ADVERTISEMENT

‘ಭಾಲ್ಕಿ, ಔರಾದ್ ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ₹1110.70 ಕೋಟಿ’

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:57 IST
Last Updated 5 ಜುಲೈ 2022, 4:57 IST
ಭಗವಂತ ಖೂಬಾ
ಭಗವಂತ ಖೂಬಾ   

ಭಾಲ್ಕಿ: ಭಾಲ್ಕಿ, ಔರಾದ್ ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಒಟ್ಟು ₹1110.70 ಕೋಟಿ ಮಂಜೂರಾತಿಗೆಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.

ಔರಾದ್ ತಾಲ್ಲೂಕಿನ ಬಳತ (ಬಿ) ಹತ್ತಿರದ ಹಾಲಹಳ್ಳಿ ಬ್ಯಾರೇಜ್ ಮೇಲ್ಭಾಗದಲ್ಲಿ ಮಾಂಜ್ರಾ ನದಿಯಿಂದ ಪಂಪ್ ಮೂಲಕ ನೀರನ್ನು ಎತ್ತಿ, ತಾಲ್ಲೂಕಿನ 36 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹560.70 ಕೋ ಹಾಗೂ ಭಾಲ್ಕಿ ತಾಲ್ಲೂಕಿನ ಏತ ನೀರಾವರಿ ಯೋಜನೆಗೆ ₹550 ಕೋಟಿ ಮಂಜೂರಾತಿ ಮಾಡಿದ್ದಾರೆ. ಈ ಎರಡು ಯೋಜನೆಗೆ ಮಂಜೂರಾತಿ ಪಡೆದುಕೊಂಡು, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆನ್ನುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ರಮೇಶ ಜಾರಕಿಹೋಳಿ ಅವರಿಗೆ ಮನವಿ ಮಾಡಿದ್ದೆ ಎಂದು ಅವರು ತಿಳಿಸಿದ್ದಾರೆ.

ಮೂರ್ನಾಲ್ಕು ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆಯ ಪ್ರಾಮುಖ್ಯತೆ, ಸದುಪಯೋಗ ಕುರಿತು ಅಧಿಕಾರಿಗಳಿಂದ ಸಮಗ್ರ ವರದಿಯನ್ನು ಸರ್ಕಾರಕ್ಕೆ ತಲುಪಿಸಿದ್ದೆ. ಇದರ ಫಲವಾಗಿ ಇಂದು ಮುಖ್ಯಮಂತ್ರಿ ಈ ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ ಎಂದು ಸಚಿವರು ತಿಳಿಸಿದರು.

ADVERTISEMENT

ಔರಾದ್, ಭಾಲ್ಕಿ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಬರಡು ಭೂಮಿಯಿದ್ದು, ಈ ಯೋಜನೆಯಿಂದ ಈ ಭೂಮಿಗಳಿಗೂ ನೀರು ತಲುಪಿಸಲಾಗುವುದು. ರೈತರಿಗೆ ಕೃಷಿ ಕಾರ್ಯಕ್ಕೆ ತುಂಬಾ ಅನುಕೂಲವಾಗಲಿದೆ. ರೈತರ ಸರ್ವತೋಮುಖ ಅಭಿವೃದ್ದಿಗೆ ಈ ಯೋಜನೆ ಸಾಕ್ಷಿಯಾಗಲಿದೆ. ಔರಾದ್, ಭಾಲ್ಕಿ ತಾಲೂಕಿನಲ್ಲಿನ ನೀರಿನ ಸಮಸ್ಯೆಯನ್ನು ಹತ್ತಿರದಿಂದ ಮನಗಂಡಿರುವ ನನಗೆ ಈ ಯೋಜನೆ ಪ್ರಾರಂಭದಿಂದ ಅತೀವ ಸಂತೋಷವಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.