ADVERTISEMENT

ಪ್ರವಾದಿ ಮಹಮ್ಮದ್‌ರನ್ನು ಅರಿತುಕೊಳ್ಳಿ

ಪ್ರವಾದಿ ಸೀರತ್ ಅಭಿಯಾನದ ಬಹುಭಾಷಾ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 13:41 IST
Last Updated 2 ನವೆಂಬರ್ 2020, 13:41 IST
ಬೀದರ್‌ನ ಅಲ್-ಅಮೀನ್ ಪದವಿ ಪೂರ್ವ ಕಾಲೇಜಿನ ಅಬ್ದುಲ್ ಮಜೀದ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್‌ನ ಬೀದರ್ ಘಟಕದ ಅಧ್ಯಕ್ಷ ಮಹಮ್ಮದ್ ನಿಜಾಮುದ್ದೀನ್ ಮಾತನಾಡಿದರು
ಬೀದರ್‌ನ ಅಲ್-ಅಮೀನ್ ಪದವಿ ಪೂರ್ವ ಕಾಲೇಜಿನ ಅಬ್ದುಲ್ ಮಜೀದ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್‌ನ ಬೀದರ್ ಘಟಕದ ಅಧ್ಯಕ್ಷ ಮಹಮ್ಮದ್ ನಿಜಾಮುದ್ದೀನ್ ಮಾತನಾಡಿದರು   

ಬೀದರ್: ‘ಪ್ರವಾದಿ ಮಹಮ್ಮದ್ ಅವರು ಇಡೀ ಮನುಕುಲದ ಬಗ್ಗೆ ಅನುಕಂಪ ಹೊಂದಿದ್ದರು. ಮಾನವರು ಇಹಲೋಕ ಹಾಗೂ ಪರಲೋಕದಲ್ಲಿ ಸಂಕಷ್ಟದಿಂದ ಪಾರಾಗಿ ಯಶ ಸಾಧಿಸಬೇಕು ಎಂದು ಬಯಸುತ್ತಿದ್ದರು. ಪ್ರವಾದಿ ಮಹಮ್ಮದ್‌ರನ್ನು ಪ್ರತಿಯೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು’ ಎಂದು ಜಮಾ ಅತೆ ಇಸ್ಲಾಮಿ ಹಿಂದ್ ಅಭಿಯಾನದ ಸಂಚಾಲಕ ರಫೀಕ್ ಅಹ್ಮದ್ ನುಡಿದರು.

ನಗರದ ಅಲ್-ಅಮೀನ್ ಪದವಿ ಪೂರ್ವ ಕಾಲೇಜಿನ ಅಬ್ದುಲ್ ಮಜೀದ್ ಸಭಾಂಗಣದಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ಬೀದರ್‌ ಘಟಕದ ವತಿಯಿಂದ ‘ಪ್ರವಾದಿ ಮಹಮ್ಮದ್ ಮಾನವತೆಯ ಮಾರ್ಗದರ್ಶಕ’ ಸೀರತ್ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಾನು ಪ್ರತಿಯೊಬ್ಬನ ಟೊಂಕ ಹಿಡಿದು ನರಕದ ಬೆಂಕಿಯಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಮಾನವರು ಬೆಂಕಿಯಲ್ಲಿಯೇ ಬೀಳಲು ಪ್ರಯತ್ನಿಸುತ್ತಿದ್ದಾರೆ. ಜನರು ತಿಳಿದುಕೊಂಡಂತೆ ಪ್ರವಾದಿಯವರು ಜನರಿಗೆ ಸಂಕಷ್ಟ ನೀಡಲು ಬಂದಿಲ್ಲ, ಬದಲಾಗಿ ಅವರು ಮಾನವರಿಗೆ ಅನುಗ್ರಹವಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಜಮಾ ಅತೆ ಇಸ್ಲಾಮಿ ಹಿಂದ್‌ನ ಬೀದರ್‌ ಘಟಕದ ಅಧ್ಯಕ್ಷ ಮಹಮ್ಮದ್ ನಿಜಾಮುದ್ದೀನ್ ಮಾತನಾಡಿ, ‘ಮುಸ್ಲಿಮರು ಪ್ರವಾದಿ ಮಹಮ್ಮದ್‌ ಅವರ ಜೀವನವನ್ನು ಸರಿಯಾಗಿ ಅರಿತುಕೊಂಡು, ಅವರ ಆದರ್ಶ ತತ್ವಗಳ ಪರಿಪಾಲನೆ ಮಾಡಬೇಕು’ ಎಂದರು.

‘ಪ್ರವಾದಿ ಕುರಿತು ಇರುವ ಅಪನಂಬಿಕೆ ಹಾಗೂ ತಪ್ಪು ಕಲ್ಪನೆಗಳನ್ನು ದೂರ ಮಾಡಬೇಕು. ಸಮಾಜದಲ್ಲಿ ಪರಸ್ಪರರ ಧರ್ಮ, ಸಂಸ್ಕೃತಿ, ಪದ್ಧತಿಗಳನ್ನು ಅರಿತುಕೊಂಡು ಸಹಬಾಳ್ವೆ ನಡೆಸಲು ಸಹಕಾರಿಯಾಗಬೇಕು’ ಎಂದು ಹೇಳಿದರು.

‘ಪ್ರವಾದಿಯವರ ಬಗ್ಗೆ ಸರಿಯಾದ ಪರಿಚಯ ಇಲ್ಲದ ಕಾರಣ ಕೆಲವರು ಗೊಂದಲದಲ್ಲಿದ್ದಾರೆ. ಅಂಥವರು ಪ್ರವಾದಿ ಅವರ ಚರಿತ್ರೆ ಹಾಗೂ ಸಂದೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮೂಲಕ ಮನುಕುಲದ ಕಲ್ಯಾಣಕ್ಕೆ ಶ್ರಮಿಸಬೇಕು’ ಎಂದು ತಿಳಿಸಿದರು.
‘ಜಿಹಾದ್‌ ಶಬ್ದದ ಬಗ್ಗೆಯೇ ಹಲವರಲ್ಲಿ ತಪ್ಪು ಕಲ್ಪನೆ ಇದೆ. ನಿಜ ಅರ್ಥದಲ್ಲಿ ಕೆಡಕಿನ ವಿರುದ್ಧ ಹೋರಾಡುವುದೇ ಜಿಹಾದ್ ಆಗಿದೆ. ವ್ಯಕ್ತಿಯಲ್ಲಿನ ಅವಗುಣಗಳನ್ನು ತೊಲಗಿಸುವುದು ಹಾಗೂ ಸಮಾಜದಲ್ಲಿರುವ ಕೆಡಕುಗಳನ್ನು ಹೋಗಲಾಡಿಸುವುದು ಸಹ ಜಿಹಾದ್‌ ಆಗಿದೆ’ ಎಂದು ತಿಳಿಸಿದರು.

‘ಪ್ರಸ್ತುತ ಕೆಲವರು ಜಿಹಾದ್‌ ಶಬ್ದವನ್ನು ಮುಂದೆ ಮಾಡಿಕೊಂಡು ಧರ್ಮದೊಂದಿಗೆ ನಂಟು ಜೋಡಿಸಲು ಪ್ರಯತ್ನಿಸುತ್ತಿದ್ದಾರೆ. ಧರ್ಮದ ಬಗೆಗಿನ ಆಳವಾದ ಅಧ್ಯಯನದ ಕೊರತೆ ಹಾಗೂ ಇಸ್ಲಾಂ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣವಾಗಿದೆ’ ಎಂದು ಹೇಳಿದರು.

ಕವಯತ್ರಿಯರಾದ ಜಯಶ್ರೀ ಸುಕಾಲೆ ಅವರು ‘ಮಾನವ ಕುಲದ ಕಣ್ಮಣಿ-ಮಹಮ್ಮದ್ ಪೈಗಂಬರ್’, ವಿದ್ಯಾವತಿ ಬಲ್ಲೂರ ‘ಆಸೆ, ಆಮಿಷ್ಯ ತೊರೆಯುವುದೇ ಜಿಹಾದ್’ ರಮೇಶ ಬಿರಾದಾರ ‘ಕಾಯಂ ನಮಾಜ್‌’
ರಘುಶಂಖ ಭಾತಂಬ್ರಾ ‘ಮಹಾ ಪ್ರವಾದಿ’, ಪ್ರೊ.ದೇವೇಂದ್ರ ಕಮಲ್‌ ‘ಆಜ್ ಮುಝಫರ್ ಮುಹಮ್ಮದ್ ಕೀ ಮೆಹೆರಬಾನಿ ಹೋಗಯೀ’ ಶೀರ್ಷಿಕೆಯ ಕವನ ವಾಚಿಸಿದರು.

ಉರ್ದುದಲ್ಲಿ ಮುನವ್ವರ್ ಅಲಿ ಶಾಹಿದ್, ಲತೀಫ್ ಖಲೀಶ್, ಹಾಮೇದ್ ಸಲೀಂ, ಮಹಮ್ಮದ್‌ ಕಮಾಲುದ್ದೀನ್ ಶಮೀಮ್, ಮೀರ್ ಬಿದ್ರಿ, ಮಹಮ್ಮದ್ ಝಫರುಲ್ಲಾ ಖಾನ್, ಅಮೀರುದ್ದಿನ್ ಅಮೀರ್ ಹಾಗೂ ಸೈಯ್ಯದ್ ಜಮೀಲ್ ಅಹ್ಮದ್ ಹಾಷ್ಮಿ ಕವನ ವಾಚನ ಮಾಡಿದರು.

ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಾಹಿತಿ ಬಸವರಾಜ ಬಲ್ಲೂರ, ಸಂಜೀವಕುಮಾರ ಅತಿವಾಳೆ ಹಾಗೂ ಸಾಮಾಜಿಕ ಕಾರ್ಯಕರ್ತ ಮುಬಶ್ಶಿರ್ ಶಿಂಧೆ ಇದ್ದರು. ಷಾ ಅಸ್ಲಂ ಖಾದ್ರಿ ನಿರೂಪಿಸಿದರು. ಮಹಮ್ಮದ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.