವರ ಬಾಲ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀಧರ್ ಎಚ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರೂಪಾ ಕೋಟೆಗೌಡರ್, ಶಾಲಾ ಶಿಕ್ಷಣ ಉಪ ನಿರ್ದೇಶಕ ಸಲಿಂ ಪಾಷಾ, ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷ ಶಿವಪ್ಪ, ಬಾಲ ನ್ಯಾಯಾಲಯ ಸದಸ್ಯೆ ಧನ್ವಂತರಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.