ADVERTISEMENT

ನರಸಿಂಹ ದೇವರ ಅವತರಣ ಉತ್ಸವಕ್ಕೆ ಭಕ್ತರ ದಂಡು

ಒಂದು ವಾರದಿಂದ ನಡೆದಿರುವ ಧಾರ್ಮಿಕ ಕಾರ್ಯಕ್ರಮ

ಚಂದ್ರಕಾಂತ ಮಸಾನಿ
Published 13 ಮೇ 2022, 14:25 IST
Last Updated 13 ಮೇ 2022, 14:25 IST
ಬೀದರ್‌ ಹೊರವಲಯದಲ್ಲಿರುವ ನರಸಿಂಹ ಝರಣಿ ಗುಹಾದೇಗುಲಕ್ಕೆ ಹರಿದು ಬಂದ ಯಾತ್ರಾರ್ಥಿಗಳು
ಬೀದರ್‌ ಹೊರವಲಯದಲ್ಲಿರುವ ನರಸಿಂಹ ಝರಣಿ ಗುಹಾದೇಗುಲಕ್ಕೆ ಹರಿದು ಬಂದ ಯಾತ್ರಾರ್ಥಿಗಳು   

ಬೀದರ್: ಕೋವಿಡ್‌ ಅವಧಿಯಲ್ಲಿ ಎರಡು ವರ್ಷ ಧಾರ್ಮಿಕ ಕಾರ್ಯಗಳಿಗೆ ಬಿದ್ದಿದ್ದ ಕಡಿವಾಣ ತೆರವುಗೊಂಡ ನಂತರ ನಗರದ ಹೊರ ವಲಯದಲ್ಲಿರುವ ಝರಣಿ ನರಸಿಂಹನ ಗುಹಾ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.

ದೇಗುಲದಲ್ಲಿ ವೈಶಾಖ ಶುಕ್ಲ ಪಕ್ಷ ಷಷ್ಠಿಯ ದಿನ ಧಾರ್ಮಿಕ ಕಾರ್ಯಗಳು ಪ್ರಾರಂಭವಾಗಿದ್ದು, ನಿತ್ಯ ಪೂಜೆ, ಅರ್ಚನೆ ಹಾಗೂ ಅಭಿಷೇಕ ನಡೆದಿವೆ. ಮೇ 14 ರಂದು ಬೆಳಿಗ್ಗೆ 6 ಗಂಟೆಗೆ ಅಭಿಷೇಕ, 11 ಗಂಟೆಗೆ ಗಣ ಹೋಮ, ವಿಷ್ಣುಯಾಗ, ನವಗ್ರಹ ಪೂಜೆ ಹಾಗೂ ಸಂಜೆ 7.04ಕ್ಕೆ ನರಸಿಂಹ ದೇವರ ಅವತರಣ ಉತ್ಸವ ಜರುಗಲಿದೆ.

ಶನಿವಾರ ಭಕ್ತರಿಂದ ಮಹಾಪ್ರಸಾದ ವಿತರಣೆ, ಭಾನುವಾರ ಮೇ 15ರಂದು ದೇವಸ್ಥಾನ ಮಂಡಳಿಯಿಂದ ನರಸಿಂಹ ದೇವರಿಗೆ ನೈವೇದ್ಯ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ನರಸಿಂಹ ಝರಣಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾವ್‌ ಕುಲಕರ್ಣಿ ತಿಳಿಸಿದ್ದಾರೆ.

ADVERTISEMENT

ಗುಹಾ ದೇವಾಲಯದಲ್ಲಿ ಉಗ್ರ ನರಸಿಂಹನ ಮೂರ್ತಿ ಇದೆ. ಎದೆಮಟ್ಟಕ್ಕೆ ಇರುವ ನೀರಿನಲ್ಲಿ 103 ಮೀಟರ್‌ ನಡೆದು ಹೋಗಿ ಭಕ್ತರು ಗುಹೆಯಲ್ಲಿರುವ ಉದ್ಭವ ಮೂರ್ತಿಯ ದರ್ಶನ ಪಡೆಯುತ್ತಿದ್ದಾರೆ. ಬೆಳಿಗ್ಗೆ 6 ರಿಂದ 11 ಗಂಟೆ ವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಹಂತ ಹಂತವಾಗಿ ಒಳಗೆ ಬಿಡಲಾಗುತ್ತಿದೆ. ಹಟ್ಟಿ ಗೋಲ್ಡ್‌ ಮೈನ್‌ ಕಂಪನಿ ಗುಹೆಯಲ್ಲಿ ಶುದ್ಧ ಗಾಳಿ ಪೂರೈಕೆ ವ್ಯವಸ್ಥೆ ಮಾಡಿದ್ದರಿಂದ ಭಕ್ತರು ನೆಮ್ಮದಿಯಿಂದ ದೇವರ ದರ್ಶನ ಪಡೆದು ಬರಲು ಸಾಧ್ಯವಾಗುತ್ತಿದೆ. ‘

ದೇಗುಲಕ್ಕೆ ಪುರಾತನ ಇತಿಹಾಸ

ಗುಹಾ ದೇಗುಲ ಕ್ರಿ.ಪೂ. 400ಕ್ಕಿಂತಲೂ ಹಿಂದಿನ ಇತಿಹಾಸ ಹೊಂದಿದೆ. ಧರ್ಮ ಸಂಸ್ಥಾಪನೆಗಾಗಿ ಹಿರಣ್ಯಕಶಿಪು ಕೊಲ್ಲಲು ವೈಶಾಖ ಶುಕ್ಲ ಪಕ್ಷ ಷಷ್ಠಿಯ ದಿನ ವಿಷ್ಣು ಉಗ್ರ ನರಸಿಂಹನ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದನೆಂದು ಪುರಾಣಗಳಲ್ಲಿ ಹೇಳಲಾಗಿದೆ.

ಹಿರಣ್ಯಕಶಿಪುವಿನ ಸಂಹಾರದ ನಂತರ ನರಸಿಂಹನು ಅಸುರನಾದ ಜಲಾಸುರನ ವಧೆ ಮಾಡಲು ಮುಂದಾಗುತ್ತಾನೆ. ಜಲಾಸುರನು ಸೋಲು ಒಪ್ಪಿಕೊಂಡು ಕೊನೆಯುಸಿರೆಳೆಯುವ ಪೂರ್ವದಲ್ಲಿ ನರಸಿಂಹನ ಪಾದ ಹಿಡಿದು ಇಲ್ಲಿಯೇ ವಾಸ ಮಾಡಲು ಕೇಳಿಕೊಂಡು ನರಸಿಂಹನ ಪಾದದಿಂದ ನೀರಾಗಿ ಹರಿಯಲು ಶುರು ಮಾಡುತ್ತಾನೆ ಎಂದು ಹೇಳಲಾಗುತ್ತದೆ. ನರಸಿಂಹನ ಪಾದದ ಅಡಿಯಿಂದ ಝರಿಯಾಗಿ ಹರಿಯಲು ಶುರು ಮಾಡಿದ್ದರಿಂದ ಇದಕ್ಕೆ ಝರಣಿ ನರಸಿಂಹ ಎಂದು ಕರೆಯಲಾಯಿತು ಎನ್ನುವುದು ಇತಿಹಾಸ.

ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಿಂದ ನವ ವಧು ವರರು ಈ ಗುಹಾ ದೇಗುಲಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಮಕ್ಕಳಾಗದ ದಂಪತಿ ಸಂತಾನ ಪ್ರಾಪ್ತಿಗಾಗಿ ನರಸಿಂಹ ದೇವರಲ್ಲಿ ಹರಕೆ ಹೊರುತ್ತಾರೆ. ಹೊಸದಾಗಿ ಮದುವೆಯಾದ ಮಹಿಳೆ ಹೆರಿಗೆಗೆ ತವರಿಗೆ ಹೋಗುವ ಮೊದಲು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವೂ ಇದೆ. ಮಗು ಜನಿಸಿದ ನಂತರ ಇಲ್ಲಿಗೆ ಬಂದು ಮಗುವಿನ ಜಾವಳ ತೆಗೆದು ಅಥವಾ ತೊಟ್ಟಿಲು ಬಿಟ್ಟು ಹರಕೆ ತೀರಿಸುತ್ತಾರೆ.

ಘಟ್ಟ ಸ್ಥಾಪನೆ:

ನರಸಿಂಹ ಝರಣಿಯಲ್ಲಿ ಮೇ 7ರಂದು ಘಟ್ಟ ಸ್ಥಾಪನೆ ಮಾಡಲಾಗಿದೆ. ಒಂದು ವಾರದಿಂದ ಅರ್ಚಕರು ಉಪವಾಸ ವ್ರತ ಕೈಕೊಂಡಿದ್ದು, ಶನಿವಾರ ವ್ರತ ಮುಕ್ತಾಯಗೊಳಿಸಲಿದ್ದಾರೆ ಎಂದು ದೇಗುಲದ ಅರ್ಚಕ ಭೂಷಣ ಪಾಠಕ್ ಹೇಳುತ್ತಾರೆ.

ಪ್ರತಿ ಅರ್ಧ ಗಂಟೆಯೊಂದು ಬಸ್:

ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದಿಂದ ನಗರದ ಹೊರವಲಯದಲ್ಲಿರುವ ನರಸಿಂಹ ಝರಣಿ ದೇವಾಲಯದ ವರೆಗೂ ನಗರ ಸಾರಿಗೆಯ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಮಲ್ಕಾಪುರ ಹಾಗೂ ಸುಲ್ತಾನಪುರ ಬಸ್‌ಗಳು ಇದೇ ಮಾರ್ಗವಾಗಿಯೇ ಸಂಚರಿಸುತ್ತಿವೆ. ಬಸ್‌ ನಿಲ್ದಾಣದಿಂದ ಪ್ರತಿ ಅರ್ಧ ಗಂಟೆಯೊಂದು ಬಸ್ ಹೋಗುತ್ತಿದೆ. ಆಟೊರಿಕ್ಷಾಗಳು ದೇವಸ್ಥಾನದ ವರೆಗೆ ಬಂದು ಹೋಗುತ್ತಿವೆ.

ದೇವಸ್ಥಾನದ ಬಳಿ ಖಾಸಗಿ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಪುಷ್ಕರಣಿಯಲ್ಲಿ ನೀರು ಸಂಗ್ರಹಿಸಲಾಗಿದೆ. ಸ್ನಾನದ ನಂತರ ಮಹಿಳೆಯರು ಬಟ್ಟೆ ಬದಲಾಯಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಶೌಚಾಲಯಗಳು ಸಹ ಇವೆ. ಭಕ್ತರು ಇದರ ಸದುಪಯೋಗ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.