ADVERTISEMENT

ನಾರಾಯಣರಾವ್ ಬಸವಣ್ಣನ ಅನುಯಾಯಿ

ಶ್ರದ್ಧಾಂಜಲಿ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:02 IST
Last Updated 27 ಅಕ್ಟೋಬರ್ 2020, 4:02 IST
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಬಿ.ನಾರಾಯಣರಾವ್ ಶ್ರದ್ಧಾಂಜಲಿ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಬಿ.ನಾರಾಯಣರಾವ್ ಶ್ರದ್ಧಾಂಜಲಿ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು   

ಬಸವಕಲ್ಯಾಣ: ‘ಅಕಾಲಿಕ ನಿಧನರಾದ ಶಾಸಕ ಬಿ.ನಾರಾಯಣರಾವ್ ಬಸವಣ್ಣ, ಅಂಬೇಡ್ಕರ್, ಶಾಹು ಮಹಾರಾಜ್, ಜ್ಯೋತಿಬಾ ಫುಲೆ ಅವರ ನಿಜ ಅನುಯಾಯಿ ಆಗಿದ್ದರು. ಸಮಾನತೆಯ ಪ್ರತೀಕವಾಗಿ ನೂತನ ಅನುಭವ ಮಂಟಪ ನಿರ್ಮಾಣದ ಕನಸು ಅವರದ್ದಾಗಿತ್ತು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಬಿ.ನಾರಾಯಣರಾವ್ ಅವರ ಸಮಾಧಿ ಸ್ಥಳದಲ್ಲಿ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ನಾರಾಯಣರಾವ್ ಕೋಲಿ ಹಾಗೂ ಗೊಂಡ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಲು ಅನೇಕ ಸಲ ಬೆಂಗಳೂರಿಗೆ ನಿಯೋಗದೊಂದಿಗೆ ಬಂದಿದ್ದರು. ಈ ಎರಡೂ ಸಮುದಾಯ ದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಆಗಲೇ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಮುಂದೆಯೂ ಪ್ರಯತ್ನ ನಡೆಸುತ್ತೇನೆ. ಜಿಲ್ಲೆಯ ಶಾಸಕರುಗಳು ಕೂಡಿಕೊಂಡು ಇಲ್ಲಿ ಬಿ.ನಾರಾಯಣರಾವ್ ಅವರ ಸ್ಮಾರಕ ನಿರ್ಮಿಸಬೇಕು’ ಎಂದು ಕೇಳಿಕೊಂಡರು.

ADVERTISEMENT

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾಡನಾಡಿ, ‘ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಎಸ್.ಎಂ.ಕೃಷ್ಣ ಇದ್ದಾಗ ರಚಿಸಲಾಯಿತು. ಧರ್ಮಸಿಂಗ್ ಅದ್ಯಾದೇಶ ಹೊರಡಿಸಿದರು. ಸಿದ್ದರಾಮಯ್ಯನವರು ಗೋ.ರು.ಚನ್ನಬಸಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿ ₹600 ಕೋಟಿಯ ವರದಿ ಸಿದ್ಧಪಡಿಸಿದರು. ಇದಕ್ಕೂ ಮೊದಲು ಮಾಜಿ ಸಚಿವ ಭೀಮಣ್ಣ ಖಂಡ್ರೆ ಈಗಿರುವ ಅನುಭವ ಮಂಟಪ ನಿರ್ಮಿಸಿದರು’ ಎಂದರು.

‘ನಾನು ಹಲವಾರು ದಶಕಗಳವರೆಗೆ ಪ್ರತಿ ವರ್ಷ ಶರಣಕಮ್ಮಟ ಆಯೋಜಿಸಿ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯಿಸುತ್ತ ಬಂದಿದ್ದೇನೆ. ಬಿ.ನಾರಾಯಣರಾವ್ ಕೂಡ ರಾಷ್ಟ್ರಪತಿ ಅವರಿಂದ ನೂತನ ಅನುಭವ ಮಂಟಪದ ಶಂಕುಸ್ಥಾಪನೆ ನೆರವೇರಿಸುವ ಯೋಚನೆಯಲ್ಲಿದ್ದರು. ಇಲ್ಲಿನ ವಿಕಾಸಕ್ಕೆ ಬಿಜೆಪಿ ನಯಾಪೈಸೆ ನೀಡಿಲ್ಲ. ಆದರೂ, ಆ ಪಕ್ಷದವರು
ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಬಿಗರ ಚೌಡಯ್ಯ ಪೀಠದ ಶಾಂತಲಿಂಗ ಭೀಸ್ಮಾಚಾರ್ಯ ಸ್ವಾಮೀಜಿ ಹಾಗೂ ಕೋಲಿ ಸಮಾಜ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈಶ್ವರ ಬೊಕ್ಕೆ ಮಾತನಾಡಿ, ನಾರಾಯಣರಾವ್ ಅವರ ಕುಟುಂಬದವರಿಗೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಲು ಆಗ್ರಹಿಸಿದರು.

ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಶಾಸಕರಾದ ರಹೀಂಖಾನ್, ಅಜಯಸಿಂಗ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ್‌, ಮೌಲಾನಾ ಅಬ್ಬಾಸ್ ಮಾತನಾಡಿದರು. ಬಿ.ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ, ಪುತ್ರ ಗೌತಮ, ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ಸಿದ್ದರಾಮಯ್ಯನವರು ಬಿ.ನಾರಾಯಣ ರಾವ್ ಸಮಾಧಿಗೆ ಪುಷ್ಪಗಳನ್ನು ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.