
ಭಾಲ್ಕಿ: ಬಡವರು, ದುರ್ಬಲರು, ನಿರಾಶ್ರಿತರು, ನಿರ್ಗತಿಕರಿಗೆ ಮಠ-ಮಾನ್ಯಗಳು ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ತಾಲ್ಲೂಕಿನ ಭಾತಂಬ್ರಾ ಗ್ರಾಮದ ನಿರಂಜನ ಸಂಸ್ಥಾನ ಮಠದ ಪರಿಸರದಲ್ಲಿ ಗುರುಬಸವ ದೇಶಿಕರ ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಬಸವ ದರ್ಶನ ಪ್ರವಚನ ಮಂಗಲೋತ್ಸವ, ಶಿವಯೋಗೀಶ್ವರ ಸ್ವಾಮೀಜಿ ಅವರ 85ನೇ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜದಲ್ಲಿ ಜಾಗೃತಿ ಮೂಡಿಸಲು ಮಠಗಳು ತಮ್ಮದೇ ಆದ ಪಾತ್ರ ವಹಿಸುತ್ತಿವೆ. ಅದರಲ್ಲಿ ವಿಶೇಷವಾಗಿ ವೀರಶೈವ-ಲಿಂಗಾಯತ ಮಠಗಳ ಕೊಡುಗೆ ಹಿರಿದಾಗಿದೆ. ರಾಜ್ಯದ ಪ್ರಗತಿಯಲ್ಲಿ ಮಠ ಮಾನ್ಯಗಳ ಕೊಡುಗೆ ಅನನ್ಯವಾಗಿದೆ’ ಎಂದರು.
‘ಗಡಿಭಾಗದಲ್ಲಿ ಕಳೆದ ಐದು ದಶಕಗಳಿಂದ ಶಿವಯೋಗೀಶ್ವರ ಸ್ವಾಮೀಜಿ ಧರ್ಮ ಪ್ರಚಾರ, ಪ್ರಸಾರದ ಜತೆಗೆ ಧರ್ಮ, ಪರಂಪರೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಮಠಕ್ಕೆ ಪಟ್ಟಾಭಿಷೇಕ ನೆರವೇರಿಸುತ್ತಿರುವುದು ಸಂತಸ ತರಿಸಿದೆ. ನೂತನ ಪೂಜ್ಯರು ಕೂಡ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ನಡೆದು ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಲಿ’ ಎಂದು ಆಶಿಸಿದರು.
ಸಾನ್ನಿಧ್ಯ ವಹಿಸಿದ್ದ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ‘ಸುಂದರ ಸಮಾಜ ನಿರ್ಮಾಣವಾಗಬೇಕು. ಪ್ರತಿಯೊಬ್ಬರು ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಬೇಕು ಎನ್ನುವ ಆಶಯ ತಮ್ಮದ್ದಾಗಿದ್ದು, ಆ ನಿಟ್ಟಿನಲ್ಲಿ ಸಮಾಜದಲ್ಲಿ ಕೈಲಾದಷ್ಟು ಒಳ್ಳೆಯ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ’ ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಅನುಭಾವ ನೀಡಿದರು. ಹಾರಕೂಡ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಗುರುಬಸವ ದೇಶಿಕರು, ಬಸವಾಂಜಲಿ ತಾಯಿ ಸಮ್ಮುಖ ವಹಿಸಿದ್ದರು.
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹಣಮಂತರಾವ್ ಚವ್ಹಾಣ, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಕುಮಾರ ಕಲ್ಯಾಣೆ, ಪಿಎಸ್‍ಐ ಅಶೋಕ ಪಾಟೀಲ, ಹಿರಿಯ ಮುಖಂಡ ಅಪ್ಪಾಸಾಬ್ ದೇಶಮುಖ, ಯುವ ಮುಖಂಡ ವಿಲಾಸ ಮೋರೆ, ನಿವೃತ್ತ ಉಪನ್ಯಾಸಕ ವೈಜಿನಾಥ ಭಂಡೆ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ರಾಚಪ್ಪ ಗೋರ್ಟೆ, ಗ್ರಾ.ಪಂ. ಅಧ್ಯಕ್ಷ ಮಹಾಂತೇಶ ಪಾಟೀಲ, ಶ್ರೀಕಾಂತ ಭೋರಾಳೆ, ಕಾಶಿನಾಥ ಲದ್ದೆ ಸೇರಿದಂತೆ ಹಲವರು ಇದ್ದರು.
ಶಿವಯೋಗಿಶ್ವರ ಸ್ವಾಮೀಜಿ ಅವರು ಧರ್ಮ ಜಾಗೃತಿ ಜತೆಗೆ ಬಸವ ಮಹಾಜೋಳಿಗೆ ಹಿಡಿದು ಜನರಲ್ಲಿನ ದುರ್ಗುಣ ವ್ಯಸನಗಳನ್ನು ಭೀಕ್ಷೆ ಬೇಡಿ ಸುಂದರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿರುವುದು ಮಾದರಿ ಎನಿಸಿದೆಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ
ಕೌಟುಂಬಿಕ ಸಾಮರಸ್ಯ:
ಮಹಿಳಾ ಗೋಷ್ಠಿ ಶನಿವಾರ ಬೆಳಿಗ್ಗೆ 10.30 ಗಂಟೆಗೆ ಕೌಟುಂಬಿಕ ಸಾಮರಸ್ಯ ಕುರಿತು ಮಹಿಳಾ ಗೋಷ್ಠಿ ನೆರವೇರಿತು. ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ ಅವರು ಸಾನ್ನಿಧ್ಯ ವಹಿಸಿ ಕೌಟುಂಬಿಕ ವಿಷಯ ಕುರಿತು ಮಾತನಾಡಿದರು. ಹಲಬರ್ಗಾ ಶರಣಗಿರಿ ಮಹಾಮಠದ ಮಹಿಳಾ ಪೀಠಾಧ್ಯಕ್ಷೆ ಮಾತೆ ಬಸವಾಂಜಲಿ ತಾಯಿ ನೇತೃತ್ವ ವಹಿಸಿದ್ದರು. ಬಸವಕಲ್ಯಾಣ ಹರಳಯ್ಯನವರ ಗವಿ ಅಧ್ಯಕ್ಷೆ ಗಂಗಾಂಬಿಕೆ ಅಕ್ಕೆ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಕಸಾಪ ರಾಜ್ಯ ಮಹಿಳಾ ಪ್ರತಿನಿಧಿ ಮಲ್ಲಮ್ಮ ಆರ್. ಪಾಟೀಲ ಬಸವ ಗುರುವಿನ ಪೂಜೆ ನೆರವೇರಿಸಿದರು. ಶಿವಗಂಗಾ ರುಮ್ಮಾ ಅನುಭಾವ ನೀಡಿದರು. ಡಾ.ಗುರಮ್ಮಾ ಸಿದ್ಧಾರೆಡ್ಡಿ ಕುಮಾರೇಶ್ವರನ ಪೂಜೆ ನೆರವೇರಿಸಿದರು. ಅಕ್ಕಮಹಾದೇವಿ ತಾಯಿ ನಟಿ ಸುಲಕ್ಷಾ ಆರತಿ ಪಾತ್ರೆ ಸೇರಿದಂತೆ ಹಲವರು ಇದ್ದರು. ಕ್ಯಾಲೆಂಡರ ಬಿಡುಗಡೆ: ಇದೇ ವೇಳೆ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಹೊರತಂದ 2026ನೇ ಸಾಲಿನ ಕ್ಯಾಲೆಂಡರ್‌ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬಿಡುಗಡೆಗೊಳಿಸಿದರು. ಕ್ಯಾಲೆಂಡರ ದಾಸೋಹಿ ಈಶ್ವರಮ್ಮ ಶಂಕರಯ್ಯ ಸ್ವಾಮಿ ಇದ್ದರು. ವೆಂಕಟ ಭೋರಾಳೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಮಹಾದೇವ ಬೇಲೂರೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.