ADVERTISEMENT

ನಿವೃತ್ತ ನೌಕರನ ಕೊಲೆ: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 3:01 IST
Last Updated 3 ಮಾರ್ಚ್ 2021, 3:01 IST

ಬೀದರ್: ನಗರದ ಮೈಲೂರು ಶಾಸ್ತ್ರಿನಗರದ ಆರೋಗ್ಯ ಇಲಾಖೆಯ ನಿವೃತ್ತ ನೌಕರ ನಾರಾಯಣರಾವ್ ಮುಕಿಂದರಾವ್ ಬಿರಾದಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಅರ್ಕಟಗಲ್ಲಿಯ ಅಂಬ್ರೇಶ್ ಕೇಶವರಾವ್, ರಾಜಪೂತ್ ಕಾಲೊನಿಯ ಠಾಕೂರ್ ಸಚಿನ್ ಸಿಂಗ್ ಹಾಗೂ ಕುಂಬಾರವಾಡದ ವಿನೋದ ವೈಜಿನಾಥ ಬಂಧಿತ ಆರೋಪಿಗಳು.

ಫೆಬ್ರುವರಿ 12ರಂದು ಜಿಲ್ಲಾ ಆಸ್ಪತ್ರೆಯಿಂದ ಬೈಕ್ ಮೇಲೆ ಹೋಗಿದ್ದ ನಾರಾಯಣರಾವ್ ಮನೆಗೆ ತಲುಪದೆ ಕಾಣೆಯಾಗಿದ್ದರು. ಮರುದಿನ ಅವರ ಪತ್ನಿ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ನಾರಾಯಣರಾವ್ ಅವರನ್ನು ಕೊಲೆ ಮಾಡಿರುವುದನ್ನು ಪತ್ತೆ ಹಚ್ಚಿದ್ದರು.

ADVERTISEMENT

‘ಆರೋಪಿಗಳು ನಾರಾಯಣರಾವ್ ಅವರನ್ನು ನಗರದ ಶುಕ್ಲತೀರ್ಥ ದೇವಸ್ಥಾನ ಪಕ್ಕದ ಕೋಟೆಯ ಹಿಂದುಗಡೆ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಗೋಣಿ ಚೀಲದಲ್ಲಿ ಹಾಕಿ ಚರಂಡಿಯಲ್ಲಿ ಬೀಸಾಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಅವರ ಮಾರ್ಗದರ್ಶನದಲ್ಲಿ ಸಿಪಿಐ ಡಿ.ಜಿ. ರಾಜಣ್ಣ ನೇತೃತ್ವದಲ್ಲಿ ರಚಿಸಲಾಗಿದ್ದ ಪ್ರತ್ಯೇಕ ತಂಡಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ತಂಡಗಳ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಸೂಕ್ತ ಬಹುಮಾನ ಕೊಡಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.