ADVERTISEMENT

ರಸ್ತೆಗೆ ಆರ್.ವಿ ಬಿಡಪ್ ಹೆಸರಿಡಿ

ಪುಣ್ಯತಿಥಿ ಕಾರ್ಯಕ್ರಮದಲ್ಲಿ ಡಾ. ಜಗನ್ನಾಥ ಹೆಬ್ಬಾಳೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 13:27 IST
Last Updated 2 ಜನವರಿ 2021, 13:27 IST
ಬೀದರ್‌ನ ಆರ್.ವಿ. ಬಿಡಪ್ ಕಾನೂನು ಕಾಲೇಜು ಮುಂಭಾಗದಲ್ಲಿ ಶನಿವಾರ ಆರ್.ವಿ. ಬಿಡಪ್ ಅವರ ಪುಣ್ಯತಿಥಿ ಆಚರಿಸಲಾಯಿತು
ಬೀದರ್‌ನ ಆರ್.ವಿ. ಬಿಡಪ್ ಕಾನೂನು ಕಾಲೇಜು ಮುಂಭಾಗದಲ್ಲಿ ಶನಿವಾರ ಆರ್.ವಿ. ಬಿಡಪ್ ಅವರ ಪುಣ್ಯತಿಥಿ ಆಚರಿಸಲಾಯಿತು   

ಬೀದರ್: ಜಿಲ್ಲಾ ಆಡಳಿತವು ನಗರದ ಯಾವುದಾದರೊಂದು ರಸ್ತೆಗೆ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಆರ್.ವಿ. ಬಿಡಪ್ ಅವರ ಹೆಸರಿಡಬೇಕು ಎಂದು ಕರ್ನಾಟಕ ಪದವಿ ಕಾಲೇಜು ಪ್ರಾಚಾರ್ಯ ಡಾ. ಜಗನ್ನಾಥ ಹೆಬ್ಬಾಳೆ ಸಲಹೆ ಮಾಡಿದರು.

ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ವತಿಯಿಂದ ನಗರದ ಆರ್.ವಿ. ಬಿಡಪ್ ಕಾನೂನು ಕಾಲೇಜು ಮುಂಭಾಗದಲ್ಲಿ ಶನಿವಾರ ಆಯೋಜಿಸಿದ್ದ ಆರ್.ವಿ. ಬಿಡಪ್ ಅವರ 24ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಡಪ್ ಅವರ ಪ್ರಯತ್ನದ ಫಲವಾಗಿಯೇ ಕೆಆರ್‍ಇ ಸಂಸ್ಥೆಯಲ್ಲಿ ಇಂದು ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಧ ಕೊರ್ಸ್‍ಗಳನ್ನು ಪೂರೈಸಿರುವ ಹಲವಾರು ವಿದ್ಯಾರ್ಥಿಗಳು ವೈದ್ಯ, ಎಂಜಿನಿಯರ್, ವಕೀಲ, ಶಿಕ್ಷಕ ಮೊದಲಾದ ಹುದ್ದೆಗಳಲ್ಲಿ ಇದ್ದಾರೆ ಎಂದು ತಿಳಿಸಿದರು.

ADVERTISEMENT

ತಾವು ಬರೆದ ಆರ್.ವಿ. ಬಿಡಪ್ ಅವರ ಜೀವನ ಮತ್ತು ಸಾಧನೆ ಆಧಾರಿತ ಪುಸ್ತಕ ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಎಸ್ಸಿ ನಾಲ್ಕನೇ ಸೆಮಿಸ್ಟರ್ ಪಠ್ಯದ ಭಾಗವಾಗಿದೆ ಎಂದು ಹೇಳಿದರು.

ಹಿಂದೆ ಬೀದರ್ ಕರ್ನಾಟಕದ ಕೈ ತಪ್ಪಿ ಹೋಗುತ್ತಿತ್ತು. ಆದರೆ, ಫಜಲ್ ಅಲಿ ಕಮಿಷನ್ ಜತೆ ಚರ್ಚಿಸಿ ಬೀದರ್ ಕರ್ನಾಟಕದಲ್ಲಿಯೇ ಉಳಿಯುವಂತೆ ಮಾಡಿದ ಶ್ರೇಯ ಬಿಡಪ್ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಟ್ರಸ್ಟ್ ಅಧ್ಯಕ್ಷ ಡಾ. ಚನ್ನಬಸಪ್ಪ ಹಾಲಹಳ್ಳಿ ನುಡಿದರು.

ಶಿಕ್ಷಣ ಪ್ರೇಮಿಯಾಗಿದ್ದ ಅವರು ಈ ಭಾಗದಲ್ಲಿ ಶೈಕ್ಷಣಿಕ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದರು.

ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಟ್ರಸ್ಟ್ ಉಪಾಧ್ಯಕ್ಷ ಸಿದ್ರಾಮ ಪಾರಾ, ಕಾರ್ಯದರ್ಶಿ ಶಿವಶಂಕರ ಶೆಟಕಾರ್, ಆಡಳಿತ ಮಂಡಳಿ ಸದಸ್ಯರಾದ ಸತೀಶ ಪಾಟೀಲ, ವೀರಭದ್ರಪ್ಪ ಬುಯ್ಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.