ಬೀದರ್: ತುಂತುರು ಮಳೆಯ ನಡುವೆಯೂ ನಾಗರಪಂಚಮಿ ಹಾಗೂ ಬಸವ ಪಂಚಮಿಯನ್ನು ಜಿಲ್ಲೆಯಾದ್ಯಂತ ಮಂಗಳವಾರ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಮಹಿಳೆಯರು ಬೆಳಿಗ್ಗೆ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ನೆರವೇರಿಸಿದರು. ಹುತ್ತ ಹಾಗೂ ನಾಗದೇವತೆಯ ಕಲ್ಲಿನ ಮೂರ್ತಿಗೆ ಹಾಲೆರೆದು ಹರಕೆ ತೀರಿಸಿದರು. ನಗರದ ಜನವಾಡ ರಸ್ತೆಯ ನಾಗಪ್ಪನ ಕಟ್ಟೆಗೆ ವಿವಿಧ ಕಡೆಗಳಿಂದ ಜನ ಬಂದು ಪೂಜೆ ಸಲ್ಲಿಸಿದರು. ಮನೆಯಲ್ಲಿ ದೇವರಿಗೆ ನೈವೇದ್ಯ ಸಮರ್ಪಿಸಿದರು, ಕುಟುಂಬ ಸದಸ್ಯರೊಡನೆ ಊಟ ಸವಿದರು. ಹೊಸ ಬಟ್ಟೆ ಧರಿಸಿ, ಹಬ್ಬದ ಹಾಡು ಹಾಡಿ ಕಾಲ ಕಳೆದರು.
ದಿನವಿಡೀ ದಟ್ಟ ಮೋಡ ಕವಿದ ವಾತಾವರಣ ಇತ್ತು. ಆಗೊಮ್ಮೆ ಈಗೊಮ್ಮೆ ಎಂಬಂತೆ ತುಂತುರು ಹನಿಗಳು ಉದುರುತ್ತಿದ್ದವು. ಆದರೆ, ಇದು ಹಬ್ಬದ ಸಂಭ್ರಮ ಕಡಿಮೆಗೊಳಿಸಲಿಲ್ಲ. ಇದರಲ್ಲೇ ಜನ ಹರ್ಷೊಲ್ಲಾಸದಿಂದ ಓಡಾಡಿದರು.
ಸಂಜೆ ದೇವಸ್ಥಾನ ಹಾಗೂ ಮನೆ ಎದುರಿನ ಉದ್ಯಾನಗಳಲ್ಲಿ ಮಹಿಳೆಯರು ಸೇರಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ವೃತ್ತಾದಾಕಾರದಲ್ಲಿ ನಿಂತು ಭುಲಾಯಿ ಪದಗಳನ್ನು ಹಾಡಿದರು. ಇನ್ನು, ಬಸವಪರ ಸಂಘಟನೆಗಳು ಬಸವಣ್ಣನವರ ಲಿಂಗೈಕ್ಯ ದಿನವನ್ನು ಬಸವ ಪಂಚಮಿಯಾಗಿ ಆಚರಿಸಿದರು. ಸರ್ಕಾರಿ ಆಸ್ಪತ್ರೆಯ ರೋಗಿಗಳು ಹಾಗೂ ಅನಾಥಾಶ್ರಮದ ಮಕ್ಕಳಿಗೆ ಹಣ್ಣು, ಹಾಲು ವಿತರಿಸಿದರು.
ಹಾಲು ಹಾವಿನ ಆಹಾರವಲ್ಲ’
ಬೀದರ್: ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿಯವರ ನೇತೃತ್ವದಲ್ಲಿ ಬೀದರ್‌ನ ಬ್ರಿಮ್ಸ್‌ನಲ್ಲಿ ಬಾಣಂತಿಯರು ಹಾಗೂ ರೋಗಿಗಳಿಗೆ ಹಣ್ಣು ಹಾಲು ಹಾಗೂ ಪ್ರಸಾದ ವಿತರಿಸಲಾಯಿತು. ಪ್ರಭುದೇವ ಸ್ವಾಮೀಜಿ ಮಾತನಾಡಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ಲಿಂಗೈಕ್ಯರಾದದ್ದು ಶ್ರಾವಣ ಶುದ್ಧ ಪಂಚಮಿಯಂದು. ಆದಕಾರಣ ಇದನ್ನು ಬಸವಪಂಚಮಿ ರೂಪದಲ್ಲಿ ಬಸವಧರ್ಮೀಯರು ವೈಚಾರಿಕವಾಗಿ ಆಚರಿಸುತ್ತಾರೆ. ಶರಣರು ಮೂಢ ಆಚರಣೆಗಳನ್ನು ಒಪ್ಪುವುದಿಲ್ಲ. ಹಾಲು ಹಾವಿನ ಆಹಾರವಲ್ಲ. ಹುತ್ತಕ್ಕೆ ಹಾಲೆರೆಯುವುದರಿಂದ ಹಾವಿಗೆ ತೊಂದರೆ ಕೊಟ್ಟಂತಾಗುತ್ತದೆ. ಅದರ ಬದಲು ಹಸಿದವರಿಗೆ ಹಾಲುಣಿಸಿದರೆ ಸಾರ್ಥಕವಾಗುತ್ತದೆ ಎಂದರು. ಮಠದಿಂದ ಮೊದಲಿನಿಂದಲೂ ಜೈಲಿನಲ್ಲಿ ಶಾಲೆಗಳಲ್ಲಿ ಹಸಿದ ಹೊಟ್ಟೆಗಳಿಗೆ ಹಾಲುಣಿಸಿ ಬಸವಪಂಚಮಿ ಆಚರಿಸುತ್ತ ಬರಲಾಗುತ್ತಿದೆ. ಅಂಧಶ್ರದ್ಧೆ ಮೂಢ ಆಚರಣೆಗಳು ತೊಲಗಲಿ ಸತ್ಯದ ಆಚರಣೆ ನೆಲೆಗೊಳ್ಳಬೇಕಿದೆ ಎಂದು ಹೇಳಿದರು. ರೋಟರಿ ಕ್ಲಬ್ ಬೀದರ್ ನ್ಯೂ ಸೆಂಚ್ಯುರಿ ನಿಕಟಪೂರ್ವ ಅಧ್ಯಕ್ಷ ಶಿವಕುಮಾರ ಪಾಖಾಲ್ ಬ್ರಿಮ್ಸ್ ಆಸ್ಪತ್ರೆಯ ಡಾ. ಶಿವಯೋಗಿ ಬಾಳಿ ರಮೇಶ ಮಠಪತಿ ಶರಣ್ ಬುಳ್ಳಾ ರಾಜಕುಮಾರ ಹೆಬ್ಬಾಳೆ ಇಮ್ಯಾನುವೆಲ್ ಚೆನ್ನಬಸವಣ್ಣ ಪ್ರಕಾಶ ಮಠಪತಿ ಆರ್.ಕೆ. ಪಾಟೀಲ ಸಿ.ಎಸ್.ಗಣಾಚಾರಿ ಅಶೋಕ ಎಲಿ ಶ್ರೀಕಾಂತ ಬೀಕಲೆ ನೀಲಾಂಬಿಕೆ ಪಾಖಾಲ ಲಾವಣ್ಯ ಹಂಗರಗಿ ಲಿಂಗಾಯತ ಸೇವಾ ದಳದ ಅಭಿಷೇಕ ಮಠಪತಿ ಹಣಮು ಪಾಜಿ ವಿಕ್ಕಿ ಪಾಟೀಲ ಸಂತೋಷ ಹಂಗರಗಿ ಸುಪ್ರೀತ ಪತಂಗೆ ಮತ್ತಿತರರು ಇದ್ದರು.
‘ಹಸಿದವರಿಗೆ ಹಾಲುಣಿಸಿ’
ಬೀದರ್: ಬಸವಕೇಂದ್ರದ ವತಿಯಿಂದ ಬೀದರ್‌ನ ವಿದ್ಯಾನಗರದ ನವಚೇತನ ವಿಶೇಷ ಮಕ್ಕಳ ವಸತಿಯುತ ಶಾಲೆಯ ಮಕ್ಕಳಿಗೆ ಹಣ್ಣು ಹಾಲು ವಿತರಿಸಲಾಯಿತು. ಹಸಿದ ಮನಕ್ಕೆ ಹಾಲುಣಿಸಿ ಮೂಢನಂಬಿಕೆ ದೂರವಾಗಿಸಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ಹಣ್ಣು ವಿತರಿಸುವ ಸಂಪ್ರದಾಯ ಬೆಳೆಸಬೇಕು ಎಂದು ರಾಜ್ಯ ವೈಜ್ಞಾನಿಕ ಪರಿಷತ್ತಿನ ಸಂಯೋಜಕ ಬಾಬು ದಾನಿ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಸಂಪ್ರದಾಯಕ್ಕಿಂತ ಸತ್ಯ ಶ್ರೇಷ್ಠ ಎಂಬ ತತ್ವ ಸಾರಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಬೆಳಗಾವಿ ಶಿರಸಂಗಿ ಮಠದ ಬಸವಮಹಾಂತ ಸ್ವಾಮೀಜಿ ಮಾತನಾಡಿ ವೈಚಾರಿಕ ವೈಜ್ಞಾನಿಕ ತತ್ವಗಳು ಜನಸಾಮಾನ್ಯರ ಬದುಕಿನಲ್ಲಿ ರೂಢಿಗೆ ಬಂದಾಗ ಅಂಧಶ್ರದ್ದೆ ತೊಲಗುತ್ತದೆ ಎಂದು ಹೇಳಿದರು. ಮಹಿಳಾ ಬಸವ ಕೇಂದ್ರದ ಗೌರವ ಅಧ್ಯಕ್ಷೆ ಕರುಣಾ ಶೆಟಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧಾರೂಢ ಭಾಲ್ಕೆ ಸ್ವಾಗತಿಸಿದರೆ ಆಕಾಶ ಕೋಟೆ ವಂದಿಸಿದರು. ಶಿವಶಂಕರ ಟೋಕರೆ ನಿರೂಪಿಸಿದರು. ವಿದ್ಯಾವತಿ ಬಲ್ಲೂರ ಸಕಲೇಶ್ವರಿ ಚನಶೆಟ್ಟಿ ಪಂಪಾವತಿ ಪಾಟೀಲ ಶೀಲಾವತಿ ಶೀಲವಂತ ಸೂಗಮ್ಮ ನಾವದಗೇರೆ ಶರಣಯ್ಯ ಸ್ವಾಮಿ ಅಶೋಕ ದಿಡಗೆ ಸೂರ‍್ಯಕಾಂತ ಇದ್ದರು.
ವಿಶೇಷ ವಸತಿ ಶಾಲೆ ಮಕ್ಕಳಿಗೆ ಹಾಲು
ಬೀದರ್: ನಗರದ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದ ವತಿಯಿಂದ ಬಸವ ಪಂಚಮಿಯನ್ನು ನಗರದ ನವ ಜೀವನ ವಿಶೇಷ ವಸತಿ ಶಾಲೆಯಲ್ಲಿ ಆಚರಿಸಲಾಯಿತು. ಅಲ್ಲಿನ ಮಕ್ಕಳಿಗೆ ಹಾಲು ಹಣ್ಣು ವಿತರಿಸಲಾಯಿತು. ಬಸವಕಲ್ಯಾಣ ಅನುಭವ ಮಂಟಪದ ಮಾತೆ ಸುಗುಣ ತಾಯಿ ಮಾತನಾಡಿ ಬಸವಣ್ಣನವರು ದೀನ ದಲಿತರ ಅಂಗವಿಕಲ ಮಕ್ಕಳ ಸ್ತ್ರೀಯರ ಕಲ್ಯಾಣ ಬಯಸುವ ಕರುಣಾಮಯಿ ಆಗಿದ್ದರು. ಅವರು ಲಿಂಗೈಕ್ಯರಾದ ದಿನವನ್ನು ಬಸವ ಪಂಚಮಿ ರೂಪದಲ್ಲಿ ಆಚರಿಸಲಾಗುತ್ತದೆ ಎಂದರು. ಉಮಾಕಾಂತ ಮೀಸೆ ಸ್ವಾಗತಿಸಿ ನಿರೂಪಿಸಿದರು. ಶ್ರೀಕಾಂತ ಬಿರಾದಾರ ಸಂಗ್ರಾಮ ಎಂಗಳೆ ಸಂಗ್ರಾಮಪ್ಪ ಬಿರಾದಾರ ಭೀಮಾಶಂಕರ್ ಬಿರಾದಾರ ತೀರ್ಥಮ ರೆಡ್ಡಿ ಶರಣಪ್ಪ ಶಾಲೆಯ ಮುಖ್ಯಸ್ಥ ಅನಿಲ್ ಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.