ADVERTISEMENT

ಹುಮನಾಬಾದ್ | ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ: ಆರೋಪ, ಪ್ರತ್ಯಾರೋಪ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 4:10 IST
Last Updated 23 ಜುಲೈ 2025, 4:10 IST
ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ
ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ   

ಹುಮನಾಬಾದ್: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಹಾಗೂ ಭೂದಾಖಲೆಗಳ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕಾರ್ಯಕ್ರಮದ ಸಮಯ 11 ಗಂಟೆಗೆ ನೀಡಿದರು. ಆದರೆ ತಹಶೀಲ್ದಾರ್ ಅವರು 11 ಗಂಟೆ 30 ನಿಮಿಷಕ್ಕೆ ಬನ್ನಿ ಎಂದು ತಿಳಿಸಿದರು. ಅದರಂತೆ ನಾನು ತಹಶೀಲ್ದಾರ್ ಕಚೇರಿಗೆ ಹೋದೆ. ಅಷ್ಟರಲ್ಲಿಯೇ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಇದನ್ನು ನೋಡಿ ನಾನು ತಹಶೀಲ್ದಾರ್ ಅಂಜುಂ ತಬಸುಮ್ ಅವರನ್ನು ಪ್ರಶ್ನಿಸಿದೆ. ಇಲ್ಲ ಸರ್ ಇನ್ನೂ ಕಾರ್ಯಕ್ರಮ ಆರಂಭಿಸಿಲ್ಲ‌. ಪರಿಷತ್ ಸದಸ್ಯರು ಅವರಿಗಷ್ಟೇ ಅವರು ಮಾತನಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಸರ್ಕಾರ ನಿಯಮದಂತೆ ತಾಲ್ಲೂಕಿನಲ್ಲಿ ನಡೆಯುವ ಪ್ರತಿಯೊಂದು ಸರ್ಕಾರಿ ಕಾರ್ಯಕ್ರಮದ ಶಿಷ್ಟಾಚಾರ ಪಾಲನೆ ಮಾಡಬೇಕಾದ ತಾಲ್ಲೂಕು ಆಡಳಿತವೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು’ ಎಂದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ‘ಕಾರ್ಯಕ್ರಮದ ನಿಗದಿತ ಸಮಯಕ್ಕೆ ಹೋಗಿದ್ದೆ. ಶಾಸಕರು ವಿಳಂಬ ಮಾಡಿದರು. ನಾನು ವೈದ್ಯಕೀಯ ತಪಾಸಣೆಗೆ ಹೋಗಬೇಕಿದ್ದ ಕಾರಣ ಸಾಂಕೇತಿಕವಾಗಿ ಎರಡು ಲ್ಯಾಪ್‌ಟಾಪ್‌ ಮಾತ್ರ ವಿತರಣೆ ಮಾಡಿದ್ದೇನೆ. ಆದರೆ ಶಾಸಕರು ತಡವಾಗಿ ಬಂದು ವಿನಾಕಾರಣ ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದರು.

ಕಾರ್ಯಕ್ರಮ ಉದ್ಘಾಟನೆ ನಡೆದಿರಲಿಲ್ಲ. ಆದರೆ ಪರಿಷತ್ ಸದಸ್ಯರು ಔಪಚಾರಿಕವಾಗಿ ಮಾತನಾಡಿದ್ದಾರೆ. ಹೀಗಾಗಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಮಾಡಿಲ್ಲ.
ಅಂಜುಂ ತಬಸುಮ್, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.