ADVERTISEMENT

ಸಂಸ್ಕೃತಿ ಉಳಿವಿಗೆ ಸಾಧು-ಸಂತರ ಕೊಡುಗೆ ಅಪಾರ

ಸಂಗಮ ಗ್ರಾಮದಲ್ಲಿ ಮಹಾದೇವ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಸಂಸದ ಭಗವಂತ ಖೂಬಾ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 5:56 IST
Last Updated 17 ಫೆಬ್ರುವರಿ 2020, 5:56 IST
ಸಂಗಮ ಗ್ರಾಮದ ಸಂಗಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಪ್ರಥಮ ಲಕ್ಷ ದೀಪೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಮಹಾದೇವ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿದರು. ಮಹಾದೇವಮ್ಮಾ ತಾಯಿ, ಜಿಪಂ ಸದಸ್ಯ ಅನೀಲ ಬಿರಾದಾರ, ಡಾ.ಮಹೇಶ ಬಿರಾದಾರ ಇತರರಿದ್ದರು
ಸಂಗಮ ಗ್ರಾಮದ ಸಂಗಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಪ್ರಥಮ ಲಕ್ಷ ದೀಪೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಮಹಾದೇವ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿದರು. ಮಹಾದೇವಮ್ಮಾ ತಾಯಿ, ಜಿಪಂ ಸದಸ್ಯ ಅನೀಲ ಬಿರಾದಾರ, ಡಾ.ಮಹೇಶ ಬಿರಾದಾರ ಇತರರಿದ್ದರು   

ಕಮಲನಗರ: ದೇಶದ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆಯನ್ನು ಸಾವಿರಾರು ಸಾಧು-ಸಂತರು ಅಳವಡಿಸಿಕೊಳ್ಳುವುದರ ಜತೆಗೆ ಇತರರಿಗೂ ಪಸರಿಸಿಕೊಂಡು ಬಂದಿದ್ದಾರೆ. ದೇಶದ ಸಂಸ್ಕೃತಿ ಉಳಿವಿನಲ್ಲಿ ಸಾಧು-ಸಂತರ ಕೊಡುಗೆ ಅಪಾರವಾಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ತಾಲ್ಲೂಕಿನ ಸಂಗಮ ಗ್ರಾಮದ ಸಂಗಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಪ್ರಥಮ ಲಕ್ಷ ದೀಪೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಮಹಾದೇವ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮೂರ್ತಿ ಅನಾವರಣಗೊಳಿಸಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದಲೇ ದೇಶದ ಸಂಸ್ಕೃತಿ ಇಂದಿಗೂ ಉಳಿಯಲು ಸಾಧ್ಯವಾಗಿದೆ ಎಂದರು.

ಬೀದರ್ ಲೋಕಸಭಾ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಸಂಗಮೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿ ಹದಗೆಟ್ಟಿದ್ದು, ಸಂಸದರ ನಿಧಿಯಿಂದ ಈ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಜಿಲ್ಲಾ ರಂಗಮಂದಿರಕ್ಕೆ ಈ ಭಾಗದ ನಡೆದಾಡುವ ದೇವರೆಂದೆ ಖ್ಯಾತರಾದ ಡಾ.ಚನ್ನಬಸವ ಪಟ್ಟದ್ದೇವರು ನಾಮಕರಣ, ಬೀದರನಿಂದ ನಾಗರಿಕ ವಿಮಾನ ಹಾರಾಟ, ಬೀದರ್‍ನಿಂದ ಅನೇಕ ಹೊಸ ರೈಲುಗಳನ್ನು ಆರಂಭಿಸಲಾಗಿದೆ. ನಾನು ಜನರಿಗೆ ಕೊಟ್ಟ ಭರವಸೆಯಂತೆ ಕಾರ್ಯ ನಿರ್ವಹಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತಷ್ಟು ಅಭಿವೃದ್ಧ ಕಾರ್ಯ ಮಾಡಲು ನನಗೆ ಬಲ ಬಂದಿದೆ ಎಂದು ಖೂಬಾ
ತಿಳಿಸಿದರು.

ADVERTISEMENT

ಖೇಡ್ ನೀಲಾಂಬಿಕಾ ಆಶ್ರಮದ ಮಹಾದೇವಮ್ಮಾ ತಾಯಿ ಸಾನಿಧ್ಯ ವಹಿಸಿ, ಪ್ರಸ್ತುತ ಸನ್ನಿವೇಶದಲ್ಲಿ ದೇಶಿ ಸಂಸ್ಕೃತಿ ನಾಶವಾಗುತ್ತಿದೆ. ಟಿ.ವಿ, ಮೊಬೈಲ್, ಅಂತರ್ಜಾಲದ ಅತಿಯಾದ ಬಳಕೆಯಿಂದ ನಮ್ಮ ಸಂಸ್ಕೃತಿ ಪರಂಪರೆ ಮರೆಯಾಗುತ್ತಿದೆ. ಇವುಗಳ ಬದಲಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಸಂಸ್ಕಾರ, ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.

ಸಂಗಮೇಶ್ವರ ದೇವಾಲಯ ಕಮಿಟಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಜಿಪಂ ಸದಸ್ಯ ಅನೀಲ ಬಿರಾದಾರ, ಪಿಎಸ್‍ಐ ವಿ.ಬಿ.ಯಾದವಾಡ್, ಚಂದ್ರಕಾಂತ ಬಾವಗೆ, ಕಲ್ಯಾಣರಾವ ಪಾಟೀಲ್, ಸೂರ್ಯಕಾಂತ ಬಚ್ಚಣ್ಣ, ಅಣ್ಣಾರಾವ ಪಾಟೀಲ್, ಡೋಣಗಾಪುರ ಬಸವ ಮಂಟಪದ ರೂವಾರಿ ದೇವಮ್ಮಾ ತಾಯಿ, ವರ್ಷಾ ಬಿರಾದಾರ, ಮಲ್ಲಿಕಾರ್ಜುನ ದುಬಲಗುಂಡೆ, ಸಂಗಮೇಶ ಸರಬಾರೆ, ಅನೀಲಕುಮಾರ ಕಲ್ಯಾಣರಾವ ಸ್ವಾಮಿ, ಚಂದ್ರಕಾಂತ ಸ್ವಾಮಿ ಇತರರಿದ್ದರು.

ಬಸವರಾಜ ಬಿರಾದಾರ್ ನಿರೂಪಿಸಿದರು. ಡಾ.ಮಹೇಶ ಬಿರಾದಾರ ಸ್ವಾಗತಿಸಿದರು. ಸಂಪೂರ್ಣಾ ಕರಿಮಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.