ADVERTISEMENT

ಕಲಬುರ್ಗಿ ಬರೀ ಸಂಶೋಧಕರಲ್ಲ, ಸತ್ಯಶೋಧಕರು

ಎಂ.ಎಂ.ಕಲಬುರ್ಗಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ರೇವಣಸಿದ್ದಪ್ಪ ದೊರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 13:25 IST
Last Updated 30 ನವೆಂಬರ್ 2022, 13:25 IST
ಬಸವಕಲ್ಯಾಣದ ಅಲ್ಲಮಪ್ರಭು ಕಾಲೇಜಿನಲ್ಲಿ ಈಚೆಗೆ ನಡೆದ ಡಾ.ಎಂ.ಎಂ.ಕಲಬುರ್ಗಿ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ರೇವಣಸಿದ್ದಪ್ಪ ದೊರೆ, ಸಿ.ಬಿ.ಪ್ರತಾಪುರೆ ಹಾಗೂ ಭೀಮಾಶಂಕರ ಬಿರಾದಾರ ಪಾಲ್ಗೊಂಡಿದ್ದರು
ಬಸವಕಲ್ಯಾಣದ ಅಲ್ಲಮಪ್ರಭು ಕಾಲೇಜಿನಲ್ಲಿ ಈಚೆಗೆ ನಡೆದ ಡಾ.ಎಂ.ಎಂ.ಕಲಬುರ್ಗಿ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ರೇವಣಸಿದ್ದಪ್ಪ ದೊರೆ, ಸಿ.ಬಿ.ಪ್ರತಾಪುರೆ ಹಾಗೂ ಭೀಮಾಶಂಕರ ಬಿರಾದಾರ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಎಂ.ಎಂ.ಕಲಬುರ್ಗಿಯವರು ಬರೀ ಸಂಶೋಧಕರಲ್ಲ; ಸತ್ಯಶೋಧಕರಾಗಿದ್ದರು. ಶಾಸನಗಳು ಮತ್ತು ಸಾಹಿತ್ಯದಲ್ಲಿನ ಸತ್ಯವನ್ನು ತೆರೆದಿಟ್ಟರು’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರೇವಣಸಿದ್ದಪ್ಪ ದೊರೆ ಅಭಿಪ್ರಾಯಪಟ್ಟರು.

ನಗರದ ಅಲ್ಲಮಪ್ರಭು ಪದವಿ ಕಾಲೇಜಿನಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಈಚೆಗೆ ನಡೆದ ಡಾ.ಎಂ.ಎಂ.ಕಲಬುರ್ಗಿ ಅವರ ಜನ್ಮದಿನಾಚರಣೆ ಹಾಗೂ ಕಲಬುರ್ಗಿ ಅವರ ಸಾಹಿತ್ಯಾವಲೋಕನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಲಬುರ್ಗಿಯವರು ಕನ್ನಡದ ಜ್ಞಾನ ಪರಂಪರೆಯ ಬಹುದೊಡ್ಡ ಧಾರೆಯಾಗಿದ್ದರು. ಶಾಸನಗಳ ಅಧ್ಯಯನ, ಸಂಶೋಧನೆ ಅವರ ಇಷ್ಟದ ಕ್ಷೇತ್ರಗಳಾಗಿದ್ದವು. ಅವರು ನೇರ ನಿರ್ಭಿಡೆಯ ವ್ಯಕ್ತಿ ಆಗಿದ್ದರು’ ಎಂದರು.

ADVERTISEMENT

ಅಕ್ಕಮಹಾದೇವಿ ಕಾಲೇಜಿನ ಉಪನ್ಯಾಸಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ,‘ಕನ್ನಡ ಮತ್ತು ವಚನಗಳು ಕಲಬುರ್ಗಿಯವರ ಇಷ್ಟದ ಮತ್ತು ಕಾಳಜಿಯ ಕೇಂದ್ರಗಳಾಗಿದ್ದವು. ವಚನಗಳನ್ನು ಧಾರ್ಮಿಕ ಶ್ಲೋಕಗಳೆನ್ನದೆ ಸಾಂಸ್ಕೃತಿಕ ಆಕರಗಳನ್ನಾಗಿ ಪರಿಗಣಿಸಿದರು. ಮರಾಠಿ, ತೆಲುಗು, ತಮಿಳು ಶಾಸನಾಧ್ಯಯನಕ್ಕೂ ಮಹತ್ವ ನೀಡಿದರು’ ಎಂದರು.

ನಿವೃತ್ತ ಉಪನ್ಯಾಸಕ ಪ್ರೊ.ಸಿ.ಬಿ.ಪ್ರತಾಪುರೆ, ಪ್ರಾಂಶುಪಾಲ ಚಂದ್ರಕಾಂತ ಅಕ್ಕಣ್ಣ, ರಿಯಾಜ್ ಪಟೇಲ್, ಆನಂದ ಚಾಕೂರೆ ಹಾಗೂ ಪ್ರಭು ಮಾತನಾಡಿದರು.

ಕ್ರಾಂತಿಕುಮಾರ ಪಂಚಾಳ, ಸಾರಿಕಾ ಜೋಷಿ, ಸಮರೀನ್, ಶಿಲ್ಪಾ, ತ್ರಿಲೋಚನ ಪಂಚಾಳ, ಶ್ರೀನಿವಾಸ ಶಿಂಧೆ, ಇರ್ಫಾನ್ ಪಟೇಲ್, ವಿಶಾಲ ಗಾಯಕವಾಡ ಹಾಗೂ ಕಾವೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.