ADVERTISEMENT

ವೈಕುಂಠದತ್ತ ಅವರಿಗೆ `ಬಿದರಿ' ದತ್ತಿ ಪ್ರಶಸ್ತಿ

14ರಂದು `ಬಿದರಿ' ವೇದಿಕೆಯಿಂದ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 15:28 IST
Last Updated 12 ಫೆಬ್ರುವರಿ 2021, 15:28 IST

ಬೀದರ್: ಇಲ್ಲಿನ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಇದೇ ಫೆ.. 14ರಂದು ಸಂಜೆ 5ರಿಂದ ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂಗೀತೋತ್ಸವ ಹಾಗೂ ರಾಜ್ಯ ಮಟ್ಟದ `ಬಿದರಿ' ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದೆ.

ಹಿರಿಯ ಸಂಗೀತ ವಿದ್ವಾಂಸ ವೈಕುಂಠದತ್ತ ಮಹಾರಾಜ್ ಅವರಿಗೆ ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಪ್ರಥಮ ರಾಜ್ಯ ಮಟ್ಟದ ಬಿದರಿ, ದತ್ತಿ ಪ್ರಶಸ್ತಿ ನೀಡಲಾಗುತ್ತಿದ್ದು ಇದರೊಟ್ಟಿಗೆ ರಾಷ್ಟ್ರಕವಿ ಕುವೆಂಪು, ಸಂಗೀತ ನಿರ್ದೇಶಕರು, ಖ್ಯಾತ ಗಾಯಕರಾದ ಸಿ. ಅಶ್ವಥ್, ರಾಜನ್, ಡಾ. ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ನೆನಪಿಗಾಗಿ `ಬಿದರಿ' ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾದ್ ಸೌದಿ ಅವರ ನೇತೃತ್ವದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

ಗಾಯಕರಾದ ಅಮಿತ್ ಜನವಾಡಕರ್, ಗೋವಿಂದ ಕರ್ನೂಲ್ ಬೆಂಗಳೂರು, ನಾಗರಾಜ ಜೋಗಿ, ರಾಜೇಶ ಕುಲಕರ್ಣಿ, ಎನ್‍ಎಸ್ ಕುಲಕರ್ಣಿ, ವಿಷ್ಣು ಜನವಾಡಕರ್ ಹಾಗೂ ಸೊಲ್ಲಾಪೂರದ ಸ್ಟಾರ್ ಆಫ್ ಮೆಲೋಡಿಸ್ ವಾದ್ಯ ತಂಡದ ಸಹಯೋಗದಲ್ಲಿ ವೈವಿಧ್ಯಮಯ ಗಾಯನದ ಮೂಲಕ ಸಂಗೀತ ಸಂಜೆಯ ಮೆರಗು ಹೆಚ್ಚಿಸಲಿದ್ದಾರೆ.

ADVERTISEMENT

ಕಸ್ತೂರಿ ಎಸ್ ಪಟಪಳ್ಳಿ ನೇತೃತ್ವದಲ್ಲಿ ಹೊಸ ಹೆಜ್ಜೆ ಎಂಬ ತಲಾ 10 ನಿಮಿಷ ಕಾಲದ ನಾಟಕಗಳು ಮತ್ತು ಅಮೂಲ್ಯ ಶ್ರೀಮಂತ ಸಪಾಟೆ ನೇತೃತ್ವದಲ್ಲಿ ಅಕ್ಷಯ ಡ್ಯಾನ್ಸರ್ ತಂಡದಿಂದ ನೃತ್ಯ ರೂಪಕ ನಡೆಯಲಿದೆ.

ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಬೀದರ್ ಜಿಲ್ಲೆಯ ಖ್ಯಾತ ಕಲಾವಿದರುಗಳಿಂದ ಸಂಗೀತ, ನೃತ್ಯ ಕಾರ್ಯಕ್ರಮಗಳು ಜರುಗಲಿವೆ. ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಉದ್ಘಾಟಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸುರೇಶ ಬಡಿಗೇರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನಶೆಟ್ಟಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ರಾಜೇಂದ್ರಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಜಿಲ್ಲಾ ರಂಗಮಂದಿರದಲ್ಲಿ ಸಂಜೆ 5ಕ್ಕೆ ಕಾರ್ಯಕ್ರಮವನ್ನು ಸಂಜೆ 5ಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಅವರು ಉದ್ಘಾಟಿಸಲಿದ್ದು, ದತ್ತಿ ಪ್ರಶಸ್ತಿಯನ್ನು ಹಿರಿಯ ರಂಗ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಅವರು ಪ್ರದಾನ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಪಾಲ್ಗೊಳ್ಳಲಿದ್ದಾರೆ. .

`ಬಿದರಿ' ವೇದಿಕೆಯಿಂದ ನಡೆಯಲಿರುವ ಈ ಸಂಗೀತೋತ್ಸವ ಸಂಪೂರ್ಣ ಕಾರ್ಯಕ್ರಮ ಫೇಸ್‍ಬುಕ್ ಹಾಗೂ ಯುಟ್ಯೂಬ್‍ಗಳಲ್ಲಿ ಲೈವ್ ಆಗಿ ಬಿತ್ತರವಾಗಲಿದೆ ಎಂದು ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.